ಮೃತಪಟ್ಟವರ ಖಾತೆಗೂ ಕೂಡ ನರೇಗಾ ಹಣ ಪಾವತಿ!

  • ತಾಲೂಕಿನ ಮಾಲಂಗಿ ಗ್ರಾಪಂನಲ್ಲಿ ಮೃತಪಟ್ಟವರ ಖಾತೆಗೂ ಕೂಡ ನರೇಗಾ ಯೋಜನೆಯ ಕೂಲಿ ಹಣ
  •  ಹಣ ಪಾವತಿಸುವ ಮೂಲಕ ಅಕ್ರಮ ನಡೆಸಲಾಗಿದೆ 
Fraud In MGNREGA Payment in periyapatna snr

 ಪಿರಿಯಾಪಟ್ಟಣ (ಆ.09):  ತಾಲೂಕಿನ ಮಾಲಂಗಿ ಗ್ರಾಪಂನಲ್ಲಿ ಮೃತಪಟ್ಟವರ ಖಾತೆಗೂ ಕೂಡ ನರೇಗಾ ಯೋಜನೆಯ ಕೂಲಿ ಹಣ ಪಾವತಿಸುವ ಮೂಲಕ ಅಕ್ರಮ ನಡೆಸಲಾಗಿದೆ ಎಂದು ಮಾಜಿ ಗ್ರಾಪಂ ಸದಸ್ಯ ದೊಡ್ಡಯ್ಯ ಆರೋಪಿಸಿದ್ದಾರೆ.

ಅಣ್ಣೇಗೌಡ ಎಂಬವರು 2018ರಲ್ಲಿ ಮೃತಪಟ್ಟಿದ್ದಾರೆ, ಆದರೆ ಅವರ ಬ್ಯಾಂಕ್‌ ಖಾತೆಗೆ 2020ನೇ ಸಾಲಿನಲ್ಲಿ ಕೂಲಿ ಹಣ ಜಮಾ ಮಾಡಲಾಗಿದೆ.

ಮುಮ್ಮಡಿ ಕಾವಲು ಗ್ರಾಮದಲ್ಲಿ ವಾಸಿಸುವ ದಲಿತ ಕುಟುಂಬಗಳು ನರೇಗಾ ಯೋಜನೆಯಡಿಯಲ್ಲಿ ಕೆಲಸ ನೀಡುವಂತೆ ಅರ್ಜಿ ನೀಡಿದರೆ ಗ್ರಾಪಂ ಪಿಡಿಓ ಮತ್ತು ಅಧ್ಯಕ್ಷರು ಗ್ರಾಮದ ಕೆರೆ ಅಭಿವೃದ್ಧಿಯನ್ನು ಜೆಸಿಬಿ ಯಂತ್ರ ಬಳಸಿ ಕಾಮಗಾರಿ ನಡೆಸಿ ಅಕ್ರಮವೆಸಗಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಆರೋಪಿಸಿದರು.

ಅಕ್ರಮದ ದಾಖಲೆಗಳನ್ನು ತಾಪಂ ಇಓ ಅವರಿಗೆ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ, ಇದಲ್ಲದೆ ಹಲವಾರು ಕಾಮಗಾರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿದ್ದು, ಇವುಗಳ ಸಮರ್ಪಕ ತನಿಖೆ ನಡೆಸುವ ಮೂಲಕ ಸೂಕ್ತ ನ್ಯಾಯ ದೊರಕಿಸಿ ಕೊಡದಿದ್ದಲ್ಲಿ ತಾಪಂ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ವಲಸೆ ತಡೆಗೆ ದುಡಿಯೋಣ ಬಾ ಅಭಿಯಾನ : ಪ್ರತಿ ಕುಟುಂಬಕ್ಕೆ 60 ದಿನ ಉದ್ಯೋಗ

ಗ್ರಾಪಂ ಮಾಜಿ ಉಪಾಧ್ಯಕ್ಷ ಮಧು, ಗ್ರಾಮಸ್ಥರಾದ ರಾಮು, ಉಮೇಶ, ನಟರಾಜ, ಜವರಾಯಿ ಇದ್ದರು.

ಅಕ್ರಮ ನಡೆದಿದ್ದರೆ ಶಿಸ್ತು ಕ್ರಮ-ಇಒ:  ತಾಪಂ ಇಒ ಸಿ.ಆರ್‌. ಕೃಷ್ಣಕುಮಾರ್‌ ಅವರು ಪ್ರತಿಕ್ರಿಯಿಸಿ ಮುಮ್ಮಡಿಕಾವಲು ಗ್ರಾಮದಲ್ಲಿ ನರೇಗಾ ಯೋಜನೆಯಡಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವಂತೆ ದೊಡ್ಡಯ್ಯ ಅವರು ಮನವಿ ಮಾಡಿದ್ದು, ತಕ್ಷಣ ಗ್ರಾಪಂ ಪಿಡಿಒ ಹಾಗೂ ಆಡಳಿತ ವರ್ಗಕ್ಕೆ ಕಾಮಗಾರಿ ಪ್ರಾರಂಭಿಸುವಂತೆ ಸೂಚಿಸಲಾಗಿದೆ, ಮೃತಪಟ್ಟವರ ಖಾತೆಗೆ ನರೇಗಾ ಕೂಲಿ ಹಣ ಸಂದಾಯ ಮಾಡಿರುವ ಬಗ್ಗೆ ಯಾವುದೇ ದೂರು ಬಂದಿಲ್ಲ, ಈ ವಿಷಯ ಮಾಧ್ಯಮದ ಮೂಲಕ ತಿಳಿದಿದ್ದು, ಕೂಡಲೇ ಪರಿಶೀಲಿಸಿ ಅಕ್ರಮ ನಡೆದಿದ್ದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Latest Videos
Follow Us:
Download App:
  • android
  • ios