ಹುಬ್ಬಳ್ಳಿ(ಡಿ.23): ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಬೆಂಗಳೂರಲ್ಲಿ ಡಿ. 28ಕ್ಕೆ ಪಕ್ಷಾತೀತ ಪ್ರತಿಭಟನೆ ನಡೆಸಲಾಗುವುದು. ಶಾಂತಿಯುತವಾಗಿ ಆಂದೋಲನ ಹಮ್ಮಿಕೊಳ್ಳಲಾಗುವುದು ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಇಬ್ರಾಹಿಂ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲಿಗೆ ಬೆಂಗಳೂರಲ್ಲಿ ಪ್ರತಿಭಟನೆ ನಡೆಸಲಾಗುವುದು. ಬಳಿಕ ರಾಜ್ಯದ ಉಳಿದೆಡೆಯೂ ಪ್ರತಿಭಟನೆ ನಡೆಸಲಾಗುವುದು. ಕೇಂದ್ರ ಸರ್ಕಾರ ತಪ್ಪು ಮಾಡಿದೆ. ತನ್ನ ತಪ್ಪನ್ನು ಒಪ್ಪಿಕೊಂಡು ತಿದ್ದಿಕೊಳ್ಳುವುದಿಲ್ಲವೋ ಅಲ್ಲಿವರೆಗೂ ಹೋರಾಟ ಮುಂದುವರಿಸಲಾಗುವುದು ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹುಬ್ಬಳ್ಳಿಯಲ್ಲೂ ಪ್ರತಿಭಟನೆ ನಡೆಸಲಾಗುವುದು. ಆದರೆ ಇನ್ನೂ ದಿನಾಂಕ ನಿಗದಿಪಡಿಸಿಲ್ಲ. ಈ ನಿಟ್ಟಿನಲ್ಲಿ ಮೊದಲ ಹಂತದಲ್ಲಿ ಮುಸ್ಲಿಂ ಮುಖಂಡರೊಂದಿಗೆ ಸಭೆ ನಡೆಸಲಾಗುತ್ತಿದೆ. ನಂತರ ಉಳಿದ ಸಮಾಜದ ಮುಖಂಡರೊಂದಿಗೆ ಸಭೆ ನಡೆಸಿ ಪ್ರತಿಭಟನೆಯ ದಿನಾಂಕ ನಿಗದಿಪಡಿಸಲಾಗುವುದು. ಇದು ಯಾವುದೇ ಪಕ್ಷಕ್ಕೆ ಸಂಬಂಧಿಸಿದ ಪ್ರತಿಭಟನೆಯಲ್ಲ. ಸಂವಿಧಾನವನ್ನೂ, ದೇಶವನ್ನೂ ಉಳಿಸುವುದಕ್ಕಾಗಿ ಈ ಪ್ರತಿಭಟನೆ. ಪಕ್ಷಾತೀತವಾಗಿ ಮಾಡಲಾಗುವುದು ಎಂದು ನುಡಿದರು.

ಒತ್ತಡಕ್ಕೆ ಮಣಿಯಬೇಡಿ:

ಪ್ರತಿಭಟನೆ ನಡೆಸುವುದು ಎಲ್ಲರ ಹಕ್ಕು. ಆದರೆ ಕೇಂದ್ರ ಗೃಹ ಸಚಿವ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಒತ್ತಡಕ್ಕೆ ಮಣಿದು ರಾಜ್ಯದಲ್ಲಿ ಪ್ರತಿಭಟನೆ ಹಕ್ಕನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ, ಗೃಹ ಸಚಿವ ಬೊಮ್ಮಾಯಿ ಆ ರೀತಿ ಕೆಲಸ ಮಾಡಬೇಡಿ. ರಾಜ್ಯದಲ್ಲಿ ಅಮಿತ್‌ ಶಾ ಇರಲ್ಲ; ಬರಲ್ಲ. ನಾವು ನೀವೇ ಇಲ್ಲಿರೋದು. ಈ ಜನರಿಗೋಸ್ಕರ ಈ ರೀತಿ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡಬೇಡಿ ಎಂದರು.

ನ್ಯಾಯಾಂಗ ತನಿಖೆ:

ಮಂಗಳೂರಲ್ಲಿ ನಡೆದ ಗಲಭೆ, ಗೋಲಿಬಾರ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಂಗ ತನಿಖೆ ನಡೆಸಲಿ. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗಲಿ, ಘಟನೆಯ ಸತ್ಯಾಂಶ ಹೊರಬರಲಿ ಎಂದು ಆಗ್ರಹಿಸಿದ ಅವರು, ಖಾದರ್‌ ಹೇಳಿಕೆಯಿಂದ ಅಲ್ಲಿ ಗಲಾಟೆ ಉಂಟಾಗಿದ್ದರೆ ಅವರಿಗೂ ಶಿಕ್ಷೆಯಾಗಲಿ. ಆದರೆ ಮೊದಲು ತನಿಖೆ ನಡೆಸಲಿ ಎಂದು ಒತ್ತಾಯಿಸಿದರು. ಗಲಭೆಯಲ್ಲಿ ಮೃತಪಟ್ಟಇಬ್ಬರು ಯುವಕರ ಕುಟುಂಬಗಳಿಗೆ ತಲಾ . 25 ಲಕ್ಷ ಪರಿಹಾರ ಘೋಷಿಸಲಿ ಎಂದು ಆಗ್ರಹಿಸಿದರು.

ಗಂಭೀರ ಸ್ಥಿತಿ:

ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಸಾಕಷ್ಟುಜನರಿಗೆ ಕೆಲಸವಿಲ್ಲ. ಗಂಭೀರ ಸಮಸ್ಯೆಗಳಿಂದ ದೇಶ ಬಳಲುತ್ತಿದೆ. ಅದನ್ನು ಪರಿಹರಿಸಲು ಮೋದಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು, ಎನ್‌ಆರ್‌ಸಿ, ಸಿಸಿಎಗಳನ್ನು ಕೈಬಿಡಬೇಕು ಎಂದರು.

ಈ ಕಾಯ್ದೆಗಳ ಬಗ್ಗೆ ಸರಿಯಾಗಿ ಸ್ಪಷ್ಟನೆ ಇಲ್ಲ. ಗೃಹ ಸಚಿವರು ಸರಿಯಾದ ಮಾಹಿತಿ ನೀಡುತ್ತಿಲ್ಲ. ಮೊದಲು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಯ್ದೆಗಳ ಅರಿವು ಮೂಡಿಸಬೇಕು. ಸಮಗ್ರ ಮಾಹಿತಿ ನೀಡಬೇಕು. ಹಿಂದೆ ನಿಮ್ಮ ಅಪ್ಪ ಎಲ್ಲಿದ್ದ. ಎಲ್ಲಿ ಹುಟ್ಟಿದ ಎಂಬ ದಾಖಲೆಗಳನ್ನೆಲ್ಲ ಕೇಳಿದರೆ ಎಲ್ಲಿಂದ ಕೊಡೋದು ಎಂದು ಪ್ರಶ್ನಿಸಿದರು.

ಜನನ ಪ್ರಮಾಣ ಪತ್ರ:

ನಾನು ರಾಣಿಬೆನ್ನೂರಿನ ಐರಣಿಯಲ್ಲಿ ಹುಟ್ಟಿದ್ದೇನೆ. ನನ್ನ ಜನ್ಮ ಪ್ರಮಾಣ ಪತ್ರವೇ ಸಿಗುತ್ತಿಲ್ಲ. ಐರಣಿಗೆ ಹೋಗಿ ಕೇಳಿದರೆ ಮೇಡ್ಲೇರಿಗೆ ಕಳುಹಿಸುತ್ತಾರೆ. ಮೇಡ್ಲೇರಿಗೆ ಹೋದರೆ ಐರಣಿಗೆ ಕಳುಹಿಸುತ್ತಾರೆ. ಇನ್ನೂ ನಾನು ಹೇಗೆ ಮಾಡಲಿ ಎಂದು ಪ್ರಶ್ನಿಸಿದ ಅವರು, ಕೇವಲ ಆಸ್ಸಾಂ ರಾಜ್ಯವೊಂದರಲ್ಲಿ ಪೌರತ್ವ ಕಾಯ್ದೆಗಾಗಿ . 30 ಸಾವಿರ ಕೋಟಿ ಖರ್ಚಾಗಿದೆ. ಎಲ್ಲ ರಾಜ್ಯಗಳಲ್ಲಿ ಈ ರೀತಿ ಖರ್ಚಾದರೆ ಹೇಗೆ ನಿಭಾಯಿಸುತ್ತಾರೆ ಎಂದು ಪ್ರಶ್ನಿಸಿದರು.
ದೇಶದಲ್ಲಿ ಸಂವಿಧಾನ ಕಿತ್ತುಹಾಕಿ ಮನುಸ್ಮೃತಿ ತರಲು ಕೇಂದ್ರ ಸರ್ಕಾರ ಹೊರಟಿದೆ. ಎಲ್ಲರೂ ಶೂದ್ರರಾಗುತ್ತೇವೆ. ಯಡಿಯೂರಪ್ಪ, ಶೆಟ್ಟರ್‌, ಬೊಮ್ಮಾಯಿ, ನಾವು ಎಲ್ಲರೂ ಶೂದ್ರರಾಗುತ್ತೇವೆ ಎಂದರು.

ಅಖಂಡ ಭಾರತವಾಗಲಿ:

ಪಾಕಿಸ್ತಾನ, ಬಾಂಗ್ಲಾ, ಭಾರತ ಸೇರಿ ಅಖಂಡ ಭಾರತದ ಕನಸು ನಾನು ಕಾಣುತ್ತಿದ್ದೇನೆ. ಆ ರೀತಿಯಾಗಲಿ, ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಬದುಕೋಣ ಎಂಬುದು ನನ್ನ ಕನಸು ಎಂದರು. ಸುದ್ದಿಗೋಷ್ಠಿಯಲ್ಲಿ ರಜತ್‌ ಉಳ್ಳಾಗಡ್ಡಿಮಠ, ಶಾಹಜಾನ ಮುಜಾಹೀದ, ಮಜರಖಾನ್‌, ಫಾರುಖ ಕಾಲೆಬುಡ್ಡೆ, ಮಣಿಕಂಠ ಗುಡಿಹಾಳ, ಮೊಹೀನ ಕಾಶ್ಮಿನವರ, ಶಿವ ಬೆಂಡಿಗೇರಿ, ಮೌಲಾ ಕುಮತ್ಕರ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.