ಧಾರವಾಡ(ಡಿ.14): ಶೈಕ್ಷಣಿಕ ಸಂಸ್ಥೆಗಳಿಗೆ ಅನುದಾನ ಒದಗಿಸುವ ಕುರಿತು ಧಾರವಾಡದಲ್ಲಿ ಕಳೆದ 9 ದಿನಗಳಿಂದ ಧರಣಿ ನಡೆಸುತ್ತಿದ್ದು, ಈ ಕುರಿತು ಡಿ. 14ರಂದು ಶಿಕ್ಷಣ ಸಚಿವರು ಸಭೆ ಕರೆದಿದ್ದು, ಅಲ್ಲಿನ ತೀರ್ಮಾನಗಳ ನಂತರದಲ್ಲಿ ಮುಂದಿನ ಹೆಜ್ಜೆ ಇಡಲಾಗುವುದು ಎಂದು ವಿಪ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ. 

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1987-1995ರ ಸಂಸ್ಥೆಗಳಿಗೆ ಅನುದಾನ ಒದಗಿಸಲಾಗಿದೆ. ಆದರೆ, ಈಗ 1995ರ ನಂತರದ ಸಂಸ್ಥೆಗಳಿಗೆ ಅನುದಾನ ಒದಗಿಸುವುದು ಕಷ್ಟ ಸಾಧ್ಯ. ಸಣ್ಣ-ಪುಟ್ಟ ಸಮಸ್ಯೆಗಳಿಗೆ ಪರಿಹಾರ ಒದಗಿಸಬಹುದು. ಆದರೆ, ಪ್ರಮುಖ ಬೇಡಿಕೆಗಳಿಗೆ ಮನ್ನಣೆ ಸಿಗುವುದು ಕಷ್ಟ ಸಾಧ್ಯ. ಆದರೂ ಸಭೆಯಲ್ಲಿ ಪ್ರಸ್ತಾಪ ಮಾಡುತ್ತೇವೆ. ಡಿ. 15ರ ವರೆಗೆ ಹೋರಾಟ ಮಾಡಬೇಕಾ ಎಂಬುದನ್ನು ಸೋಮವಾರದ ಸಭೆಯಲ್ಲಿ ತೀರ್ಮಾನಿಸುತ್ತೇವೆ. ಒಂದು ವೇಳೆ ಸಭೆ ಯಶಸ್ವಿ ಆಗದೇ ಹೋದಲ್ಲಿ ಶಾಲೆ ಶುರುವಾದಾಗ ಸರ್ಕಾರಕ್ಕೆ ಬಿಸಿ ತಟ್ಟಿಸಲಾಗುವುದು ಎಂದು ಎಚ್ಚರಿಸಿದರು.

ಹುಬ್ಬಳ್ಳಿ: ಪ್ರಿಯಕರ ಬೈದಿದ್ದಕ್ಕೆ ಯುವತಿ ಆತ್ಮಹತ್ಯೆ

ವಿಧಾನ ಪರಿಷತ್‌ ಅಧಿವೇಶನ ಕುರಿತು ಪ್ರಸ್ತಾಪಿಸಿದ ಹೊರಟ್ಟಿ, ಡಿ. 15ರ ವರೆಗೂ ವಿಧಾನ ಪರಿಷತ್‌ ಅಧಿವೇಶನ ನಡೆಸಬೇಕಾದ ಸಭಾಪತಿಗಳು ತಮ್ಮ ಅಧಿಕಾರ ಬಳಸಿ ಅಧಿವೇಶನವನ್ನು ಮೊಟಕುಗೊಳಿಸಿದರು. ಇದೀಗ ಸರ್ಕಾರ ಆಜ್ಞೆ ಹೊರಡಿಸಿದೆ ಎಂದು ಡಿ. 14ರಂದು ವಿಧಾನ ಪರಿಷತ್‌ ಸಭೆಯನ್ನು ನಡೆಸಲು ತೀರ್ಮಾನಿಸಿದ್ದಾರೆ. ಇದು ಕರ್ನಾಟಕದ ವಿಧಾನ ಪರಿಷತ್‌ ಇತಿಹಾಸದಲ್ಲಿಯೇ ಮೊದಲು ಎಂದ ಹೊರಟ್ಟಿ, ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ ಹಿನ್ನೆಲೆಯಲ್ಲಿ ಸಭಾಪತಿಗಳು ಈ ಸ್ಥಾನವನ್ನು ಉಪಾಧ್ಯಕ್ಷರಿಗೆ ಬಿಟ್ಟುಕೊಡಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಹೊರಟ್ಟಿ ಸಭಾಪತಿಗಳಾಗಲಿ-ಕೋನರಡ್ಡಿ

ವಿಧಾನ ಪರಿಷತ್ತಿನಲ್ಲಿ ಜಿಡಿಎಸ್‌ನ ಬೆಂಬಲವಿಲ್ಲದೇ ಬಿಜೆಪಿ ಅಥವಾ ಕಾಂಗ್ರೆಸ್‌ ಸದಸ್ಯ ಸಭಾಪತಿಗಳಾಗುವಂತಿಲ್ಲ. ಹೀಗಾಗಿ ಈಗಾಗಲೇ ರಾಜಕೀಯದಲ್ಲಿ ಸಾಕಷ್ಟು ಅನುಭವ ಹೊಂದಿರುವ ಹೊರಟ್ಟಿ ಅವರನ್ನೇ ಸಭಾಪತಿ ಮಾಡಬೇಕೆಂದು ಪಕ್ಷದ ವರಿಷ್ಠರಾದ ಎಚ್‌.ಡಿ. ದೇವೇಗೌಡ ಮತ್ತು ಎಚ್‌.ಡಿ. ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಲಾಗಿದೆ ಎಂದು ಎನ್‌.ಎಚ್‌. ಕೋನರಡ್ಡಿ ಹೇಳಿದರು.