ಹುಬ್ಬಳ್ಳಿ(ನ.16): ರಾಜ್ಯದಲ್ಲಿ ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆಯಾದ ಬೆನ್ನಲ್ಲೆ ಲಿಂಗಾಯತರಿಗೆ ಶೇ.16ರಷ್ಟು ಮೀಸಲಾತಿ ನೀಡುವಂತೆ ಕೂಗು ಎದ್ದಿದೆ. ಮಹಾರಾಷ್ಟ್ರದಲ್ಲಿ ಮರಾಠಾ ಸಮಾಜಕ್ಕೆ ಶೇ.16ರಷ್ಟು ಮೀಸಲಾತಿ ನೀಡಿದಂತೆ ಕರ್ನಾಟಕದಲ್ಲಿ ಲಿಂಗಾಯತರಿಗೆ ಅಷ್ಟೇ ಮೀಸಲಾತಿ ನೀಡುವಂತೆ ವಿಧಾನ ಪರಿಷತ್‌ ಹಿರಿಯ ಸದಸ್ಯ, ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಬಸವರಾಜ ಹೊರಟ್ಟಿ ಧ್ವನಿ ಎತ್ತಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ರಾಜ್ಯದ ಹಿಂದೂ ಮರಾಠಾ ಸಮಾಜಕ್ಕೆ ಪ್ರಾಧಿಕಾರ ರಚಿಸಿದ್ದು ಸ್ವಾಗತಾರ್ಹ. ಕರ್ನಾಟಕದಲ್ಲಿ ಲಿಂಗಾಯತರಿಗೆ ಶೇ.16ರಷ್ಟು ಮೀಸಲಾತಿ ಕೊಡಬೇಕೆಂದು ಸಮುದಾಯ ಸಾಕಷ್ಟು ಬಾರಿ ಮನವಿ ನೀಡಿದೆ. ಆದರೂ ಇಲ್ಲಿವರೆಗೆ ಯಾವುದೇ ಕ್ರಮ ಜರುಗಿಸಿಲ್ಲ ಎಂದು ತಿಳಿಸಿದ್ದಾರೆ. 

'ತಮಿಳ್ನಾಡು ಮಾದರಿ ರಾಜ್ಯದಲ್ಲೂ ಜಾರಿಯಾಗಲಿ'

ಲಿಂಗಾಯತರಲ್ಲಿ ಶೇ.70ರಷ್ಟು ಬಡವರು, ಕೂಲಿಕಾರರು ಇದ್ದಾರೆ. ಈ ಸಮಾಜಕ್ಕೆ ಮೀಸಲಾತಿ ನ್ಯಾಯಯುತವಾಗಿ ಸಿಗಬೇಕಿದೆ. ಈ ಬಗ್ಗೆ ಇಚ್ಛಾಶಕ್ತಿಯಿಂದ ಸಿಎಂ ಕಾರ್ಯಪ್ರವೃತ್ತರಾಗಬೇಕಿದೆ ಎಂದು ಹೊರಟ್ಟಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.