ಹುಬ್ಬಳ್ಳಿ(ನ.12): ಗಾಂಧೀಜಿ ಮತ್ತು ವಿವೇಕಾನಂದರ ಹಿಂದುತ್ವ ನಮಗೆ ಬೇಕಿದೆಯೇ ಹೊರತು ಗೋಡ್ಸೆ ಮತ್ತು ಗೋಲ್ವಾಳಕರ ಹಿಂದುತ್ವವಲ್ಲ. ಖಾಕಿ ಚಡ್ಡಿ ಕರಿ ಟೋಪಿ ಹಾಕಿದವರು ದೇಶದಲ್ಲಿ ಸಾಕಷ್ಟುಅನಾಹುತ ಮಾಡಿದ್ದು, ಅದನ್ನು ತಡೆಯಲು ಎಲ್ಲರೂ ಒಂದಾಗಬೇಕು ಎಂದು ವಿಧಾನಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಹೇಳಿದ್ದಾರೆ. 

ಅವರು ಬುಧವಾರ ಧಾರವಾಡ ಗ್ರಾಮೀಣ ಜಿಲ್ಲಾ ಹಾಗೂ ಮಹಾನರ ಜಿಲ್ಲಾ ಕಾಂಗ್ರೆಸ್‌ ಸಮಿತಿಯಿಂದ ಗ್ರಾಮೀಣ ಕಾಂಗ್ರೆಸ್‌ ಕಾರ್ಯಾಲಯದಲ್ಲಿ ನಡೆದ ಧಾರವಾಡಕ್ಕೆ ಗಾಂಧೀಜಿ ಭೇಟಿ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗೋಡ್ಸೆಯ ಅನುಯಾಯಿಗಳನ್ನು ಪ್ರಬಲವಾಗಿ ಬೆಳೆಸುವ ನಿಟ್ಟಿನಲ್ಲಿ ಕೆಲ ಪ್ರಬುದ್ಧರೂ ವ್ಯವಸ್ಥಿತವಾಗಿ ಸಹಾಯ ಮಾಡುತ್ತಿದ್ದಾರೆ. ಗಾಂಧೀಜಿ ಅವರ ಹಲವು ಕನಸನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನುಚ್ಚುನೂರು ಮಾಡುತ್ತಿವೆ. ಕರಿ ಟೋಪಿ ಖಾಕಿ ಚಡ್ಡಿ ಹಾಕಿಕೊಂಡು ದೇಶದಲ್ಲಿ ಸಾಕಷ್ಟುಅನಾಹುತ ಮಾಡಿದ್ದಾರೆ. ಇನ್ನುಮುಂದೆ ಅಂತಹ ಅನಾಹುತಗಳನ್ನು ತಡೆಯಲು ಕಾಂಗ್ರೆಸ್‌ ಕಾರ್ಯಕರ್ತರು ಮುಂದಾಗಬೇಕು ಎಂದರು.

ಸೋತಿದ್ದೇವೆ, ಆತ್ಮಾವಲೋಕನ ಮಾಡಬೇಕು: ಹರಿಪ್ರಸಾದ್‌

ಹಿಂದೂ ಧರ್ಮಕ್ಕೂ ಆರ್‌ಎಸ್‌ಎಸ್‌ಗೂ ಯಾವುದೇ ಸಂಬಂಧವಿಲ್ಲ. ನಮಗೆ ಬೇಕಾಗಿರುವುದು ಗಾಂಧೀಜಿ ಮತ್ತು ವಿವೇಕಾನಂದರ ಹಿಂದುತ್ವ ಹೊರತು ಗೋಡ್ಸೆ ಮತ್ತು ಗೋಲ್ವಾಳಕರ ಅವರ ಹಿಂದುತ್ವ ಅಲ್ಲ. ಇತಿಹಾಸದಲ್ಲಿ ಸರ್ವಾಧಿಕಾರಿ ಹಿಟ್ಲರ್‌ ಸಮಯದಲ್ಲಿ ಮಾತ್ರ ಇಂತ ಸಮವಸ್ತ್ರ ಕಂಡಿದ್ದು ಬಿಟ್ಟರೆ ಮತ್ತೆಲ್ಲೂ ನೋಡಿಲ್ಲ ಎಂದು ಅವರು ವ್ಯಂಗ್ಯವಾಡಿದರು. ಬಿಜೆಪಿಯವರು ಕೇವಲ ತೋರಿಕೆಗೆ ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಅವರನ್ನ ಜಪಿಸಿ ದೊಡ್ಡ ಪುತ್ಥಳಿ ನಿರ್ಮಿಸಿದ್ದಾರೆ. ಅದರಿಂದ ನೆಹರು ಪ್ರಾಮುಖ್ಯ ಚಿಕ್ಕದಾಗುತ್ತದೆ ಎಂಬುದು ಅವರ ಭ್ರಮೆಯಷ್ಟೆ ಎಂದರು.

ತ್ರಿವರ್ಣ ಧ್ವಜವನ್ನು ಆರ್‌ಎಸ್‌ಎಸ್‌ ತಮ್ಮ ಕಚೇರಿಯಲ್ಲಿ ಹಾರಿಸುತ್ತಿರಲಿಲ್ಲ. ಅವರೆ ನಿಜವಾದ ದೇಶ ದ್ರೋಹಿಗಳು. ಅಂತವರು ಈಗ ದೇಶಪ್ರೇಮದ ಪಾಠ ಮಾಡುತ್ತಿರುವುದು ಹಾಸ್ಯಾಸ್ಪದ. ಪ್ರತಿಯೊಬ್ಬ ಕಾಂಗ್ರೆಸ್‌ ನಾಯಕರು ಯಾವುದೇ ಅಧಿಕಾರ ಮತ್ತು ಹುದ್ದೆಗೆ ಆಸೆ ಪಡದೆ, ನಿಜವಾದ ಹಿಂದೂ ಧರ್ಮದ ರಕ್ಷಣೆಗೆ ನಿಲ್ಲಬೇಕಿದೆ ಎಂದರು.

ಹಿಂದಿ ಹೇರಿಕೆಯನ್ನು ವಿರೋಧಿಸುವ ಕೆಲಸ ಆಗಬೇಕು. ಕಾಂಗ್ರೆಸ್‌ ನಾಯಕರು ಮತ್ತು ಕಾರ್ಯಕರ್ತರು ಕಡ್ಡಾಯವಾಗಿ ಖಾದಿ ಧರಿಸಬೇಕು. ಬುದ್ಧ, ಅಶೋಕ, ಅಕ್ಬರ್‌ ಬಳಿಕ ದೇಶದಲ್ಲಿ ಮಹಾತ್ಮ ಗಾಂಧೀಜಿಯವರೆ ಪ್ರಮುಖ ನಾಯಕರು ಎನಿಸಿಕೊಂಡಿದ್ದಾರೆ. ಅವರ ಸಿದ್ಧಾಂತದ ಮೇಲೆ ಕಾಂಗ್ರೆಸ್‌ ಸ್ಥಾಪನೆಯಾಗಿದೆ.

ಭಾಷಾತಜ್ಞ ಜಿ.ಎನ್‌. ದೇವಿ ಮಾತನಾಡಿ, ದೇಶದಲ್ಲಿ ಈಗ ಪ್ರಜಾಪ್ರಭುತ್ವ ಒತ್ತಡದಲ್ಲಿ ಇದೆ. ನಮ್ಮದು ಒಕ್ಕೂಟ ರಾಷ್ಟ್ರ. ಕೇಂದ್ರವು ತಪ್ಪು ದಾರಿ ಹಿಡಿಯುತ್ತಿದ್ದರೆ ಅದನ್ನು ವಿರೋಧಿಸಿ ಸರಿದಾರಿಗೆ ತರಬೇಕು. ಕೆಲವರು ರಾಷ್ಟ್ರೀಯತೆಯ ಮಾಸ್ಕ್‌ ಹಾಕಿಕೊಂಡು ಮಾಡಬಾರದ ಕಾರ್ಯ ಮಾಡುತ್ತಿದ್ದಾರೆ. ಅವರಿಗೆ ರಾಷ್ಟ್ರೀಯತೆ ಎಂದರೇನು ಎಂಬುದನ್ನು ಸರಿಯಾಗಿ ಮನವರಿಕೆ ಮಾಡಿಕೊಡಬೇಕು. ದೇಶದ ಮೂಲ ನಿವಾಸಿಗಳ ಕುರಿತು ನಮ್ಮ ಅಸ್ತಿತ್ವ, ಅಸ್ಮಿತೆ ಕುರಿತು ಜಾಗೃತಿ ಇಟ್ಟುಕೊಳ್ಳಬೇಕು. ಕಾಂಗ್ರೆಸ್‌ನಲ್ಲಿ ಮುಖಂಡರು ತಪ್ಪು ನಿರ್ಣಯ ಕೈಗೊಂಡರೆ ಅದನ್ನು ನೇರವಾಗಿ ಹೇಳಬಹುದು. ಆದರೆ ಆರ್‌ಎಸ್‌ಎಸ್‌, ಬಿಜೆಪಿಯಲ್ಲಿ ತಪ್ಪಾದರೆ ಹೇಳಲು ಅವಕಾಶವಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಶಾಸಕಿ ಕುಸುಮಾವತಿ ಶಿವಳ್ಳಿ, ವಿಧಾನ ಪರಿಷತ್‌ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ವಿಪ ಸದಸ್ಯ ಶ್ರೀನಿವಾಸ ಮಾನೆ, ಕಾಂಗ್ರೆಸ್‌ ಗ್ರಾಮೀಣ ಅಧ್ಯಕ್ಷ ಅನಿಲಕುಮಾರ ಪಾಟೀಲ್‌, ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಪ್‌ ಹಳ್ಳೂರ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮಾಜಿ ಅಧ್ಯಕ್ಷ ಸದಾನಂದ ಡಂಗನವರ, ಮೋಹನ ಅಸುಂಡಿ, ಇಮ್ರಾನ್‌ ಯಲಿಗಾರ, ಮೋಹನ ಹಿರೇಮನಿ, ಎಂ.ಎಸ್‌. ಅಕ್ಕಿ, ನವೀದ್‌ ಮುಲ್ಲಾ ಸೇರಿ ಇತರರಿದ್ದರು.