ಬೆಂಗಳೂರು[ಡಿ.17]: ಉಪ ಚುನಾವಣೆಯಲ್ಲಿ ಯಾರು ಕೆಲಸ ಮಾಡಿದ್ದಾರೆ ಯಾರು ಮಾಡಿಲ್ಲ ಎಂಬುದು ಮುಖ್ಯವಲ್ಲ. ನಾವು ಸೋತಿದ್ದೇವೆ ಎಂಬ ವಿಚಾರವನ್ನು ಒಪ್ಪಿಕೊಳ್ಳಬೇಕು. ಆತ್ಮಾವಲೋಕನ ಮಾಡಬೇಕು ಎಂದು ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್‌ ಹೇಳಿದ್ದಾರೆ.

ಬೆಂಗಳೂರಿನ ಸಿದ್ದರಾಮಯ್ಯ ಅವರ ಕಾವೇರಿ ಅಧಿಕೃತ ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಬಳಿಕ ಅವರು ಮಾತನಾಡಿದರು.

ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ರಾಜೀನಾಮೆಯನ್ನು ನನಗೆ ನೀಡಿಲ್ಲ. ಹೈಕಮಾಂಡ್‌ಗೆ ರಾಜೀನಾಮೆ ನೀಡಿದ್ದು, ಹೈಕಮಾಂಡ್‌ ಮುಂದೆ ಯಾರನ್ನು ನೇಮಕ ಮಾಡಬೇಕು ಎನ್ನುವುದನ್ನು ತೀರ್ಮಾನ ಮಾಡುತ್ತದೆ. ನಾವು ರಾಜಕಾರಣ ಮಾಡಬೇಕಾಗಿರುವುದು ಮಾಧ್ಯಮಗಳ ಮುಂದೆ ಅಲ್ಲ. ರಾಜಕಾರಣ ಅದರ ಪಾಡಿಗೆ ಅದು ನಡೆಯುತ್ತಿರುತ್ತದೆ. ನಾವು ಹೈಕಮಾಂಡ್‌ ಹೇಳಿದಂತೆ ನಡೆಯುತ್ತೇವೆ ಅಷ್ಟೇ ಎಂದರು.

ಸುದ್ದಿಗಳಿಗೆ ತೆರೆ ಎಳೆಯಲು ಸಿದ್ದರಾಮಯ್ಯ ಭೇಟಿ:

ಸಿದ್ದರಾಮಯ್ಯ ಅವರ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಾಧ್ಯಮಗಳಲ್ಲಿ ಹಲವು ವಿಚಾರಗಳು ಬರುತ್ತಿದ್ದವು. ಅದಕ್ಕೆಲ್ಲಾ ತೆರೆ ಎಳೆಯುವ ಸಲುವಾಗಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದೇನೆ ಎಂದು ಹೇಳಿದರು. ಸಿದ್ದರಾಮಯ್ಯ ಅವರನ್ನು ಅನ್ಯ ಪಕ್ಷಗಳ ನಾಯಕರು ಭೇಟಿಯಾದರೂ ಸ್ವಪಕ್ಷೀಯರೇ ಭೇಟಿಯಾಗುತ್ತಿಲ್ಲ ಎಂಬ ವರದಿಗಳಿಗೆ ಹರಿಪ್ರಸಾದ್‌ ಈ ಪ್ರತಿಕ್ರಿಯೆ ನೀಡಿದರು.

ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಸೋತಿದೆ. ಯಾವುದೇ ಕಾರಣಕ್ಕೆ ಸೋತರೂ ಸೋಲು ಸೋಲೇ. ಕೆಲಸ ಮಾಡುವುದು, ಬಿಡುವುದು ಬೇರೆ ವಿಚಾರ. ಸೋತಿದ್ದೇವೆ ಎಂಬುದನ್ನು ಒಪ್ಪಿಕೊಂಡು ಆತ್ಮಾವಲೋಕನ ಮಾಡಿಕೊಂಡು ಮುಂದೆ ಹೋಗಬೇಕಾಗುತ್ತದೆ ಎಂದು ಹೇಳಿದರು.