ಮಂಗಳೂರು(ಜೂ.28): ಉಳ್ಳಾಲ ಕ್ಷೇತ್ರದಲ್ಲಿ ನಾಲ್ಕು ದಿನದಿಂದ ಕೊರೋನಾ ಸೋಂಕು ಹೆಚ್ಚಾಗುತ್ತಿದೆ. ಒಂದೇ ಮನೆಯ 17 ಮಂದಿಗೆ ಹಾಗೂ ಮೂರು ಮಂದಿ ಪೊಲೀಸರಿಗೆ ಸೋಂಕು ತಗಲಿದ್ದು, ಪೊಲೀಸರು ಸಮಾಜ ಸೇವೆಯಲ್ಲಿ ಎಲ್ಲ ಕಡೆಗೆ ತೆರಳುತ್ತಿದ್ದು ಸೋಂಕಿತ ಪೊಲೀಸರಿಗೂ ಹಾಗೂ ಅವರ ಕುಟುಂಬದವರಿಗೆ ಸರ್ಕಾರ ಸೂಕ್ತ ವ್ಯವಸ್ಥೆ ಮಾಡಬೇಕು. ಆರೋಗ್ಯ ಇಲಾಖೆ ಉಳ್ಳಾಲದಲ್ಲಿ ರ‍್ಯಾಂಡಮ್‌ ತಪಾಸಣೆಗೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಯು.ಟಿ. ಖಾದರ್‌ ಆಗ್ರಹಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಬೇಕಾದಲ್ಲಿ ಮನೆಯಲ್ಲಿ ಕೂರಬಹುದು, ಆದರೆ ಪೊಲೀಸರು ಹಾಗಲ್ಲ, ಅವರು ನಿರಂತರ ಸೇವೆಯಲ್ಲಿ ಇದ್ದು ಜನರ ಸಂಪರ್ಕದಲ್ಲಿ ಇರುತ್ತಾರೆ. ಆದ್ದರಿಂದ ಅವರಿಗೆ ಪ್ರತ್ಯೇಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು. ಈಗ ಸೋಂಕು ತಗಲಿದ ಪೊಲೀಸರನ್ನು ಎಲ್ಲಿಗೆ ಕರೆದುಕೊಂಡು ಹೋಗಬೇಕು ಎಂಬ ಗೊಂದಲವನ್ನು ನಿವಾರಿಸಬೇಕು ಎಂದರು.

ಬೆಂಗ್ಳೂರಲ್ಲಿ ಸ್ಮಶಾನಕ್ಕಾಗಿ ಹುಡುಕಾಟ!

ಹೊರಗಿನಿಂದ ಬರುವವರ ತಪಾಸಣೆ ನಡೆಸಿದಾಗ ಮೊದಲಿಗೆ ಸೋಂಕು ಇರುವುದು ನೆಗೆಟಿವ್‌ ಬರುತ್ತಿದೆ. 2 ದಿನದಲ್ಲಿ ಬಂದ ವರದಿಯನ್ನು ನೋಡಿ ಅವರು ಮನೆಯಿಂದ ಹೊರಗೆ ಹೋಗಿ ಎಲ್ಲರೊಂದಿಗೆ ಬೆರೆಯುತ್ತಿದ್ದಾರೆ. ಆದರೆ 5 ಅಥವಾ 12ನೇ ದಿನ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆಯೂ ಹೆಚ್ಚಿದ್ದು ಹೊರಗಿನಿಂದ ಬಂದವರನ್ನು 14 ದಿನ ಕಡ್ಡಾಯವಾಗಿ ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಬೇಕು ಎಂದು ಅವರು ಆಗ್ರಹಿಸಿದರು.

ಮಂಗಳೂರು: ಬೋಟ್‌ ಮೂಲಕ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ

ಉಳ್ಳಾಲ ಪ್ರದೇಶದ ಎಲ್ಲಾ ಮೀನು ಮಾರಾಟಗಾರರಿಗೆ, ಬೀದಿ ಬದಿ ವ್ಯಾಪಾರಿಗಳಿಗೆ, ರಿಕ್ಷಾ,ಟೆಂಪೋ, ಲಾರಿ, ಬಸ್‌ ಚಾಲಕ- ನಿರ್ವಾಹಕರಿಗೆ ಕಡ್ಡಾಯವಾಗಿ ಉಚಿತ ಸೋಂಕು ತಪಾಸಣೆ ನಡೆಸಬೇಕು. ಈಗಾಗಲೇ ನಗರದಾದ್ಯಂತ ಸ್ಯಾನಿಟೈಝರ್‌ ನಡೆಸಲಾಗುತ್ತಿದೆ. ಪೊಲೀಸರಿಗೆ ಕೊರೋನಾ ತಪಾಸಣೆ ನಡೆಸಲಾಗಿದೆ. ಜನರು ಕಡ್ಡಾಯವಾಗಿ ಮಾಸ್ಕ್‌ ಧರಿಸುವಂತೆ ಪ್ರೇರೇಪಿಸಲಿ. ಅದಕ್ಕಾಗಿ ಧಾರ್ಮಿಕ ಮುಖಂಡರ ನಾಯಕತ್ವದಲ್ಲಿ ಕಾರ್ಯಪಡೆ ರಚಿಸಿದ್ದು, ಇದಕ್ಕೆ ಸಂಘ-ಸಂಸ್ಥೆಗಳು ಸಹಕರಿಸಲಿವೆ ಎಂದು ಶಾಸಕ ಯು.ಟಿ. ಖಾದರ್‌ ಹೇಳಿದರು.