ರಾಜಕೀಯವಾಗಿ ಪರಸ್ಪರ ಕೆಸರೆರಚಾಟ ನಡೆಸುವ ಎರಡು ಪಕ್ಷಗಳ ಶಾಸಕರಿಬ್ಬರು ಬುಧವಾರ ಪಕ್ಷಭೇದ ಮರೆತು ಸಿಟಿ ರೌಂಡ್ಸ್‌ ಹಾಕಿದ್ದಾರೆ. ಮಂಗಳೂರು ಶಾಸಕ ಯುಟಿ ಖಾದರ್‌ ಹಾಗೂ ಮಂಗಳೂರು ದಕ್ಷಿಣ ಕ್ಷೇತ್ರ ವೇದವ್ಯಾಸ ಕಾಮತ್‌ ಅವರು ಸಿಟಿ ರೌಂಡ್ಸ್‌ ಹಾಕಿ ಮಾದರಿಯಾಗಿದ್ದಾರೆ. 

ಮಂಗಳೂರು(ಏ.09): ರಾಜಕೀಯವಾಗಿ ಪರಸ್ಪರ ಕೆಸರೆರಚಾಟ ನಡೆಸುವ ಎರಡು ಪಕ್ಷಗಳ ಶಾಸಕರಿಬ್ಬರು ಬುಧವಾರ ಪಕ್ಷಭೇದ ಮರೆತು ಸಿಟಿ ರೌಂಡ್ಸ್‌ ಹಾಕಿದ್ದಾರೆ. ಮಂಗಳೂರು ಶಾಸಕ ಯುಟಿ ಖಾದರ್‌ ಹಾಗೂ ಮಂಗಳೂರು ದಕ್ಷಿಣ ಕ್ಷೇತ್ರ ವೇದವ್ಯಾಸ ಕಾಮತ್‌ ಅವರು ಸಿಟಿ ರೌಂಡ್ಸ್‌ ಹಾಕಿ ಮಾದರಿಯಾದರು.

ಕನ್ನಡಪ್ರಭ ಸೋದರ ಸಂಸ್ಥೆಯಾದ ಸುವರ್ಣ ನ್ಯೂಸ್‌ ಆಹ್ವಾನದ ಮೇರೆಗೆ ಇವರಿಬ್ಬರು ತಮ್ಮ ತಮ್ಮ ದ್ವಿಚಕ್ರ ವಾಹನದಲ್ಲಿ ಮಂಗಳೂರಿನಲ್ಲಿ ಸುತ್ತಾಡಿ ಲಾಕ್‌ಡೌನ್‌ ಪರಿಸ್ಥಿತಿಯ ಅವಲೋಕನ ನಡೆಸಿದರು. ನಗರದ ಸಕ್ರ್ಯೂಟ್‌ ಹೌಸ್‌ನಿಂದ ಹೊರಟ ಶಾಸಕರು ಅಲ್ಲೇ ಹೊರಗೆ ಗಸ್ತು ನಿರತರಾಗಿದ್ದ ಪೊಲೀಸ್‌ ಸಿಬ್ಬಂದಿಯ ಯೋಗಕ್ಷೇಮ ವಿಚಾರಿಸಿದರು. ಮಾತ್ರವಲ್ಲದೆ ಅವರ ಕಾರ್ಯಕ್ಕೆ ಶಹಬ್ಬಾಸ್‌ ಗಿರಿಯನ್ನೂ ನೀಡಿದರು. ನಗರದೊಳಗೆ ಅತ್ಯಂತ ತುರ್ತು ಅವಶ್ಯಕತೆ ಇದ್ದವರನ್ನು ಮಾತ್ರ ಒಳ ಬಿಡುವಂತೆ ಸೂಚನೆ ನೀಡಿದರು.

ರಾಜ್ಯಾ​ದಂತ ಲಾಕ್‌ಡೌನ್‌ ಮುಂದುವರಿಸಿ: ದೇವಿ​ಶೆಟ್ಟಿ ನೇತೃ​ತ್ವದ ಸಮಿತಿ ಶಿಫಾ​ರಸು!

ಬಳಿಕ ಅಲ್ಲಿಂದ ಬಿಜೈ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುವವರಿಗೆ ಸುಖಾಸುಮ್ಮನೆ ತಿರುಗಾಡದಂತೆ ತಿಳುವಳಿಕೆ ನೀಡಿದರು. ಅರ್ಧ ತೆರೆದಿದ್ದ ಅಂಗಡಿಗಳಿಗೆ ಕಡ್ಡಾಯವಾಗಿ ಆದೇಶ ಪಾಲನೆ ಮಾಡುವಂತೆ ಸೂಚಿಸಿದರು.

ಬಳ್ಳಾಲ್‌ಬಾಗ್‌ನ ರಸ್ತೆ ಬದಿಯಲ್ಲಿ ತರಕಾರಿ ಮಾರುತ್ತಿದ್ದವರಿಗೆ ಬೆಲೆ ಏರಿಕೆ ಮಾಡದಂತೆ ಸಲಹೆ ನೀಡಿದರು. ಅಲ್ಲಿಂದ ಪಿವಿಎಸ್‌ ಜಂಕ್ಷನ್‌ ವರೆಗೆ ಆಗಮಿಸುವ ಮೂಲಕ ಶಾಸಕರು ನಗರದ ಲಾಕ್‌ಡೌನ್‌ ಸ್ಥಿತಿಗತಿಯ ಬಗ್ಗೆ ಅರಿತುಕೊಂಡರು.