ಕೊಬ್ಬರಿ ಬೆಂಬಲ ಬೆಲೆಗೆ ಕೇಂದ್ರ ಸಚಿವರಿಗೆ ಶಾಸಕ ಸುರೇಶಗೌಡ ಮನವಿ
ಜಿಲ್ಲೆಯ ಕೊಬ್ಬರಿ ಬೆಳೆಗಾರರ ರಕ್ಷಣೆಗೆ ಕೇಂದ್ರ ಸರ್ಕಾರ ಧಾವಿಸಬೇಕು ಎಂದು ಕೇಂದ್ರ ಕೃಷಿ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರನ್ನು ಗ್ರಾಮಾಂತರ ಶಾಸಕ ಬಿ. ಸುರೇಶಗೌಡ ಮನವಿ ಮಾಡಿದ್ದಾರೆ.
ತುಮಕೂರು : ಜಿಲ್ಲೆಯ ಕೊಬ್ಬರಿ ಬೆಳೆಗಾರರ ರಕ್ಷಣೆಗೆ ಕೇಂದ್ರ ಸರ್ಕಾರ ಧಾವಿಸಬೇಕು ಎಂದು ಕೇಂದ್ರ ಕೃಷಿ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರನ್ನು ಗ್ರಾಮಾಂತರ ಶಾಸಕ ಬಿ. ಸುರೇಶಗೌಡ ಮನವಿ ಮಾಡಿದ್ದಾರೆ.
ದೆಹಲಿಯಲ್ಲಿ ಶೋಭಾ ಕರಂದ್ಜಾಜೆ ಅವರನ್ನು ಭೇಟಿ ಮಾಡಿದ ಸುರೇಶಗೌಡ ಕಷ್ಟದಲ್ಲಿರುವ ತೆಂಗು ಬೆಳೆಗಾರರ ರಕ್ಷಣೆಗೆ ಕೇಂದ್ರ ಸರ್ಕಾರ ಧಾವಿಸಬೇಕು. ಕೂಡಲೇ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಮನವಿ ಮಾಡಿದರು.
ಕೊಬ್ಬರಿಗೆ ಪ್ರೋತ್ಸಾಹ ಬೆಲೆ ನೀಡದೆ ಕನಿಷ್ಠ ಬೆಲೆಯಲ್ಲಿ ಮಾರಾಟ ಮಾಡುತ್ತಿರುವ ರೈತ ಅಕ್ಷರಶಃ ಸಂಕಷ್ಟದ ಸುಳಿಗೆ ಸಿಲುಕಿದ್ದಾನೆ. ತೆಂಗು/ಕೊಬ್ಬರಿ ಬೆಳೆಗಾರರ ರಕ್ಷಣೆಗೆ ಧಾವಿಸದ ರಾಜ್ಯ ಸರ್ಕಾರದ ವಿರುದ್ಧ ಬೆಳಗಾವಿ ಅಧಿವೇಶನದಲ್ಲೂ ಕೂಡ ಸುರೇಶ್ ಗೌಡ ಗುಡುಗಿದ್ದರು.
ಈ ಸಂಬಂಧ ನ್ಯಾಷನಲ್ ಅಗ್ರಿಕಲ್ಚರಲ್ ಕೋಪರೇಷನ್ ಮಾರ್ಕೆಟಿಂಗ್ ಫೆಡ್ ಆಫ್ ಇಂಡಿಯಾ ಲಿಮಿಟೆಡ್ ನ ಅಧ್ಯಕ್ಷರನ್ನು ಭೇಟಿ ಮಾಡಿ ಈ ಬಗ್ಗೆ ಮತ್ತಷ್ಟು ಚರ್ಚಿಸೋಣ ಎಂದರು.
ಈ ಹಿನ್ನೆಲೆಯಲ್ಲಿ ಜನವರಿ ಮಾಹೆಯಲ್ಲಿ ತುಮಕೂರು ಮತ್ತು ತಿಪಟೂರಿನಲ್ಲಿ ನಫೆಡ್ ಕೇಂದ್ರವನ್ನು ಪ್ರಾರಂಭಿಸುವಂತೆ ಈ ಸಂದರ್ಭದಲ್ಲಿ ಸುರೇಶ್ ಗೌಡರು ಒತ್ತಾಯಿಸಿದರು.
15 ಸಾವಿರ ಘೋಷಿಸಲು ಡಿಮ್ಯಾಂಡ್
ತಿಪಟೂರು : ಚುನಾವಣೆ ಸಂದರ್ಭದಲ್ಲಿ ಕ್ವಿಂಟಲ್ ಕೊಬ್ಬರಿಗೆ 15ಸಾವಿರ ರು. ನಿಗದಿ ಮಾಡುವುದಾಗಿ ಭರವಸೆ ಕೊಟ್ಟ ಕಾಂಗ್ರೆಸ್ ಸರ್ಕಾರ ಈಗ ಕೊಬ್ಬರಿಗೆ 250 ರು. ಪ್ರೋತ್ಸಾಹ ಧನ ಹೆಚ್ಚಿಸುವ ಮೂಲಕ ರೈತರಿಗೆ ಭಿಕ್ಷೆ ಹಾಕುತ್ತಿದೆ. ಈ ಭಿಕ್ಷೆ ಹಾಕಿ ರೈತರಿಗೆ ಅವಮಾನ ಮಾಡುವ ಬದಲು ಕೂಡಲೇ ನಾಫೆಡ್ ಕೇಂದ್ರ ಪ್ರಾರಂಭಿಸಿ ಕ್ವಿಂಟಲ್ ಕೊಬ್ಬರಿಗೆ 15ಸಾವಿರ ರು. ಘೋಷಿಸಬೇಕೆಂದು ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಕ್ಕೆ ಗ್ಯಾರಂಟಿ ಯೋಜನೆಯ ಬಗ್ಗೆ ಜಾಹೀರಾತು ನೀಡಲು, ಸಚಿವರು ಕಾರು ಖರೀದಿಸಲು ಕೋಟ್ಯಂತರ ರು. ಹಣವಿರುತ್ತದೆ. ಆದರೆ, ರೈತರಿಂದಲೇ ಅಧಿಕಾರಕ್ಕೆ ಬಂದ ಇವರಿಗೆ ರೈತರ ಕೊಬ್ಬರಿ ಕೊಳ್ಳಲು ಹಣವಿಲ್ಲದಿರುವುದು ವಿಪರ್ಯಾಸ.
ಕೊಬ್ಬರಿ ಬೆಲೆ ಏಳು ಸಾವಿರಕ್ಕೆ ಇಳಿಕೆಯಾಗಿದ್ದು ಜಿಲ್ಲೆ, ತಾಲೂಕುಗಳಲ್ಲಿ ಪ್ರತಿಭಟನೆ, ಧರಣಿ, ಚಳವಳಿ ಮಾಡಿದರೂ ಸರ್ಕಾರಕ್ಕೆ ಕಿಂಚಿತ್ತೂ ಕಾಳಜಿ ಇಲ್ಲ.
ಈಗ ಬೆಳಗಾವಿ ಅಧಿವೇಶನದಲ್ಲಿ ಕ್ವಿಂಟಲ್ ಕೊಬ್ಬರಿಗೆ 250 ರು. ಪ್ರೋತ್ಸಾಹ ಧನ ನೀಡುತ್ತೇವೆಂದು ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ.
ಕಳೆದ ಬಾರಿಯೂ ಇದೇ ರೀತಿ ಹೇಳಿ ಏಕಾಏಕಿ ನಫೆಡ್ ಕೇಂದ್ರಗಳನ್ನೇ ಮುಚ್ಚಲಾಯಿತು. ಘೋಷಿಸಿದ ಪ್ರೋತ್ಸಾಹ ಧನ ಯಾವೊಬ್ಬ ರೈತನಿಗೂ ಸಿಗಲಿಲ್ಲ. ಈಗಲೂ ಇದೇ ಹುನ್ನಾರ ಮಾಡುತ್ತಾ ಸರ್ಕಾರ ರೈತರ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ. ಈ ಭಾಗದ ರೈತರು ಹೈನುಗಾರಿಕೆಯನ್ನೇ ನಂಬಿ ಜೀವನ ನಡೆಸುತ್ತಿದ್ದು, ಮಳೆ ಇಲ್ಲದೆ ಸಂಕಷ್ಟ ಅನುಭವಿಸುವಂತಾಗಿದೆ. ಈಗ ದಿಢೀರನೇ ಕೊಬ್ಬರಿ ಬೆಲೆ ಇಳಿಕೆಯಾಗಿರುವುದು ಮತ್ತಷ್ಟು ಆಘಾತವನ್ನುಂಟು ಮಾಡಿದೆ. ಕೇವಲ ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸುವ ಬಗ್ಗೆಯೇ ಸರ್ಕಾರ ಚಿಂತಿಸುತ್ತಿದ್ದು, ಇದರ ಬದಲು ಕೊಬ್ಬರಿಯ ಬೆಲೆಯನ್ನಾದರೂ ಹೆಚ್ಚಿಸಿದ್ದರೂ ರೈತರಿಗೆ ಅನುಕೂಲಕರವಾಗುತ್ತಿತ್ತು. ಹಾಗಾಗಿ, ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹಾಕಿ ಕೊಬ್ಬರಿ ಬೆಲೆಯನ್ನು 15ಸಾವಿರಕ್ಕೆ ಹೆಚ್ಚಳ ಮಾಡಬೇಕು. ಸರ್ಕಾರ ರೈತರನ್ನು ಮರೆತರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರೈತರೇ ತಕ್ಕ ಪಾಠ ಕಲಿಸಲಿದ್ದಾರೆಂದು ಎಚ್ಚರಿಕೆ ನೀಡಿದರು.