Asianet Suvarna News Asianet Suvarna News

ಕೊಬ್ಬರಿಗೆ ಬೆಂಬಲ ಬೆಲೆಗಾಗಿ ಅರಸೀಕೆರೆಯಿಂದ ತುಮಕೂರಿಗೆ ಪಾದಯಾತ್ರೆ: ಎಚ್‌ಡಿಕೆ

ರೈತರ ವಿಚಾರದಲ್ಲಿ ಸರಕಾರದ ಕಣ್ಣು ತೆರೆಸಲು ಅರಸೀಕೆರೆಯಿಂದ ತುಮಕೂರಿಗೆ ಪಾದಯಾತ್ರೆ ಹಮ್ಮಿಕೊಳ್ಳುವ ನಿರ್ಧಾರ ಕೈಗೊಳ್ಳಲಾಗುವುದು. ಇನ್ನು ಬಿಜೆಪಿ ಜೊತೆ ಮೈತ್ರಿ ಇದೆ ಎಂಬ ಕಾರಣಕ್ಕೆ ಮೃಧು ಧೋರಣೆ ಇರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. 

Padayatra from Arsikere to Tumakuru support price for Coconut Says HD Kumaraswamy gvd
Author
First Published Dec 11, 2023, 8:31 PM IST

ಹಾಸನ (ಡಿ.11): ರೈತರ ವಿಚಾರದಲ್ಲಿ ಸರಕಾರದ ಕಣ್ಣು ತೆರೆಸಲು ಅರಸೀಕೆರೆಯಿಂದ ತುಮಕೂರಿಗೆ ಪಾದಯಾತ್ರೆ ಹಮ್ಮಿಕೊಳ್ಳುವ ನಿರ್ಧಾರ ಕೈಗೊಳ್ಳಲಾಗುವುದು. ಇನ್ನು ಬಿಜೆಪಿ ಜೊತೆ ಮೈತ್ರಿ ಇದೆ ಎಂಬ ಕಾರಣಕ್ಕೆ ಮೃಧು ಧೋರಣೆ ಇರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪ್ರತಿ ಜನವರಿಯಿಂದ ಆರು ತಿಂಗಳು ನ್ಯಾಫೆಡ್ ಮೂಲಕ ಕೊಬ್ಬರಿ ಖರೀದಿ ಮಾಡಲಾಗುತ್ತದೆ. ಕಳೆದ ವರ್ಷವೂ ನ್ಯಾಫೆಡ್ ಮೂಲಕ ಆರು ತಿಂಗಳು ಬೆಂಬಲ ಬೆಲಯೊಂದಿಗೆ ಖರೀದಿ ಮಾಡಲಾಗಿತ್ತು. 

ಖರೀದಿ ಮಾಡುವಾಗ ಕೊಬ್ಬರಿ ಕ್ವಾಲಿಟಿ ಬಗ್ಗೆ ರೈತರಿಗೆ ಮನವರಿಕೆ ಮಾಡಿದ್ದಾರೆ. ಸುಮಾರು ೫೦ ಸಾವಿರ ಮೆಟ್ರಿಕ್ ಟನ್ ಕೊಬ್ಬರಿ ಖರೀದಿ ಮಾಡಿದ್ದಾರೆ. ಅಧಿಕಾರಕ್ಕೆ ಬಂದರೆ ಕ್ವಿಂಟಲ್ ಗೆ ೧೫ ಸಾವಿರ ರು. ಬೆಂಬಲ ಬೆಲೆ ಕೊಡುತ್ತೇವೆ ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದರು ಎಂದರು. ಈ ಹಿಂದೆ ಖರೀದಿ ಆಗಿದ್ದ ಕೊಬ್ಬರಿಗೆ ಸಹಾಯ ಧನವನ್ನು ರಾಜ್ಯ ಸರ್ಕಾರ ನೀಡುತ್ತಿಲ್ಲ. ಮುಂದೆ ಖರೀದಿ ಮಾಡುವುದಕ್ಕೆ ೧೨೫೦ ರು. ನೀಡಲು ತೀರ್ಮಾನಿಸಿದ್ದಾರೆ. ನಾಳಿನ ಸದನದಲ್ಲಿ ಈ ಬಗ್ಗೆ ನಮ್ಮ ಶಾಸಕರ ಜೊತೆ ಚರ್ಚಿಸುತ್ತೇನೆ. ನನ್ನ ಆರೋಗ್ಯ ಸರಿ ಇಲ್ಲವಾದರೂ ಪರವಾಗಿಲ್ಲ. ರೈತರಿಗೆ ಅನುಕೂಲವಾಗುವುದಕ್ಕೆ ಸರ್ಕಾರದ ಕಣ್ಣು ತೆರೆಸಬೇಕಾಗಿರುವುದು ಅನಿವಾರ್ಯವಾಗಿದೆ.

ಮಹಾರಾಷ್ಟ್ರದ ಮಾದರಿಯ ಬದಲಾವಣೆ ಕರ್ನಾಟಕದಲ್ಲೂ ಆಗಲಿದೆ: ಎಚ್‌.ಡಿ.ಕುಮಾರಸ್ವಾಮಿ

ಆದ್ದರಿಂದ ಅರಸೀಕೆರೆಯಿಂದ ತುಮಕೂರಿಗೆ ಪಾದಯಾತ್ರೆ ಮಾಡುತ್ತೇನೆ. ಎನ್‌ಡಿಎ ಸೇರಿದ್ದೇವೆ ಎಂದು ನಾವು ಮೃದು ಧೋರಣೆ ತೋರುವುದಿಲ್ಲ ಎಂದು ತಿಳಿಸಿದರು.ನಾನು ಮುಖ್ಯಮಂತ್ರಿ ಆಗಿದ್ದಾಗ ಕೊಬ್ಬರಿಗೆ ಬೆಂಬಲವಾಗಿ ೧೮೦ ಕೋಟಿ ರು. ಹಣ ಕೊಟ್ಟೆದ್ದೆ. ಈರುಳ್ಳಿ, ಕೊಬ್ಬರಿ, ಟೊಮ್ಯಾಟೊಗೆ ಬೆಂಬಲ ಬೆಲೆ ನೀಡಿದ್ದೇನೆ. ಈಗಲಾದರೂ ಸರ್ಕಾರ ರೈತರ ವಿಷಯದಲ್ಲಿ ಎಚ್ಚೆತ್ತುಕೊಳ್ಳಬೇಕು.ಎಚ್ಚರಗೊಳ್ಳದಿದ್ದರೆ ಎಚ್ಚರಿಕೆ ಇಡುವ ಕೆಲಸ ಮಾಡಲು ನಾವು ರೂಪುರೇಷೆ ತಯಾರಿಸುತ್ತೇವೆ ಎಂದರು. ಇದೇ ವೇಳೆ ಬಹುಚರ್ಚಿತ ಜಾತಿಗಣತಿಯ ಬಗ್ಗೆ ಮಾತನಾಡಿದ ಅವರು, ಈ ರಾಜ್ಯ ಉದ್ಧಾರವಾಗಬೇಕಾದರೆ ಜಾತಿ ಗಣತಿ ಬೇಕಾಗಿಲ್ಲ. 

ಬೇಕಾದರೆ ಆರ್ಥಿಕ ಸಮೀಕ್ಷೆ ಮಾಡಲಿ. ಅದನ್ನು ಬಿಟ್ಟು ಜಾತಿಗಳ ನಡುವೆ ಹೊಡೆದಾಡಿಸುವ ಕೆಲಸವೇಕೆ? ಮುಸಲ್ಮಾನರಿಗೆ ಹತ್ತು ಸಾವಿರ ಕೋಟಿ ಕೊಡ್ತೀವಿ ಅಂತೀರಾ! ಕೊಡಿ ಬೇಡ ಅನ್ನೊಲ್ಲ. ಆದರೆ, ಹಿಂದುಳಿದ ಹಿಂದೂಗಳಿಗೆ ಏನು ಕೊಡ್ತೀರಾ? ಖಜಾನೆಯನ್ನು ಲೂಟಿ ಹೊಡೆಯಲಿಕ್ಕೆ ಪ್ಲಾನ್ ಇದೆಲ್ಲಾ, ನನಗೆ ಹೇಗೆ ಕಮಿಷನ್ ಹೊಡೆಯುತ್ತಾರೆ ಗೊತ್ತಿದೆ. ಹೀಗೆ ಹಣ ಹಂಚೋದಾದ್ರೆ ರೈತರಿಗೆ ಏನು ಕೊಡ್ತೀರಿ ಎಂದು ಪ್ರಶ್ನಿಸಿದರು. ಇವರ ಸರ್ಕಾರದಲ್ಲೂ ಕಮಿಷನ್ ನಡೆಯುತ್ತಿದೆ ಎಂದು ಗುತ್ತಿಗೆದಾರ ಕೆಂಪಣ್ಣ ಹೇಳಿದ್ದಾರೆ. ಇವರು ಅಧಿಕಾರಕ್ಕೆ ಬಂದು ಮಾಡಿದ್ದೇನು? ಬಿಜೆಪಿ ಮೇಲೆ ಕಮಿಷನ್ ಆರೋಪದಿಂದ ಅಧಿಕಾರಕ್ಕೆ ಬಂದು ಇವರೇನು ಮಾಡಿದ್ರು ಎಂದು ಟಾಂಗ್ ನೀಡಿದರು.

ಪ್ರಚಾರ ಮಾತ್ರ ಅಭಿವೃದ್ಧಿ ಅಲ್ಲ: ರಾಜ್ಯ ಸರ್ಕಾರದವರು ಪ್ರತಿನಿತ್ಯ ೫ ಗ್ಯಾರಂಟಿಗಳ ಬಗ್ಗೆಯೇ ತಮಟೆ ಹೊಡೆದುಕೊಂಡು ಹೋಗುತ್ತಿದ್ದಾರೆ. ಆ ಪ್ರಚಾರ ಬಿಟ್ಟರೆ ಬೇರೆ ಯಾವುದೇ ಅಭಿವೃದ್ಧಿ ಕೆಲಸವಾಗುತ್ತಿಲ್ಲ. ಮಾಧ್ಯಮಗಳಿಗೆ ನೀಡಬೇಕಾದ ೧೪೦ ಕೋಟಿ ಜಾಹಿರಾತು ಹಣ ಕೂಡ ಇನ್ನೂ ನೀಡಿಲ್ಲ. ಐಶಾರಾಮಿ ಕಾರು, ಮನೆ ರಿನವೇಷನ್ ಗೆ ಕೋಟ್ಯಾಂತರ ರು. ಕಳೆಯುತ್ತಿದ್ದಾರೆ. ಅದನ್ನು ಬಿಟ್ಟರೆ ರೈತರಿಗೆ ಯಾವುದೇ ಅನುಕೂಲ ಆಗುತ್ತಿಲ್ಲ, ಅಕ್ಕಿಯ ದರ ನೂರರ ಗಡಿ ದಾಟುವ ಹಂತದಲ್ಲಿದೆ. ಅನ್ನಭಾಗ್ಯದ ಅಕ್ಕಿ ಬದಲು ಹಣ ನೀಡುತ್ತಿದ್ದಾರೆ. ಅದನ್ನೂ ಯಾರು ಯಾರಿಗೆ ಕೊಟ್ಟಿದ್ದಾರೊ ಗೊತ್ತಿಲ್ಲ. ಮುಂದೆ ೮೦ ರು.ಅಕ್ಕಿ ಖರೀದಿಸಬೇಕಾದ್ರೆ ಎಲ್ಲಿ ಅಕ್ಕಿ ತರುತ್ತಾರೆ? ಶಕ್ತಿ ಯೋಜನೆಯಲ್ಲಿ ಹೆಣ್ಣುಮಕ್ಕಳು ಸ್ವಾತಂತ್ರದಿಂದ ಓಡಾಡುತ್ತಿದ್ದಾರೆ, ಆದ್ರೆ ಸಾರಿಗೆ ಇಲಾಖೆಗೆ ಸರ್ಕಾರದಿಂದ ಇನ್ನೂ ಹಣವೇ ಸಂದಾಯ ಆಗಿಲ್ಲ. ಸಾರಿಗೆ ಸಿಬ್ಬಂದಿಯನ್ನು ದಿನಗೂಲಿಯಲ್ಲಿ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಇವೆಲ್ಲವೂ ಅಭಿವೃದ್ಧಿಗೆ ಮಾರಕವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹರಿ ಮತ್ತು ಸಿದ್ದು ಗುದ್ದಾಟ: ಬಿ.ಕೆ ಹರಿಪ್ರಸಾದ್ ಮತ್ತು ಸಿದ್ದರಾಮಯ್ಯ ಗುದ್ದಾಟ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಬಿ.ಕೆ ಹರಿಪ್ರಸಾದ್ ಮತ್ತು ಸಿದ್ದರಾಮಯ್ಯ ಮಾತ್ರ ಯಾಕೆ ಹೇಳ್ತೀರಿ, ಅಲ್ಲಿ ಇನ್ನೂ ಅನೇಕರಿದ್ದಾರೆ. ಮುಂದೆ ಎಲ್ಲರ ಧ್ವನಿ ಹೊರ ಬರುತ್ತದೆ ಎಂದರು. ಬರಗಾಲದ ಹಿನ್ನೆಲೆ ವಿಧಾನಸಭಾ ಕಲಾಪ ನಡೆಯುತ್ತಿದೆ. ಹಲವಾರು ಶಾಸಕರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂಬುದನ್ನೂ ಪ್ರಸ್ತಾಪ ಮಾಡಿದ್ದಾರೆ. ತುಮಕೂರು, ಹಾಸದಲ್ಲಿ ಬೆಳೆಯುವ ಕೊಬ್ಬರಿ ಬೆಲೆ ಶೇ.೫೦ ಕ್ಕಿಂತ ಕಡಿಮೆಯಾಗಿದೆ. ಕಳೆದ ಒಂದು ವರ್ಷದಿಂದ ಬೆಲೆ ಕುಸಿತ ಕಂಡಿದೆ. 

ಜೋಡೆತ್ತುಗಳೆಂದು ಹೇಳಿಕೊಳ್ಳುವ ಬಿಎಸ್‌ವೈ-ಅಶೋಕ್ ನಡುವೆ ಹೊಂದಾಣಿಕೆ ಇಲ್ಲ: ಶಾಸಕ ಯತ್ನಾಳ್

ತೆಂಗು ಬೆಳೆಗಾರರ ಕಷ್ಟ ನಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು ಎಂಬ ಬೇಡಿಕೆಯೂ ಹೆಚ್ಚಾಗುತ್ತಿದೆ. ವಿಧಾನ ಸಭೆಯಲ್ಲಿ ಚರ್ಚೆ ನಡೆದಾಗ ಕಾಂಗ್ರೆಸ್ನವರು ಕೇಂದ್ರದ ಮೇಲೆ ವಿರೋಧ ಪಕ್ಷ ಒತ್ತಡ ತರಬೇಕು ಎನ್ನುತ್ತಿದ್ದಾರೆ. ಎನ್‌ಡಿಎ ಭಾಗವಾದ ಜೆಡಿಎಸ್ ದೇವೇಗೌಡರ ನೇತೃತ್ವದಲ್ಲಿ ಕೇಂದ್ರದ ಗಮನಕ್ಕೆ ತರಬೇಕು ಎಂದಿದ್ದಾರೆ. ಇನ್ನು ನಮ್ಮ ಜಿಲ್ಲೆಯ ಕಾಂಗ್ರೆಸ್ ಶಾಸಕರೊಬ್ಬರು ಮಾತನಾಡುತ್ತಿದ್ದು, ಸದನದಲ್ಲಿ ನಮ್ಮ ಜಿಲ್ಲೆಯ ಶಾಸಕರ ಹೋರಾಟವನ್ನು ನಾನು ಕಂಡಿದ್ದೇನೆ ಎಂದು ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ವಿಚಾರವಾಗಿ ಲೇವಡಿ ಮಾಡಿದರು. ಇದೆ ವೇಳೆ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸುಮುಖ ರಘು, ಹೊಂಗೆರೆ ರಘು ಇತರರು ಉಪಸ್ಥಿತರಿದ್ದರು.

Follow Us:
Download App:
  • android
  • ios