ಬಳ್ಳಾರಿ ಜಿಲ್ಲೆ ವಿಭಜನೆಗೆ ವಿರೋಧ: 'ಮುಂದೆ ಆಗುವ ಪರಿಣಾಮದ ಬಗ್ಗೆ ಸಿಎಂಗೆ ತಿಳಿಸಿದ್ದೇನೆ'
ನಾನು ಯಾವುದೇ ಕಾರಣಕ್ಕೂ ಕಣ್ಣೀರು ಹಾಕಿಲ್ಲ| ನಾನು ನನ್ನ ಭಾವನೆಗಳನ್ನ ಭಾವನಾತ್ಮಕವಾಗಿ ತಿಳಿಸಿದ್ದೇನೆ| ನಾಳೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಬರುವ ಕಾರ್ಯಕ್ರಮದಲ್ಲಿ ನಾನು ಇರುವುದಿಲ್ಲ| ಕಾರಣಾಂತರಗಳಿಂದ ಬೆಂಗಳೂರಿಗೆ ಹೋಗುತ್ತಿದ್ದೇನೆ: ಸೋಮಶೇಖರ್ ರೆಡ್ಡಿ|
ಬಳ್ಳಾರಿ(ನ.28): ಬಳ್ಳಾರಿ ಅಖಂಡ ಜಿಲ್ಲೆಯಾಗಿಯೇ ಇರಬೇಕು ಅಂತ ನಮ್ಮ ಅಭಿಪ್ರಾಯವಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ತಿಳಿಸಿದ್ದೇವೆ. ಆದರೂ ಕೂಡ ವಿಜಯನಗರ ಜಿಲ್ಲೆ ಘೋಷಣೆ ಮಾಡಿದ್ದಾರೆ. ಮುಂದೆ ಇದರ ಏನು ಪರಿಣಾಮ ಬೀರಲಿದೆ ಅಂತಾನೂ ನಾವು ಈಗಾಗಲೇ ತಿಳಿಸಿದ್ದೇವೆ. ಡಿ. 3ರಂದು ಜಿಲ್ಲೆಯ ಪ್ರಮುಖ ರಾಜಕೀಯ ಮುಖಂಡರ ಸಭೆ ಕರೆದಿದ್ದೇನೆ. ಎಲ್ಲರ ಅಭಿಪ್ರಾಯ ಪಡೆದು ಸಿಎಂ ಯಡಿಯೂರಪ್ಪ ಅವರಿಗೆ ಮತ್ತೊಮ್ಮೆ ತಿಳಿಸುತ್ತೇವೆ ಎಂದು ಶಾಸಕ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.
ಇಂದು(ಶನಿವಾರವ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಏಕಾಏಕಿ ವಿಜಯನಗರ ಜಿಲ್ಲೆ ಘೋಷಣೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೆ ಅಖಂಡ ಆಗುತ್ತದೆ ಎಂಬ ವಿಶ್ವಾಸ ಇದೆ. ಜರ್ಮನಿ ದೇಶ ಹೇಗೆ ಒಂದಾಯ್ತೋ ಹಾಗೆ ಮತ್ತೆ ಬಳ್ಳಾರಿ ಮತ್ತೆ ಒಂದಾಗಬಹುದು ಎಂದು ತಿಳಿಸಿದ್ದಾರೆ.
ಅಧಿಕೃತವಾಗಿ ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ; ಈ 6 ತಾಲ್ಲೂಕುಗಳು ಸೇರ್ಪಡೆ
ನಾನು ಯಾವುದೇ ಕಾರಣಕ್ಕೂ ಕಣ್ಣೀರು ಹಾಕಿಲ್ಲ. ನಾನು ನನ್ನ ಭಾವನೆಗಳನ್ನ ಭಾವನಾತ್ಮಕವಾಗಿ ತಿಳಿಸಿದ್ದೇನೆ. ನಾಳೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರು ಬರುವ ಕಾರ್ಯಕ್ರಮದಲ್ಲಿ ನಾನು ಇರುವುದಿಲ್ಲ. ಕಾರಣಾಂತರಗಳಿಂದ ಬೆಂಗಳೂರಿಗೆ ಹೋಗುತ್ತಿದ್ದೇನೆ. ನಾನು ಮತ್ತೆ ಎಲ್ಲರನ್ನೂ ಭೇಟಿಯಾಗುವೆ ಎಲ್ಲಾ ಶಾಸಕರು, ಮತ್ತು ಜನಪ್ರತಿನಿಧಿಗಳನ್ನು ಭೇಟಿಯಾಗುತ್ತೇನೆ. ಬಳ್ಳಾರಿ ಜಿಲ್ಲೆಯ ಪಶ್ಚಿಮ ತಾಲೂಕುಗಳ ನಾಯಕರು ಬಂದರೆ ಸ್ವಾಗತ ಮಾಡುತ್ತೇನೆ ಎಂದು ತಿಳಿಸಿದ್ದಾರೆ.