ಬಳ್ಳಾರಿ(ಜೂ.09):  ಕೋವಿಡ್‌ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಕುರಿತಂತೆ ಚರ್ಚೆ ನಡೆಸುತ್ತಿರುವುದು ಸರಿಯಲ್ಲ ಎಂದಿರುವ ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ, ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂಬುದು ನನ್ನ ಒತ್ತಾಸೆ. ನೂರಕ್ಕೆ ನೂರರಷ್ಟು ನನ್ನ ಬೆಂಬಲ ಅವರಿಗೆ ಎಂದರು.

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ಹೋರಾಟದಿಂದ ಬಂದವರು. ಪಕ್ಷವನ್ನು ಕಟ್ಟಿ ಬೆಳೆಸಿದವರು. ನಮ್ಮ ಪಕ್ಷದಲ್ಲಿ ಬಿಎಸ್‌ವೈ ಅವರು ಪ್ರಶ್ನಾತೀತ ನಾಯಕ. ಹೀಗಾಗಿ ಈ ಅವಧಿಯಲ್ಲಿ ಅವರೇ ಮುಂದುವರಿಯಬೇಕು. ಮುಂದಿನ ಸಾರಿ ಬೇಕಾದರೆ ಬೇರೆಯವರನ್ನು ನೋಡಬಹುದು ಎಂದರು.

ಮಕ್ಕಳ ಅಪೌಷ್ಠಿಕತೆ ಸಮಸ್ಯೆಗೆ ಬಳ್ಳಾರಿ ಜಿಲ್ಲಾಡಳಿತ ಹೈಅಲರ್ಟ್‌..!

ಇಡೀ ರಾಜ್ಯ ಕೋವಿಡ್‌ನಿಂದ ತತ್ತರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಜನರನ್ನು ರಕ್ಷಣೆ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾಗಿದೆ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದಲ್ಲಿ ಮಾತ್ರ ಕೋವಿಡ್‌ನಿಂದ ಪಾರಾಗಲು ಸಾಧ್ಯವಿದೆ ಎಂದು ತಿಳಿಸಿದರು.

ಶಾಸಕ ರೇಣುಕಾಚಾರ್ಯ ಅವರು ಸಹಿ ಸಂಗ್ರಹ ಕುರಿತು ಕೇಳಿದ ಪ್ರಶ್ನೆಗೆ, ಇಂತಹ ದೊಡ್ಡ ಸಂಗತಿಗಳ ಕುರಿತು ನಾನು ಉತ್ತರಿಸುವುದಿಲ್ಲ. ಪಕ್ಷದ ಹೈಕಮಾಂಡ್‌ ಇದೆ. ದೊಡ್ಡವರು ಇದ್ದಾರೆ, ಅವರೇ ಎಲ್ಲವನ್ನು ನೋಡಿಕೊಳ್ಳುತ್ತಾರೆ ಎಂದು ಹೇಳಿದರು.