ಬಳ್ಳಾರಿ(ಜ.15): ನಗರದಲ್ಲಿ ಭೋವಿ ಸಮುದಾಯಕ್ಕೆ ಸುಸಜ್ಜಿತ ಭವನ ನಿರ್ಮಿಸಿ ಕೊಡುವುದಾಗಿ ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ ಭರವಸೆ ನೀಡಿದ್ದಾರೆ.

ಇಲ್ಲಿನ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಿದ್ಧರಾಮೇಶ್ವರ ಜಯಂತಿಗೆ ಚಾಲನೆ ನೀಡಿ ಮಾತನಾಡಿದ ಅವರು, ಭೋವಿ ಸಮಾಜದ ಮದುವೆ ಮತ್ತಿತರ ಸಮಾರಂಭಗಳು ಸೇರಿದಂತೆ ಅನೇಕ ಕಾರ್ಯ ಚಟುವಟಿಕೆಗಳಿಗೆ ಭವನದ ಅಗತ್ಯವಿದ್ದು, ಭವನ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು. ಆದಷ್ಟು ಶೀಘ್ರ ಭವನ ನಿರ್ಮಾಣವಾಗಲಿದೆ ಎಂದು ಭರವಸೆ ನೀಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಭೋವಿ ಸಮುದಾಯ ಆರ್ಥಿಕವಾಗಿ ಹಿಂದುಳಿದಿದೆ. ಶ್ರಮಿಕ ವರ್ಗವಾಗಿರುವ ಈ ಸಮಾಜವು ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಅನೇಕ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಶಿವಯೋಗಿ ಸಿದ್ಧರಾಮೇಶ್ವರರು ಸಮಾಜದ ಸ್ವಾಸ್ಥ್ಯಕ್ಕಾಗಿ ಬದುಕನ್ನು ಮುಡುಪಾಗಿಟ್ಟಮಹಾನ್‌ ಯೋಗಿಯಾಗಿದ್ದಾರೆ. ಸಮಾನತೆಗಾಗಿ ಶ್ರಮಿಸಿದ ಮಹಾನ್‌ ಯೋಗಿಗಳಾಗಿದ್ದಾರೆ. ಅವರ ಆದರ್ಶದ ಬದುಕು ನಮ್ಮೆಲ್ಲರಿಗೆ ಮಾರ್ಗದರ್ಶನವಾಗಿದೆ ಎಂದರು. 

ಸಹಾಯಕ ಆಯುಕ್ತ ಪಿ. ರಮೇಶ ಕೋನರೆಡ್ಡಿ ಮಾತನಾಡಿದರು. ಹೊಸಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಅಧ್ಯಾಪಕ ಡಾ. ಗಾದೆಪ್ಪ ಅವರು ಸಿದ್ಧರಾಮೇಶ್ವರರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ರಂಗಣ್ಣನವರ್‌, ಬಿಜೆಪಿ ಮುಖಂಡ ಮಲ್ಲನಗೌಡ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಹಾಗೂ ಭೋವಿ ಸಮಾಜದ ಮುಖಂಡ ಎಂ.ಟಿ. ಮಲ್ಲೇಶಪ್ಪ, ಹುಲುಗಪ್ಪ, ಮಲ್ಲಿಕಾರ್ಜುನ ತೋರಣಗಲ್‌, ಗೋವಿಂದಪ್ಪ, ರಾಮಾಂಜಿನೇಯಲು, ಹೊನ್ನೂರಸ್ವಾಮಿ ಮತ್ತಿತರರಿದ್ದರು.