ಮೈಸೂರು(ನ.28): ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮೂರನೇ ಮಹಾರಾಣಿ ಎಂದು ಹುಣಸೂರು ಶಾಸಕ ಹೆಚ್.ಪಿ. ಮಂಜುನಾಥ್ ಹೇಳಿಕೆಗೆ ತಮ್ಮದೇ ದಾಟಿಯಲ್ಲಿ ಜೆಡಿಎಸ್‌ ಶಾಸಕ ಸಾ. ರಾ. ಮಹೇಶ್ ಹರಿಹಾಯ್ದಿದ್ದಾರೆ. 

ಇಂದು(ಶನಿವಾರ) ನಗರದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಮೈಸೂರು ದಸರಾ ಹಬ್ಬದಂದು ಜಂಬೂಸವಾರಿ ದಿನ ಚಿನ್ನದ ಅಂಬಾರಿಗೆ ಯದುವೀರ್‌ ಅವರಗಿಂತ ಮೊದಲು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪುಷ್ಪಾರ್ಚನೆ ಮಾಡಿದ್ದರು. ಮೊದಲು ಪುಷ್ಪಾರ್ಚನೆ ಮಾಡಿದ್ದ ರೋಹಿಣಿ ಸಿಂಧೂರಿ ಅವರನ್ನ ನೋಡಿ ಶಾಸಕ ಮಂಜುನಾಥ್ ಆ ರೀತಿಯಾಗಿ ಹೇಳಿಕೆ ನೀಡಿರಬಹುದು ಎಂದು ಸಾ. ರಾ. ಮಹೇಶ್ ಹೇಳಿದ್ದಾರೆ. 

'ರೋಹಿಣಿ ಸಿಂಧೂರಿ IAS ಪಾಸ್ ಮಾಡಿರುವ ಬಗ್ಗೆ ಅನುಮಾನ'

ಜಿಲ್ಲೆಯಲ್ಲಿ ರೋಹಿಣಿ ಸಿಂಧೂರಿಯವರ ಆಟ ನಡೆಯುವುದಿಲ್ಲ. ಬೇಕಿದ್ದರೇ ರಾಜೀನಾಮೆ ನೀಡಿ ರಾಜಕೀಯಕ್ಕೆ ಬರಲಿ, ಚುನಾವಣೆಗೆ ಸ್ಪರ್ಧಿಸಲಿ. ಮೈಸೂರಿನ ಜನತೆ ಸ್ವಾಭಿಮಾನದಿಂದ ಬದುಕುತ್ತಿರುವವರಾಗಿದ್ದಾರೆ. ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಜನರು ಸಹಿಸುವುದಿಲ್ಲ ಎಂದು ಹೇಳಿದ್ದಾರೆ. 

ಶಾಸಕ ಮಂಜುನಾಥ್‌ಗೆ ಬರೆದ ಪತ್ರವನ್ನು ಬಹಿರಂಗ ಪಡಿಸಿರುವ ರೋಹಿಣಿ ಸಿಂಧೂರಿ ವಿರುದ್ಧ ಕಿಡಿಕಾರಿದ ಸಾ.ರಾ. ಮಹೇಶ್‌ ಅವರುಇದು ನಿಮಗೆ ಶೋಭೆ ತರುವುದಿಲ್ಲ. ಶಾಸಕರ ಅನುಪಸ್ಥಿತಿಯಲ್ಲಿ ಸಭೆ ನಡೆಸಿದರೆ ಸುಮ್ಮನಿರುವುದಿಲ್ಲ. ಶಾಸಕರನ್ನು ಕಡೆಗಣಿಸಿ ಸಭೆ ನಡೆಸಿದರೆ ಆಗುವ ಪರಿಣಾಮಕ್ಕೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾಡಳಿತವವೇ ಹೊಣೆಯಾಗಲಿದೆ ಎಂದು ಹೇಳಿದ್ದಾರೆ.