ರೋಹಿಣಿ ಸಿಂಧೂರಿ ವಿರುದ್ಧ ಎಲ್ಲಾ ದಾಖಲೆ ಸಲ್ಲಿಕೆ ಮಾಡಿ ಅವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಶಾಸಕ ಸಾ.ರಾ. ಮಹೇಶ್‌ ಆಗ್ರಹಿಸಿದ್ದಾರೆ. ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ವಸತಿ ಇಲಾಖೆ ಕಾರ್ಯದರ್ಶಿ ಡಾ.ಜೆ. ರವಿಶಂಕರ್‌ ಅವರಿಗೆ  ಸಿಂಧೂರಿ ವಿರುದ್ಧ 1200 ಪುಟಗಳ ದಾಖಲೆ ನೀಡಿದ್ದಾರೆ. 

ಮೈಸೂರು (ಆ.20): ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಮೈಸೂರು ಜಿಲ್ಲಾಧಿಕಾರಿಯಾಗಿದ್ದ ವೇಳೆ ಎಸಗಿದ ಕರ್ತವ್ಯಲೋಪದಿಂದ ನೂರಾರು ಮಂದಿಯ ಜೀವ ಹೋಗಿದೆ. ಭ್ರಷ್ಟಾಚಾರದಿಂದ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರು. ನಷ್ಟವಾಗಿದೆ. ಈ ಸಂಬಂಧ ಎಲ್ಲ ದಾಖಲೆ ಸಲ್ಲಿಸಿದ್ದು, ಅವರನ್ನು ಅಮಾನತು ಮಾಡಬೇಕು ಎಂದು ಜೆಡಿಎಸ್‌ ಶಾಸಕ ಹಾಗೂ ಮಾಜಿ ಸಚಿವ ಸಾ.ರಾ. ಮಹೇಶ್‌ ಆಗ್ರಹಿಸಿದರು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಸತಿ ಇಲಾಖೆ ಕಾರ್ಯದರ್ಶಿ ಡಾ.ಜೆ. ರವಿಶಂಕರ್‌ ಅವರನ್ನು ಶುಕ್ರವಾರ ಭೇಟಿ ಮಾಡಿದ ಅವರು, ತಾವು ರೋಹಿಣಿ ಸಿಂಧೂರಿ ವಿರುದ್ಧ ಮಾಡಿದ್ದ 5 ಆರೋಪಗಳಿಗೆ ಸಂಬಂಧಿಸಿದ 1200 ಪುಟಗಳ ದಾಖಲೆಗಳನ್ನು ಸಲ್ಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಾ.ರಾ. ಮಹೇಶ್‌ ಅವರು, ಸರ್ಕಾರ ರೋಹಿಣಿ ಸಿಂಧೂರಿ ವಿರುದ್ಧ ಬಂದಿರುವ ಆರೋಪ ಸಂಬಂಧ ತನಿಖೆ ನಡೆಯುತ್ತಿದ್ದು, ನನ್ನ ಬಳಿ ಇರುವ ಎಲ್ಲಾ ದಾಖಲೆ ನೀಡಿದ್ದೇನೆ. ಈ ತನಿಖೆ ಮೇಲೆ ನನಗೆ ವಿಶ್ವಾಸವಿದ್ದು, ರೋಹಿಣಿ ಸಿಂಧೂರಿ ನಡೆಸಿರುವ ಅಕ್ರಮ, ಕರ್ತವ್ಯ ಲೋಪ ಸಾಬೀತಾಗಲಿದೆ. ಅವರನ್ನು ಸರ್ಕಾರಿ ಹುದ್ದೆಯಿಂದ ಅಮಾನತು ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಆರೋಪಗಳೇನು?: 2017ರಲ್ಲಿ ನವೀಕರಣಗೊಂಡಿದ್ದ ಜಿಲ್ಲಾಧಿಕಾರಿ ಅಧಿಕೃತ ನಿವಾಸವನ್ನು ರೋಹಿಣಿ ಸಿಂಧೂರಿ ಮೈಸೂರಿಗೆ ಬಂದ 6 ತಿಂಗಳಲ್ಲಿ . 16.35 ಲಕ್ಷ ವೆಚ್ಚ ಮಾಡಿ ನವೀಕರಿಸಿದ್ದಾರೆ. ಜಿಲ್ಲಾಧಿಕಾರಿ ನಿವಾಸ ಪಾರಂಪರಿಕ ಕಟ್ಟಡವಾಗಿದ್ದು, ಯಾರ ಅನುಮತಿ ಪಡೆಯದೇ . 50 ಲಕ್ಷ ವೆಚ್ಚದಲ್ಲಿ ಈಜುಕೊಳ, ಜಿಮ್‌ ನಿರ್ಮಿಸಿದ್ದಾರೆ. ನಗರ ಮತ್ತು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ಮುಖಾಂತರ ಪರಿಸರ ಸ್ನೇಹಿ ಬಟ್ಟೆಬ್ಯಾಗ್‌ ಖರೀದಿಸಲು ಸಲುವಾಗಿ ಸ್ಥಳೀಯ ಸಂಸ್ಥೆಗಳಿಂದ ಅನುಮೋದನೆ ಪಡೆಯದೇ, . 10 ಮೌಲ್ಯದ 14.71 ಲಕ್ಷ ಬ್ಯಾಗ್‌ ಖರೀದಿಗೆ . 52 ಬೆಲೆ ನಿಗದಿ ಮಾಡಿ ಅನುಮೋದನೆ ನೀಡಿದ್ದರು ಎಂದು ದೂರಿದರು.

Koppal: ಗಂಗಾವತಿಯ ಅಂಜನಾದ್ರಿ ಬೆಟ್ಟಕ್ಕೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ಭೇಟಿ!

ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸದೇ ಸೋಂಕು ನಿಯಂತ್ರಿಸುವಲ್ಲಿ ವಿಫಲರಾದರು. ಪರಿಣಾಮ ಜಿಲ್ಲೆಯಲ್ಲಿ ಸಾವಿರಾರು ಮಂದಿ ಮೃತಪಟ್ಟರು. ಮೇ ತಿಂಗಳಲ್ಲಿ 1342 ಜನ ಕೋವಿಡ್‌ನಿಂದ ಮೃತಪಟ್ಟಿದ್ದರು. ಆದರೆ, ರೋಹಿಣಿ ಸಿಂಧೂರಿ ಅವರು ಕೇವಲ 219 ಮಂದಿ ಮಾತ್ರ ಮೃತಪಟ್ಟಿದ್ದಾರೆ ಎಂದು ಸರ್ಕಾರಕ್ಕೆ ತಪ್ಪು ಲೆಕ್ಕ ನೀಡಿದ್ದರು. ಚಾಮರಾಜನಗರ ಜಿಲ್ಲೆಯಲ್ಲಿ ನಡೆದ ಆಕ್ಷಿಜನ್‌ ದುರಂತಕ್ಕೆ ರೋಹಿಣಿ ಸಿಂಧೂರಿ ಅವರು ಕಾರಣ. ಚಾಮರಾಜನಗರ ಜಿಲ್ಲೆಗೆ ಪೂರೈಕೆ ಆಗಬೇಕಿದ್ದ ಆಕ್ಷಿಜನನ್ನು ತಡೆಹಿಡಿದು 28 ಜನರ ಸಾವಿಗೆ ಕಾರಣರಾಗಿದ್ದಾರೆ ಎಂಬ ಐದು ಆರೋಪಗಳನ್ನು ಮಾಡಿದ್ದೆ. ಈಗ ಈ ಎಲ್ಲಾ ಆರೋಪಗಳಿಗೆ 1200 ಪುಟಗಳ ದಾಖಲೆಯನ್ನು ಸಲ್ಲಿಸಿದ್ದೇನೆ ಎಂದು ಅವರು ವಿವರಿಸಿದರು.

ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಆದೇಶಿಸಿದ ಕರ್ನಾಟಕ ಸರಕಾರ

ಅಧಿಕಾರಿಗಳಿಂದ ಮಾಹಿತಿ ಸಂಗ್ರಹ: ವಸತಿ ಇಲಾಖೆಯ ಕಾರ್ಯದರ್ಶಿ ಡಾ.ಜೆ. ರವಿಶಂಕರ್‌ ಅವರು ಮೈಸೂರು ಮತ್ತು ಚಾಮರಾಜನಗರ ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಆರೋಗ್ಯಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆಎಸೆದಿರಿವುದು ಸರಿಯಲ್ಲ. ಆದರೆ, ಇದೇ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್‌ ಪಕ್ಷ ದೊಡ್ಡ ಮಟ್ಟದ ಹೋರಾಟಕ್ಕೆ ಮುಂದಾಗಿರುವುದು ಸರಿಯಲ್ಲ. ಇತ್ತೀಚೆಗೆ ಜನಪ್ರತಿನಿಧಿಗಳ ಹೇಳಿಕೆಗಳು ಸಮಾಜದಲ್ಲಿನ ಶಾಂತಿಯನ್ನು ಕದಡುತ್ತಿವೆ. ಜೊತೆಗೆ ಜನಪ್ರತಿನಿಧಿಗಳ ಮೇಲಿನ ವಿಶ್ವಾಸ ಜನರಲ್ಲಿ ಕಡಿಮೆಯಾಗುತ್ತಿದೆ.

- ಸಾ.ರಾ. ಮಹೇಶ್‌, ಶಾಸಕ