ಮೈಸೂರು(ಆ.29): ನಗರಕ್ಕೆ ಬುಧವಾರ ಆಗಮಿಸಿದ ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರನ್ನು ಬಿಜೆಪಿ ಕಾರ್ಯಕರ್ತರು ಅದ್ಧೂರಿಯಾಗಿ ಬರಮಾಡಿಕೊಂಡರು.

ಬೆಂಗಳೂರು ರಸ್ತೆಯ ಏಟ್ರಿಯಾ ಹೊಟೇಲ್‌ ಬಳಿ ಅದ್ಧೂರಿ ಸ್ವಾಗತ ಕೋರಲಾಯಿತು. ಬಳಿಕ ಅವರು ಸರಸ್ವತಿಪುರಂನ ಶ್ರೀಕೃಷ್ಣಧಾಮದಲ್ಲಿ ಚಾತುರ್ಮಾಸ ವ್ರತದಲ್ಲಿರುವ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಬಳಿಕ ಆರ್‌ಎಸ್‌ಎಸ್‌ ಕಚೇರಿಗೆ ಭೇಟಿ ನೀಡಿ, ಆರ್‌ಎಸ್‌ಎಸ್‌ ಗೀತೆಗೆ ಧ್ವನಿಗೂಡಿಸಿದರು. ಎಲ್ಲರಂತೆ ಸರದಿ ಸಾಲಿನಲ್ಲಿ ನಿಂತು ಆರ್‌ಎಸ್‌ಎಸ್‌ ಗೀತೆಗೆ ಗೌರವ ಸಲ್ಲಿಸಿದರು. ಎಲ್ಲೆಡೆಯೂ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡ ಅವರು, ಕೈ ಮುಗಿದು ತೆರಳಿದರು.

ಜಾತಿ ಆಧರಿಸಿ ಯಾರ ಹೆಸರನ್ನೂ ಶಿಫಾರಸು ಮಾಡಲ್ಲ: ಪೇಜಾವರ ಶ್ರೀ ಸ್ಪಷ್ಟನೆ

ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಿಗೆ ಮೈಸೂರು- ಕೊಡಗು ಲೋಕಸಭಾ ಸದಸ್ಯ ಪ್ರತಾಪ್‌ ಸಿಂಹ, ಶಾಸಕ ಎಲ್‌. ನಾಗೇಂದ್ರ, ನಗರಾಧ್ಯಕ್ಷ ಡಾ.ಬಿ.ಎಚ್‌. ಮಂಜುನಾಥ್‌. ಜಿಲ್ಲಾಧ್ಯಕ್ಷ ಎಂ.ಶಿವಣ್ಣ, ಮುಖಂಡರಾದ ಎಚ್‌.ವಿ. ರಾಜೀವ್‌, ಮಲ್ಲಪ್ಪಗೌಡ, ನಂದೀಶ್‌ ಪ್ರೀತಂ ಸಾಥ್‌ ನೀಡಿದರು.

ರಾಮದಾಸ್‌ ಗೈರು:

ಸಚಿವ ಸ್ಥಾನದಿಂದ ವಂಚಿತರಾಗಿ ಅಸಮಾಧಾನಗೊಂಡಿರುವ ಶಾಸಕ ಎಸ್‌.ಎ. ರಾಮದಾಸ್‌ ಪಕ್ಷದ ರಾಜ್ಯಾಧ್ಯಕ್ಷರ ಭೇಟಿಗೂ ಆಗಮಿಸಲಿಲ್ಲ. ಪಕ್ಷದ ನಾಯಕರ ಕಾರ್ಯಕ್ರಮದಿಂದಲೂ ಅಂತರ ಕಾಯ್ದುಕೊಂಡರು.