ಕೈಗೆಟುಕುವ ದರಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಅಪಾರ್ಟ್ಮೆಂಟ್, ವಾಣಿಜ್ಯ ಮಾಲ್ ಮತ್ತು ಸಮಾವೇಶ , ಕುಟುಂಬ ಸಮೇತ ಸಮಯ ಕಳೆಯಲು ಫುಡ್ ಕೋರ್ಟ್ ಹಾಗೂ ಮನರಂಜನಾ ತಾಣ ಸೇರಿದಂತೆ ಹಲವು ವಿಶೇಷತೆಗಳ ಸಮಗ್ರ ಟೌನ್ ಶಿಪ್ ಯೋಚನೆ ಮಂಡ್ಯದಲ್ಲಿ ತಲೆ ಎತ್ತಲು ಸಜ್ಜಾಗಿದೆ.
ಮಂಡ್ಯ (ನ.25) : ಮಂಡ್ಯ ನಗರವನ್ನು ಆಧುನಿಕ ವಾಣಿಜ್ಯ, ಮನರಂಜನೆ ಹಾಗೂ ವಸತಿ ಸೌಲಭ್ಯಗಳ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಮಹತ್ವದ ಯೋಜನೆಯೊಂದನ್ನು ರೂಪಿಸಲಾಗುತ್ತಿದೆ. ನಗರದ ಸುಮಾರು 17 ಎಕರೆ ಪ್ರದೇಶದಲ್ಲಿ ಬೃಹತ್ ವಾಣಿಜ್ಯ ಮಾಲ್, ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು, ಅಂತಾರಾಷ್ಟ್ರೀಯ ಮಟ್ಟದ ಸಮಾವೇಶ ಕೇಂದ್ರ, ವಸತಿ ಸಮುಚ್ಚಯಗಳು ಸೇರಿದಂತೆ ಸಮಗ್ರ ಸೌಲಭ್ಯಗಳನ್ನು ಒಳಗೊಂಡ ಸುಸಜ್ಜಿತ ಟೌನ್ಶಿಪ್ ನಿರ್ಮಿಸುವ ಚಿಂತನೆ ಮುನ್ನೆಲೆಗೆ ಬಂದಿದೆ. ಮಂಡ್ಯ ನಗರಾಭಿವೃದ್ಧಿಗೆ ಹೊಸ ಆಯಾಮ ನೀಡುವ ಉದ್ದೇಶದಿಂದ ಮಂಡ್ಯ ಶಾಸಕ ಪಿ. ರವಿಕುಮಾರ್ ಗೌಡ ಗಣಿಗ ಯೋಜನೆ ಜಾರಿಗೊಳಿಸಲು ಮುಂದಾಗಿದ್ದಾರೆ. ಸಿಎಂ ಹಾಗೂ ಸರ್ಕಾರ ಮಟ್ಟದಲ್ಲಿ ಯೋಜನೆಗೆ ಅನುೋದನೆ ಹಾಗೂ ಅನುದಾನದ ಪ್ರಯತ್ನಗಳು ಆರಂಭಗೊಂಡಿದೆ.
ಕೇಂದ್ರ ಸರ್ಕಾರದ ನಗರ ಸವಾಲು ನಿಧಿ (ಅರ್ಬನ್ ಚಾಲೆಂಜ್ ಫಂಡ್) ಯೋಜನೆಯಡಿ ಈ ಬೃಹತ್ ಯೋಜನೆಯನ್ನು ಅನುಷ್ಠಾನಗೊಳಿಸುವ ಚಿಂತನೆ ನಡೆದಿದೆ. ಯೋಜನೆಯ ಆರ್ಥಿಕ ಮಾದರಿಯ ಪ್ರಕಾರ ಶೇ.25ರಷ್ಟು ಅನುದಾನವನ್ನು ಕೇಂದ್ರ ಸರ್ಕಾರದಿಂದ, ಶೇ.25ರಷ್ಟು ಪಾಲನ್ನು ಸ್ಥಳೀಯ ಸಂಸ್ಥೆಯ ವತಿಯಿಂದ ಹಾಗೂ ಉಳಿದ ಶೇ.50ರಷ್ಟು ಮೊತ್ತವನ್ನು ಬ್ಯಾಂಕ್ ಸಾಲದ ಮೂಲಕ ಹೊಂದಿಸುವ ಉದ್ದೇಶವಿದೆ. ಸ್ಥಳೀಯ ಸಂಸ್ಥೆಗೆ ನಿರಂತರ ಆದಾಯ ತರುವಂತಹ ಯೋಜನೆಗಳನ್ನು ರೂಪಿಸುವುದು ಇದರ ಪ್ರಮುಖ ಆಶಯವಾಗಿದೆ.
ವಾಣಿಜ್ಯ ಮಾಲ್ ಮತ್ತು ಸಮಾವೇಶ ಕೇಂದ್ರ ಪ್ರಮುಖ ಆಕರ್ಷಣೆ
ಸುಮಾರು 17 ಎಕರೆ ಪ್ರದೇಶದಲ್ಲಿ ಬೃಹತ್ ವಾಣಿಜ್ಯ ಮಾಲ್ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಇದರೊಂದಿಗೆ ದೊಡ್ಡ ಮಟ್ಟದ ಸಮಾವೇಶ ಕೇಂದ್ರವನ್ನೂ ಅಭಿವೃದ್ಧಿಪಡಿಸುವ ಉದ್ದೇಶವಿದೆ. ಸಭೆ, ಸಮಾರಂಭ, ವಾಣಿಜ್ಯ ಕಾರ್ಯಕ್ರಮಗಳು ಹಾಗೂ ವಿವಿಧ ಸಾರ್ವಜನಿಕ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ಸಮಾವೇಶ ಕೇಂದ್ರವನ್ನು ನಿರ್ಮಿಸಲಾಗುತ್ತದೆ. ಈ ಯೋಜನೆಗಳು ಸ್ಥಳೀಯ ಸಂಸ್ಥೆಗೆ ನಿರಂತರ ಆದಾಯದ ಮೂಲವಾಗುವ ನಿರೀಕ್ಷೆಯಿದೆ.
ವಾಣಿಜ್ಯ ಮಾಲ್ನಲ್ಲಿ ನೆಲಮಹಡಿ ಹಾಗೂ ಮೊದಲ ಮಹಡಿಯ ಭಾಗದಲ್ಲಿ ವಿವಿಧ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುವುದರ ಜೊತೆಗೆ ನಾಲ್ಕು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳನ್ನು ಆರಂಭಿಸುವ ಯೋಜನೆಯೂ ಇದೆ. ಒಂದೇ ಆವರಣದಲ್ಲಿ ಶಾಪಿಂಗ್, ಸಿನಿಮಾ ಹಾಗೂ ಮನರಂಜನೆಯ ಸೌಲಭ್ಯಗಳು ಲಭ್ಯವಾಗಲಿವೆ.
ಕುಟುಂಬ ಸಮೇತ ಸಮಯ ಕಳೆಯಲು ಫುಡ್ಕೋರ್ಟ್, ಮನರಂಜನಾ ತಾಣ
ಮಾಲ್ ಆವರಣದಲ್ಲಿ ಸುಮಾರು 50ರಿಂದ 60 ಮಳಿಗೆಗಳನ್ನು ಒಳಗೊಂಡ ಬೃಹತ್ ಆಹಾರ ಮಳಿಗೆಗಳ ವಲಯವನ್ನು ನಿರ್ಮಿಸುವ ಉದ್ದೇಶವಿದೆ. ಇದರೊಂದಿಗೆ ಡಿಜೆ ವೇದಿಕೆ, ತೆರೆದ ರಂಗಮಂದಿರ, ಒಳಾಂಗಣ ಮನರಂಜನಾ ಆಟಗಳು ಸೇರಿದಂತೆ ಹಲವು ಆಕರ್ಷಣೆಗಳನ್ನು ಕಲ್ಪಿಸಲಾಗುತ್ತದೆ.ಕುಟುಂಬ ಸಮೇತ ಆಗಮಿಸುವವರು ಮೂರರಿಂದ ನಾಲ್ಕು ಗಂಟೆಗಳ ಕಾಲ ಆರಾಮವಾಗಿ ಕಾಲ ಕಳೆಯಲು ಸಾಧ್ಯವಾಗುವ ರೀತಿಯಲ್ಲಿ ಈ ಸಮಗ್ರ ಮನರಂಜನಾ ವಲಯವನ್ನು ರೂಪಿಸುವ ಚಿಂತನೆ ಇದೆ. ಮಕ್ಕಳಿಗಾಗಿ ಆಟದ ಮೈದಾನ, ಸಾರ್ವಜನಿಕರಿಗಾಗಿ ಹಸಿರು ವಲಯ ಹಾಗೂ ವಿಶ್ರಾಂತಿ ತಾಣಗಳನ್ನೂ ಅಭಿವೃದ್ಧಿಪಡಿಸಲಾಗುತ್ತದೆ.
240 ಐಷಾರಾಮಿ ಅಪಾರ್ಟ್ಮೆಂಟ್ಗಳ ನಿರ್ಮಾಣ
ಯೋಜನೆಯ ಮತ್ತೊಂದು ಪ್ರಮುಖ ಭಾಗವಾಗಿ ಮಲ್ಲೇಶ್ವರ ಪ್ರದೇಶದಲ್ಲಿ 240 ಐಷಾರಾಮಿ ಅಪಾರ್ಟ್ಮೆಂಟ್ಗಳನ್ನು ನಿರ್ಮಿಸುವ ಪ್ರಸ್ತಾವನೆ ರೂಪಿಸಲಾಗಿದೆ. ಈ ವಸತಿ ಸಮುಚ್ಚಯದಲ್ಲಿ ಈಜುಕೊಳ, ಟೆನಿಸ್ ಅಂಕಣ, ಬ್ಯಾಡ್ಮಿಂಟನ್ ಅಂಕಣ, ತೆರೆದ ರಂಗಮಂದಿರ ಸೇರಿದಂತೆ ವಿಶ್ವಮಟ್ಟದ ಜೀವನಶೈಲಿಗೆ ಪೂರಕವಾದ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶವಿದೆ.
ಇದರ ಜೊತೆಗೆ ಮಧ್ಯಮ ವರ್ಗ ಹಾಗೂ ಆರ್ಥಿಕವಾಗಿ ದುರ್ಬಲ ವರ್ಗದ ಜನರಿಗೂ ಕೈಗೆಟುಕುವ ದರದಲ್ಲಿ ಮನೆಗಳನ್ನು ಒದಗಿಸುವ ಉದ್ದೇಶದಿಂದ ಸುಮಾರು 200 ಅಪಾರ್ಟ್ಮೆಂಟ್ಗಳನ್ನು ನಿರ್ಮಿಸಿ ಮಾರಾಟ ಮಾಡುವ ಚಿಂತನೆಯೂ ಇದೆ. ಐಷಾರಾಮಿ ಅಪಾರ್ಟ್ಮೆಂಟ್ಗಳ ಮಾರಾಟದಿಂದ ಬರುವ ಆದಾಯ ಹಾಗೂ ಇತರ ವಾಣಿಜ್ಯ ಚಟುವಟಿಕೆಗಳ ಆದಾಯವನ್ನು ಸ್ಥಳೀಯ ಸಂಸ್ಥೆಯ ಪಾಲಿನ ಮೊತ್ತ ಮತ್ತು ಬ್ಯಾಂಕ್ ಸಾಲ ಮರುಪಾವತಿಗೆ ಬಳಸಿಕೊಳ್ಳುವ ಆರ್ಥಿಕ ಮಾದರಿಯನ್ನು ರೂಪಿಸಲಾಗಿದೆ.
ವಾಹನ ನಿಲುಗಡೆ, ಹಸಿರು ವಲಯಕ್ಕೂ ಆದ್ಯತೆ
ಮಾಲ್ ಹಾಗೂ ಸಮಾವೇಶ ಕೇಂದ್ರಕ್ಕೆ ಆಗಮಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ನೆಲಮಾಳಿಗೆಯಿಂದಲೇ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸುವ ಯೋಜನೆ ಇದೆ. ಇದರ ಜೊತೆಗೆ ಹೊರಾಂಗಣದಲ್ಲಿಯೂ ಪ್ರತ್ಯೇಕ ವಾಹನ ನಿಲುಗಡೆ ಸ್ಥಳಗಳನ್ನು ನಿರ್ಮಿಸಲಾಗುತ್ತದೆ. ವಸತಿ ಸಮುಚ್ಚಯಗಳ ಸುತ್ತಮುತ್ತ ಹಸಿರು ವಲಯ, ಮಕ್ಕಳ ಆಟದ ಮೈದಾನ ಹಾಗೂ ಸಾರ್ವಜನಿಕರು ವಿರಾಮದ ಸಮಯ ಕಳೆಯಲು ಅನುಕೂಲವಾಗುವ ಸೌಲಭ್ಯಗಳಿಗೂ ಆದ್ಯತೆ ನೀಡಲಾಗುತ್ತದೆ.
₹300ರಿಂದ ₹320 ಕೋಟಿ ಹೂಡಿಕೆಯ ಗುರಿ
ಈ ಸಮಗ್ರ ಯೋಜನೆಗೆ ಸುಮಾರು ₹300ರಿಂದ ₹320 ಕೋಟಿ ಹೂಡಿಕೆ ಆಕರ್ಷಿಸುವ ಗುರಿ ಹೊಂದಲಾಗಿದೆ. ಯೋಜನೆಯ ರೂಪುರೇಷೆಗಳನ್ನು ಸಿದ್ಧಪಡಿಸಿ ಸರ್ಕಾರದ ಮುಂದಿಡುವ ನಿಟ್ಟಿನಲ್ಲಿ ಸಭೆಗಳನ್ನು ನಡೆಸಲಾಗುತ್ತಿದೆ. ಯೋಜನೆಗೆ ಅಗತ್ಯ ಅನುಮೋದನೆ ದೊರೆತು ಅನುಷ್ಠಾನಕ್ಕೆ ಬಂದರೆ ಮಂಡ್ಯ ನಗರಕ್ಕೆ ಹೊಸ ವಾಣಿಜ್ಯ ಹಾಗೂ ಆರ್ಥಿಕ ಚೈತನ್ಯ ದೊರೆಯುವ ನಿರೀಕ್ಷೆಯಿದೆ.
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಟೌನ್ಶಿಪ್ ಕನಸಿಗೆ ಮರುಜೀವ
ಮಂಡ್ಯದಲ್ಲಿ ಸುಮಾರು 120 ಎಕರೆ ಪ್ರದೇಶದಲ್ಲಿ ಸಮಗ್ರ ಟೌನ್ಶಿಪ್ ನಿರ್ಮಿಸುವ ಪರಿಕಲ್ಪನೆ ಈ ಹಿಂದೆಯೂ ರೂಪುಗೊಂಡಿತ್ತು. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ ಹಾಗೂ ಸದಾನಂದ ಗೌಡ ಅವರ ಆಡಳಿತಾವಧಿಯಲ್ಲಿ ಈ ಸಂಬಂಧ ಪ್ರಯತ್ನಗಳು ನಡೆದಿದ್ದರೂ, ವಿವಿಧ ಕಾರಣಗಳಿಂದ ಯೋಜನೆ ನಿರೀಕ್ಷಿತ ಪ್ರಗತಿ ಕಂಡಿರಲಿಲ್ಲ. ಇದೀಗ ಮತ್ತೆ ಈ ಯೋಜನೆಗೆ ಮರುಜೀವ ನೀಡುವ ಪ್ರಯತ್ನ ನಡೆಯುತ್ತಿದೆ.
ಈ ಪ್ರದೇಶದಲ್ಲಿ ಟೌನ್ಶಿಪ್ ನಿರ್ಮಿಸುವ ಸಂಬಂಧ ಭೂಮಿಯ ಬೆಲೆ ಏರಿಕೆ ಸೇರಿದಂತೆ ಹಲವು ಸವಾಲುಗಳೂ ಎದುರಾಗಿವೆ. ಆದರೂ ಮಂಡ್ಯ ನಗರಕ್ಕೆ ಆಧುನಿಕ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಸಮಗ್ರ ಅಭಿವೃದ್ಧಿ ಯೋಜನೆಯನ್ನು ಸಾಕಾರಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಮಂಡ್ಯದಲ್ಲಿ ಕ್ರಿಕೆಟ್ ಕ್ರೀಡಾಂಗಣ, ಬೃಹತ್ ವಾಣಿಜ್ಯ ಮಾಲ್, ವಸತಿ ಸಮುಚ್ಚಯ ಹಾಗೂ ಮನರಂಜನಾ ಕೇಂದ್ರ ಸೇರಿದಂತೆ ಆಧುನಿಕ ನಗರಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒಂದೇ ಪ್ರದೇಶದಲ್ಲಿ ಅಭಿವೃದ್ಧಿಪಡಿಸುವ ಆಶಯವನ್ನು ಶಾಸಕ ಪಿ. ರವಿಕುಮಾರ್ ಗೌಡ ಗಣಿಗ ಅವರು ಹೊಂದಿದ್ದಾರೆ.
ಈ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿ ಅಗತ್ಯವಿರುವ ಅನುಮೋದನೆ ಹಾಗೂ ಸಹಕಾರ ಒದಗಿಸುವ ವಿಶ್ವಾಸ ವ್ಯಕ್ತವಾಗಿದೆ. ಯೋಜನೆ ಸಾಕಾರಗೊಂಡರೆ ಮಂಡ್ಯ ನಗರದ ವಾಣಿಜ್ಯ ಚಟುವಟಿಕೆಗಳಿಗೆ ಉತ್ತೇಜನ ದೊರೆಯುವುದರ ಜೊತೆಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಿ ಸ್ಥಳೀಯ ಸಂಸ್ಥೆಗೂ ದೀರ್ಘಕಾಲಿಕ ಆದಾಯದ ಮೂಲ ಸೃಷ್ಟಿಯಾಗಲಿದೆ. ಮಂಡ್ಯವನ್ನು ಕೇವಲ ಜಿಲ್ಲಾ ಕೇಂದ್ರವಾಗಿ ಉಳಿಸದೆ, ಆಧುನಿಕ ವಾಣಿಜ್ಯ, ವಸತಿ, ಕ್ರೀಡೆ ಹಾಗೂ ಮನರಂಜನಾ ಸೌಲಭ್ಯಗಳನ್ನು ಹೊಂದಿರುವ ಸುಸಜ್ಜಿತ ನಗರವನ್ನಾಗಿ ರೂಪಿಸುವ ಮಹತ್ವಾಕಾಂಕ್ಷೆಯ ಪ್ರಯತ್ನಕ್ಕೆ ಈ ಯೋಜನೆ ನಾಂದಿ ಹಾಡುವ ನಿರೀಕ್ಷೆಯಿದೆ.
















