ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಸಂಸ್ಥೆಯ (BSWML) ಟೆಂಡರ್ ಪ್ರಕ್ರಿಯೆಯಲ್ಲಿ ₹660 ಕೋಟಿಗೂ ಅಧಿಕ ಮೊತ್ತದ ಬೃಹತ್ ಅಕ್ರಮ ನಡೆದಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಇಡಿ ಮತ್ತು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಅಧಿಕಾರಿಗಳು ನಿಯಮ ಉಲ್ಲಂಘಿಸಿ ಹೆಚ್ಚುವರಿ ಮೊತ್ತ ಪಾವತಿಸುವ ಮೂಲಕ ಸರ್ಕಾರಕ್ಕೆ ಭಾರಿ ನಷ್ಟ ಉಂಟುಮಾಡಿದ್ದಾರೆ ಎನ್ನಲಾಗಿದೆ.

ಬೆಂಗಳೂರು (ನ.25): ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಸಂಸ್ಥೆಯ (BSWML) ಟೆಂಡರ್ ಪ್ರಕ್ರಿಯೆಯಲ್ಲಿ ₹660 ಕೋಟಿಗೂ ಅಧಿಕ ಮೊತ್ತದ ಬೃಹತ್ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಬಿಜೆಪಿ ಮುಖಂಡ ಎನ್.ಆರ್. ರಮೇಶ್, ನೂರಾಉ ಪುಟಗಳ ದಾಖಲೆಗಳ ಸಮೇತ ಜಾರಿ ನಿರ್ದೇಶನಾಲಯ (ED) ಮತ್ತು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.

ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ:

BSWML ಸಿಇಒ ಕರೀಗೌಡ, ಸಿಜಿಎಂ ರಾಜೇಶ್ ಎಸ್.ವಿ. ಮತ್ತು ಡಿಜಿಎಂ-1 ಚಂದ್ರಶೇಖರ್ ವಿರುದ್ಧ ಭ್ರಷ್ಟಾಚಾರ, ವಂಚನೆ, ಅಧಿಕಾರ ದುರುಪಯೋಗ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪಗಳನ್ನು ದೂರಿನಲ್ಲಿ ಪ್ರಸ್ತಾಪಿಸಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ 33 ಪ್ಯಾಕೇಜ್‌ಗಳ ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮಬಾಹಿರ ವ್ಯವಹಾರಗಳು ನಡೆದಿವೆ ಎಂದು ಆರೋಪಿಸಲಾಗಿದೆ.

ನಿಯಮ ಉಲ್ಲಂಘನೆ ಮತ್ತು ಹೆಚ್ಚುವರಿ ಹೊರೆ ವಿವರ:

  • ಒಂದು ಟೆಂಡರ್ ಪ್ರಕಟಣೆಯ ಬಳಿಕ 22 ಪ್ರತ್ಯೇಕ ಟೆಂಡರ್ ಪ್ರಕಟಣೆಗಳನ್ನು ಹೊರಡಿಸಲಾಗಿದೆ.
  • ಇಪಿಎಫ್ (EPF) ಇಲಾಖೆಯಿಂದ ಡೀಫಾಲ್ಟರ್ ಎಂದು ಗುರುತಿಸಲಾದ ಗುತ್ತಿಗೆದಾರರಿಗೆ ಟೆಂಡರ್ ನೀಡಬಾರದು ಎಂಬ ನಿಯಮವನ್ನು ಉಲ್ಲಂಘಿಸಲಾಗಿದೆ.
  • KPPP ಪೋರ್ಟಲ್‌ನಲ್ಲಿ ಶೇ.4.86ರಷ್ಟು ದರ ನಮೂದಿಸಿದ್ದರೂ ಶೇ.14ರಷ್ಟು ಹೆಚ್ಚುವರಿ ಮೊತ್ತಕ್ಕೆ ಅನುಮೋದನೆ ನೀಡಲಾಗಿದ್ದು, ಇದರಿಂದ ಐದು ನಗರ ಪಾಲಿಕೆಗಳಿಗೆ ₹90 ಕೋಟಿ ನಷ್ಟ ಹಾಗೂ ಬೆಂಗಳೂರಿನ ಜನರಿಗೆ ₹350 ಕೋಟಿ ಹೆಚ್ಚುವರಿ ಆರ್ಥಿಕ ಹೊರೆ ಬಿದ್ದಿದೆ ಎಂದು ಅಂಜುಂ ಪರ್ವೇಜ್ ನೇತೃತ್ವದ ಸಮಿತಿಯ ಲಿಖಿತ ವರದಿಯಲ್ಲಿ ಉಲ್ಲೇಖಿಸಲಾಗಿದೆ.
  • KPPP ಪೋರ್ಟಲ್‌ನಲ್ಲಿ LOI ಅಥವಾ LOA ಸಲ್ಲಿಸುವ ನಿಯಮವಿದ್ದರೂ ಭೌತಿಕ ಪತ್ರ ವ್ಯವಹಾರ ನಡೆಸಲಾಗಿದೆ.
  • ಮೂಲ ಟೆಂಡರ್ ದಾಖಲೆಗಳಲ್ಲಿ ಇಲ್ಲದ Contingency Expenditure ಶೇ.3, Tender Premium ಶೇ.5 ಮತ್ತು ವಾರ್ಷಿಕ ಶೇ.5 Escalation ಷರತ್ತುಗಳನ್ನು ನಂತರ ಸೇರ್ಪಡೆ ಮಾಡಲಾಗಿದೆ.
  • ₹3,844.19 ಕೋಟಿಯಷ್ಟಿದ್ದ ಮೂಲ ಬಿಡ್ ಮೊತ್ತವು ಪರಿಷ್ಕೃತ ಪಾವತಿ ಮೊತ್ತವಾಗಿ ₹4,504.32 ಕೋಟಿಗೆ ಏರಿದ್ದು, ಏಳು ವರ್ಷಗಳ ಅವಧಿಯಲ್ಲಿ ಹೆಚ್ಚುವರಿ ₹660.13 ಕೋಟಿ ಪಾವತಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಟೆಂಡರ್ ಸಲ್ಲಿಕೆ ಬಳಿಕ ಮಾರ್ಪಾಡು ಮಾಡಬಾರದು ಎಂಬ ಸುಪ್ರೀಂ ಕೋರ್ಟ್ ಆದೇಶವನ್ನೂ ಉಲ್ಲಂಘಿಸಲಾಗಿದೆ ಎಂದು ದೂರಲಾಗಿದೆ.

ಹೈಕೋರ್ಟ್ ಮೆಟ್ಟಿಲೇರಿದ ಬಿಡ್‌ದಾರರು:

ಟೆಂಡರ್ ಪ್ರಕ್ರಿಯೆಯಲ್ಲಿ ತಮಗೆ ಅನ್ಯಾಯವಾಗಿದೆ ಎಂದು ಇಬ್ಬರು ಬಿಡ್‌ದಾರರು ಹೈಕೋರ್ಟ್‌ನಲ್ಲಿ (WP 34832/2026 ಮತ್ತು WP 34833/2026) ಅರ್ಜಿ ಸಲ್ಲಿಸಿದ್ದಾರೆ. ಕಡಿಮೆ ದರ ನಮೂದಿಸುವಂತೆ ಸಿಇಒ ಕರೀಗೌಡ ಸೂಚಿಸಿದ್ದರು ಹಾಗೂ ಇತರ ಗುತ್ತಿಗೆದಾರರಿಗೆ ಶೇ.14ರಷ್ಟು ಹೆಚ್ಚುವರಿ ಮೊತ್ತ ನೀಡಿ ತಾರತಮ್ಯ ಮಾಡಲಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಯಶಸ್ವಿ 22 ಪ್ಯಾಕೇಜ್‌ಗಳ ಬಿಡ್‌ದಾರರನ್ನು ಖುದ್ದಾಗಿ ಕರೆಸಿ ದರ ನಮೂದಿಸುವಂತೆ ಒತ್ತಾಯಿಸಲಾಗಿದ್ದು, ಪಾರದರ್ಶಕತೆ ಮತ್ತು ನಿಷ್ಪಕ್ಷಪಾತತೆಯನ್ನು ಕಾಯ್ದುಕೊಂಡಿಲ್ಲ ಎಂದು ಎನ್.ಆರ್. ರಮೇಶ್ ಆರೋಪಿಸಿ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.