ಚಿತ್ತಾಪುರ: ಕೊರೋನಾ ತಡೆಗೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಿ, ಪ್ರಿಯಾಂಕ್ ಖರ್ಗೆ
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕು ಟಾಸ್ಕ್‌ಪೊರ್ಸ್ ಸಭೆಯಲ್ಲಿ ಶಾಸಕ ಪ್ರಿಯಾಂಕ್ ಸಲಹೆ| ಚಿತ್ತಾಪುರ ಪಟ್ಟಣದಲ್ಲಿ ನಾಗಾವಿ ಕ್ಯಾಂಪಸ್‌ನಲ್ಲಿ 100 ಬೆಡ್‌ಗಳ ಕೋವಿಡ್‌ಕೇರ್ ಸೆಂಟರ್ ಸ್ಥಾಪನೆ| ಇದೇ ತೆರನಾದ 50 ಬೆಡ್‌ಗಳ ಮತ್ತೊಂದು ಕೇರ್ ಸೆಂಟರ್‌ನ್ನು ವಾಡಿ ಪಟ್ಟಣದಲ್ಲಿ ತೆರೆಯಲು ಕ್ರಮ ಕೈಗೊಳ್ಳಿ ಎಂದ ಖರ್ಗೆ|
ಚಿತ್ತಾಪುರ(ಆ.03): ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ಸೊಂಕು ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನಲೆಯಲ್ಲಿ ಚಿತ್ತಾಪುರ ತಾಲೂಕಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಸೊಂಕು ಹರಡದಂತೆ ತಡೆಯಬೇಕು ಎಂದು ತಾಲೂಕು ಟಾಸ್ಕಪೊರ್ಸ್ ಕಮಿಟಿ ಅಧ್ಯಕ್ಷ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಪಟ್ಟಣದ ತಾಪಂ ಸಭಾಂಗಣದಲ್ಲಿ ಭಾನುವಾರ ನಡೆದ ಟಾಸ್ಕ್‌ಪೊರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಚಿತ್ತಾಪುರ, ಕಾಳಗಿ ಹಾಗೂ ಶಹಬಾದ ತಹಸೀಲ್ದಾರರು ಒಟ್ಟಾಗಿ ಚರ್ಚಿಸಿ ತಾಲೂಕಿನಲ್ಲಿ ಕೊರೊನಾ ಸೊಂಕು ಹರಡದಂತೆ ತಡೆಯಲು ಕ್ರಮಕೈಗೊಳ್ಳಬೇಕು ಎಂದ ಅವರು ಸೋಂಕು ತಡೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
ಕಲಬುರಗಿ ಮಂದಿ ‘ಮೆಡಿಕಲ್ ಎಮರ್ಜೆನ್ಸಿ’ ಭಯದಲ್ಲಿ ಬಂದಿ
ಚಿತ್ತಾಪುರ ಪಟ್ಟಣದಲ್ಲಿ ನಾಗಾವಿ ಕ್ಯಾಂಪಸ್‌ನಲ್ಲಿ ಈಗಾಗಲೇ 100 ಬೆಡ್‌ಗಳ ಕೋವಿಡ್‌ಕೇರ್ ಸೆಂಟರ್ ಸ್ಥಾಪಿಸಲಾಗಿದೆ. ಇದೇ ತೆರನಾದ 50 ಬೆಡ್‌ಗಳ ಮತ್ತೊಂದು ಕೇರ್ ಸೆಂಟರ್‌ನ್ನು ವಾಡಿ ಪಟ್ಟಣದಲ್ಲಿ ತೆರೆಯಲು ಕ್ರಮ ಕೈಗೊಳ್ಳಿ ಎಂದು ತಹಸೀಲ್ದಾರ ಉಮಾಕಾಂತ ಹಳ್ಳೆ ಹಾಗೂ ತಾಪಂ ಇಒ ಡಾ.ಬಸಲಿಂಗಪ್ಪ ಡಿಗ್ಗಿ ಅವರಿಗೆ ಸೂಚಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸೊಂಕಿತರು ಪತ್ತೆಹಚ್ಚಲು ಹಾಗೂ ಸೊಂಕು ಹಬ್ಬದಂತೆ ತಡೆಯಲು ಸಮುದಾಯ ಪರೀಕ್ಷೆ ನಡೆಸುವ ಅಗತ್ಯವಿದೆ, ಆ ಕೆಲಸ ಮಾಡಿರೆಂದು ಸೂಚಿಸಿದರು. ಸಮಗ್ರ ಮಾಹಿತಿಯುಳ್ಳ ವರದಿಯನ್ನು ಇದೇ ತಿಂಗಳು 10 ರೊಳಗಾಗಿ ಸಲ್ಲಿಸುವಂತೆ ಇಓ ರವರಿಗೆ ಸೂಚಿಸಿ ಅಗತ್ಯ ಬಂದೊಬಸ್ತ್ ಕಲ್ಪಿಸುವಂತೆ ಪೊಲಿಸ್ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ತಹಸೀಲ್ದಾರ ಉಮಾಕಾಂತ ಹಳ್ಳೆ, ತಾಪಂ ಇಒ ಡಾ.ಬಸಲಿಂಗಪ್ಪ ಡಿಗ್ಗಿ, ಸಿಪಿಐ ಕೃಷ್ಣಪ್ಪ ಕಲ್ಲದೇವರ್, ತಾಪಂ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ್, ಜಿಪಂ ಸದಸ್ಯ ಶಿವಾನಂದ ಪಾಟೀಲ್, ಶಿವರುದ್ರ ಭೀಣಿ ವೇದಿಕೆಯಲ್ಲಿದ್ದರು.