ಶೇಷಮೂರ್ತಿ ಅವಧಾನಿ

ಕಲಬುರಗಿ(ಆ.01): ಕೋವಿಡ್‌, ನಾನ್‌ ಕೋವಿಡ್‌ ರೋಗಿಗಳ ಚಿಕಿತ್ಸೆ ವಿಚಾರದಲ್ಲಿ ವಿವಿಧ ಸ್ವರೂಪದ ಸಮಸ್ಯೆಗಳು ಕಾಡುತ್ತಿರೋ ಕಲಬುರಗಿ ಮಂದಿ ಕಳೆದ 2, 3 ವಾರದಿಂದ ವೈದ್ಯಕೀಯ ‘ತುರ್ತು ಪರಿಸ್ಥಿತಿ’ಯ ಬಿಸಿ ಅನುಭವಿಸುವಂತಾಗಿದೆ.

ಸೋಂಕಿದ್ದವರಿಗೆ ಮನೆಗೆ ಬಂದು ಕರೆದೊಯ್ಯದ ಆರೋಗ್ಯ ಸಿಬ್ಬಂದಿ ಒಂದೆಡೆಯಾದರೆ, ನಮಗೆ ಸೋಂಕಿದೆ, ಉಸಿರಾಟದಲ್ಲಿ ತೊಂದರೆ ಇದೆ ಎಂದು ಆಸ್ಪತ್ರೆಗೆ ಹೋಗಿ ಅಂಗಲಾಚಿದರೂ ಚಿಕಿತ್ಸೆ ದೊರಕದೆ ಸೋಂಕಿತರು ತತ್ತರಿಸಿದ್ದಾರೆ, ನಾವು ನೆಗೆಟಿವ್‌, ಚಿಕಿತ್ಸೆ ಕೊಡಿರೆಂದು ಸರಕಾರಿ, ಖಾಸಗಿ ಆಸ್ಪತ್ರೆ ಅಲೆದರೂ ’ನಾನ್‌ ಕೋವಿಡ್‌’ ರೋಗಿಗಳಿಗೂ ಚಿಕಿತ್ಸೆ ಸಿಗದಂತಾಗಿದೆ. ಜಿಲ್ಲೆಯಲ್ಲಿ ಸೋಂಕು 5 ಸಾವಿರ ಗಡಿ ದಾಟಿದೆ, ಸಾವು 100 ರ ಗಡಿಯತ್ತ ಸಾಗುತ್ತಿದ್ದರೂ ಕೋವಿಡ್‌ ರೋಗಿಗಳಿಗೇ ಹಾಸಿಗೆ ಬರ, ನಾನ್‌ ಕೋವಿಡ್‌ ರೋಗಿಗಳಿಗೆ ವೈದ್ಯರ ದರುರ್ಶನ, ಚಿಕಿತ್ಸೆ ಅಭಾವ.

ದೇಶದ ಮೊದಲ ಕೊರೋನಾ ಸೋಂಕಿನ ಸಾವು ಇಲ್ಲೇ ಸಂಭವಿಸಿ ಸುದ್ದಿಯಾಗಿದ್ದ ಜಿಲ್ಲೆಯಲ್ಲಿ ಜಿಲ್ಲಾಡಳಿತ, ಆರೋಗ್ಯ ಇಲಾಖೆಯವರು ಕೋವಿಡ್‌ನತ್ತಲೇ ಲಕ್ಷ ನೆಟ್ಟಾಗ ನಾನ್‌ ಕೋವಿಡ್‌ ರೋಗಿಗಳು ಆಸ್ಪತ್ರ ಸಿಗದೆ, ಹಾಸಿಗೆ ಬರ ಕಾಡಿ, ವೈದ್ಯರ ಸ್ಪಂದನೆಯೂ ದೊರಕದೆ ಸಾವನ್ನಪ್ಪಿದ್ದರು. ಇದೀಗ ಕೋವಿಡ್‌ ರೋಗಿಗಳ ಸಂಖ್ಯೆಯಲ್ಲಿ ಏಕಾಏಕಿ ಏರಿಕೆ, ವೆಟಿಲೇಟರ್‌, ಐಸಿಯೂ ದೊರಕದೆ, ನಿಗದಿತ ಆಸ್ಪತ್ರೆಗಳಲ್ಲೇ ಸುರಳೀತ ಪ್ರವೇಶ ಸಿಗದೆ ಪರದಾಟ.
ಕೋವಿಡ್‌, ನಾನ್‌ ಕೋವಿಡ್‌, ಹಾಸಿಗೆ ಇದೆ, ಇಲ್ಲ, ಅಂಬುಲನ್ಸ್‌, ಬಂತು- ಬರಲಿಲ್ಲ, ವೈದ್ಯರು, ದಾದಿಯರೇ ಕೆಲಸಕ್ಕೆ ಬರುತ್ತಿಲ್ಲ... ಎಂಬ ಆಡಳಿತಾತ್ಮಕ ಗೊಂದಲಗಳ ಸುಳಿಯಲ್ಲಿ ಸಿಲುಕಿರುವ ಕಲಬುರಗಿ ರೋಗ ಪೀಡಿತರ ’ಪರೇಶಾನಿ’ಗೆ ಜಿಲ್ಲಾಡಳಿತ ಮದ್ದರೆಯೋದು ಯಾವಾಗ? ಕಾದು ನೋಡಬೇಕಷ್ಟೆ.

ಕೋವಿಡ್‌ ನೆಗೆಟಿವ್‌ ಬಂದ್ರೂ ಚಿಕಿತ್ಸೆ ನೀಡಲು ಹಿಂದೇಟು: ಶವ ಸಮೇತ ಡಿಸಿ ಕಚೇರಿಗೆ ಬಂದ ಬಂಧುಗಳು

ಸುಧಾರಣೆ ಶೂನ್ಯ!

1) ಆಸ್ಪತ್ರೆ ಅಲೆದ್ರೂ ಚಿಕಿತ್ಸೆ ಸಿಗದೆ ಸಾವನ್ನಪ್ಪಿರೋ ಕಲಬುರಗಿ ಅಯ್ಯೂಬ್‌, ವಾಡಿ ಮುಸ್ತಾಫಾ ಪ್ರಕರಣಗಳಿಂದ ವ್ಯವಸ್ಥೆಯಲ್ಲಿ ಕಿಂಚಿತ್ತೂ ಸುಧಾರಣೆ ಇಲ್ಲ
2) ತಿಂಗಳ ಹಿಂದಷ್ಟೆಚಿಕಿತ್ಸೆ ಸಿಗದೆ ಚಿತ್ತಾಪುರ, ಚಿಂಚೋಳಿಯ ನಾನ್‌ ಕೋವಿಡ್‌ ರೋಗಿಗಳ ಸಾವಾದರೂ ಸಿಗುತ್ತಿಲ್ಲ ಸೂಕ್ತ ಸ್ಪಂದನೆ
3) ವೆಂಟೇಲೆಟರ್‌ ಬೆಡ್‌ ಸಿಗಲಿಲ್ಲವೆಂದು ಅಂಗನವಾಡಿ ಕಾರ್ಯಕರ್ತೆ ಸೇರಿ ನಾಲ್ವರ ಸಾವಾದರೂ ಪಾಠ ಕಲಿಯದ ಜಿಲ್ಲಾಡಳಿತ
4) ಅಪಸವ್ಯಗಳು ಮಾಸುವ ಮುನ್ನವೇ ಹಾಸಿಗೆ ಬರ, ವೈದ್ಯರ ಅಲಕ್ಷತನದ ಸಾವು- ನೋವಿನ ಪ್ರಕರಣಗಳ ಪುನರಾವರ್ತನೆ- ಕಲಬುರಗಿ ಕಂಗಾಲು
5) ಸೋಂಕು- ಸಾವು ಹೆಚ್ಚುತ್ತಿದ್ದರೂ ಜಿಲ್ಲಾಡಳಿತದೊಂದಿಗೆ ಹೆಜ್ಜೆ ಹಾಕುವಲ್ಲಿ ಹಿಂದೆಮುಂದೆ ನೋಡುತ್ತಿರೋ ಖಾಸಗಿ ಆಸ್ಪತ್ರೆಗಳು- ಕ್ರಮಕ್ಕೆ ಆಡಳಿತದ ಮೀನಮೇಷ
6) ಕೋವಿಡ್‌, ನಾನ್‌ ಕೋವಿಡ್‌ ಇಬ್ಬರಿಗೂ ಬೆಡ್‌, ಆಸ್ಪತ್ರೆ ಪ್ರವೇಶ, ವೈದ್ಯರ ಸಲಹೆ ಮರೀಚಿಕೆ, ಮುಂದೇನೆಂಬ ಭೀತಿ!
7) 5 ತಿಂಗಳಿಂದ ಆಯೋಮಯ ಪರಿಸ್ಥಿತಿ, ಸೋಂಕು, ಸಾವಿನ ನಾಗಾಲೋಟದ ಸುಳಿವಿದ್ದರೂ ಜಿಲ್ಲಾಡಳಿತ ಸಿದ್ಧತೆಯಲ್ಲಿ ಎಡವಿತೆ?

ಗೊಂದಲ ಬೇಡ: ಡಿಸಿ ಶರತ್‌ ಮನವಿ

ಕೋವಿಡ್‌ ಆಸ್ಪತ್ರೆಗಳಲ್ಲಿನ ಐಸಿಯೂ ಬೆಡ್‌ಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡು ಸಾರ್ವಜನಿಕರು ಅನಗತ್ಯ ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ಕೊರೋನಾ ಸೊಂಕಿತ ವ್ಯಕ್ತಿಯ ಆರೋಗ್ಯ ಸ್ಥಿತಿ/ಲಕ್ಷಣಗಳನ್ವಯ ವೈದ್ಯರು ಸದರಿ ರೋಗಿಗೆ ಐಸಿಯು ವಾರ್ಡ್‌, ಹೆಚ್‌ಡಿಯು (HDU-High Dependency Unit/ICU) ಅಥವಾ ಸಾಮಾನ್ಯ ವಾರ್ಡ್‌ಗಳಲ್ಲಿ ಆಮ್ಲಜನಕ ಲಭ್ಯತೆ ಅನುಸಾರ ಚಿಕಿತ್ಸೆ ನೀಡಲು ನಿರ್ಧರಿಸುತ್ತಾರೆ. ಸಾರ್ವಜನಿಕರು ಯಾವುದೇ ಗೊಂದಲಕ್ಕೊಳಗಾಗದೇ ವೈದ್ಯ ಸಿಬ್ಬಂದಿಯೊಂದಿಗೆ ಸಹಕರಿಸಬೇಕಂದು ಡಿಸಿ ಶರತ್‌ ಮನವಿ ಮಾಡಿದ್ದಾರೆ.