ಬಿಜೆಪಿಯಲ್ಲಿ ಭಿನ್ನಮತ: 'ಸಚಿವ ಸ್ಥಾನ ಸಿಗದೆ ಹೋದ್ರೆ ಕಾರ್ಯಕರ್ತನಾಗಿರುವೆ'
ಉಮೇಶ್ ಕತ್ತಿ ಅವರನ್ನು ಮೊದಲನೇ ಹಂತದಲ್ಲಿಯೇ ಸಚಿವರನ್ನಾಗಿ ಮಾಡಬೇಕಿತ್ತು, ಅನಿವಾರ್ಯ ಕಾರಣದಿಂದ ಅದು ಸಾಧ್ಯವಾಗಿಲ್ಲ| ಪಕ್ಷದ ರಾಜ್ಯ ಅಧ್ಯಕ್ಷರು, ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಮಾಡಿ ಬರುವ ಸಂಪುಟ ಪುನರಚನೆ ಸಂದರ್ಭದಲ್ಲಿ ಕತ್ತಿಯವರನ್ನು ಮಂತ್ರಿಯನ್ನಾಗಿ ಮಾಡಿ ಉತ್ತಮ ಖಾತೆ ನೀಡಬೇಕು: ಮಾಜಿ ಸಚಿವ ಮುರಗೇಶ ನಿರಾಣಿ|
ಬಾಗಲಕೋಟೆ(ಜೂ.01): ಸಚಿವ ಸ್ಥಾನದ ಅವಕಾಶ ನೀಡಿದರೆ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವೆ, ಸಚಿವ ಸ್ಥಾನ ಸಿಗದೆ ಹೋದರೆ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಇರುವೆ ಎಂದು ಮಾಜಿ ಸಚಿವ, ಶಾಸಕ ಮುರಗೇಶ ನಿರಾಣಿ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಮಾತನಾಡಿರುವ ಅವರು, ಸಚಿವ ಸ್ಥಾನದ ಆಕಾಂಕ್ಷಿ ನಾನಾಗಿರುವುದು ಸ್ವಾಭಾವಿಕ, ಸ್ಥಾನ ಸಿಕ್ಕರೆ ಪಕ್ಷಕ್ಕೆ, ಸರ್ಕಾರಕ್ಕೆ ಗೌರವ ತರುವ ಕೆಲಸ ಮಾಡುವೆ. ಇಲ್ಲದಿದ್ದರೂ ಸಹ ಪಕ್ಷಕ್ಕೆ ನಿಷ್ಟನಾಗಿರುವುದಾಗಿ ಹೇಳಿಕೊಂಡಿದ್ದಾರೆ. ಈ ವಿಷಯದಲ್ಲಿ ನನಗೆ ಈ ಹಿಂದೆ ಅಥವಾ ಬರುವ ದಿನಗಳಲ್ಲೂ ಸಹ ಅಸಮಾಧಾನ ಇಲ್ಲ ಎಂದರು.
ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ: 'ಉಮೇಶ್ ಕತ್ತಿ ಪಕ್ಷದ ವೇದಿಕೆಯಲ್ಲಿ ಮಾತನಾಡಲಿ'
ಕತ್ತಿಗೆ ಸಚಿವ ಸ್ಥಾನ ಸಿಗಲಿ:
ಹಿರಿಯ ಶಾಸಕರಾಗಿರುವ ಉಮೇಶ್ ಕತ್ತಿ ಅವರನ್ನು ಮೊದಲನೇ ಹಂತದಲ್ಲಿಯೇ ಸಚಿವರನ್ನಾಗಿ ಮಾಡಬೇಕಿತ್ತು. ಅನಿವಾರ್ಯ ಕಾರಣದಿಂದ ಅದು ಸಾಧ್ಯವಾಗಿಲ್ಲ. ಆದರೆ, ಪಕ್ಷದ ರಾಜ್ಯ ಅಧ್ಯಕ್ಷರು, ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಮಾಡಿ ಬರುವ ಸಂಪುಟ ಪುನರಚನೆ ಸಂದರ್ಭದಲ್ಲಿ ಕತ್ತಿಯವರನ್ನು ಮಂತ್ರಿಯನ್ನಾಗಿ ಮಾಡಿ ಉತ್ತಮ ಖಾತೆ ನೀಡಬೇಕು ಎಂದು ತಿಳಿಸುತ್ತೇನೆ ಎಂದರು.
ಭಾನುವಾರ ಮಾಧ್ಯಮಗಳಲ್ಲಿ ಹರಿದಾಡಿದ ತಾವಿರುವ ಭಾವಚಿತ್ರದ ಕುರಿತು ಪ್ರತಿಕ್ರಿಯಿಸಿರುವ ನಿರಾಣಿ, ಕಳೆದ ಎರಡು ತಿಂಗಳ ಹಿಂದೆ ಬೆಂಗಳೂರಿನ ನನ್ನ ಮನೆಯಲ್ಲಿ ನಾನು, ಶಾಸಕ ರಾಮದಾಸ್, ಶಾಸಕರಾದ ಉಮೇಶ್ ಕತ್ತಿ ಸೇರಿರುವುದು ನಿಜ. ಅದರಲ್ಲಿ ವಿಶೇಷವೇನಿಲ್ಲ. ಅದಕ್ಕೆ ವಿಶೇಷ ಅರ್ಥ ಬೇಡ. ಅಂದಿನ ಭೇಟಿ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಅಥವಾ ಸರ್ಕಾರದ ವಿರುದ್ಧ ಅಸಮಾಧಾನದ ಭೇಟಿ ಎಂಬ ಅರ್ಥದಲ್ಲಿ ಮಾಧ್ಯಮಗಳು ಬಿಂಬಿಸಬಾರದು ಎಂದು ತಿಳಿಸಿದರು.