'ಸ್ವಾತಂತ್ರ್ಯ ನಂತರ ನೀರಾವರಿಗೆ ಹೆಚ್ಚು ಹಣ ನೀಡಿದ್ದು ಸಿದ್ದರಾಮಯ್ಯ ಸರ್ಕಾರ'
8.40 ಕೋಟಿ ವೆಚ್ಚದ ರಸ್ತೆಗೆ ಚಾಲನೆ ಶಾಸಕ ಎಂ.ಬಿ. ಪಾಟೀಲ| ಸಿದ್ದರಾಮಯ್ಯನವರ ಸರ್ಕಾರದಲ್ಲಿ ರಾಜ್ಯದ ನೀರಾವರಿ ಯೋಜನೆಗಳಲ್ಲಿ ಸಿಂಹಪಾಲು ವಿಜಯಪುರ ಜಿಲ್ಲೆಗೆ ದೊರೆತಿದೆ, ಅದರಲ್ಲಿ 224 ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚಿನ ಅನುದಾನ ಬಬಲೇಶ್ವರ ಕ್ಷೇತ್ರಕ್ಕೆ ದೊರೆತಿದೆ|
ವಿಜಯಪುರ(ಸೆ.11): ಸ್ವಾತಂತ್ರ್ಯ ನಂತರ ರಾಜ್ಯಾದ್ಯಂತ ನೀರಾವರಿ ಇಲಾಖೆಗೆ ಅತೀ ಹೆಚ್ಚಿನ ಅನುದಾನ ನೀಡಿದ ಕೀರ್ತಿ ಸಿದ್ದರಾಮಯ್ಯನವರ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಮಾಜಿ ಸಚಿವ, ಶಾಸಕ ಎಂ.ಬಿ. ಪಾಟೀಲ ಹೇಳಿದ್ದಾರೆ.
ತಿಕೋಟಾ ತಾಲೂಕಿನ ತಾಜಪೂರ ಗ್ರಾಮದಲ್ಲಿ ಗುರುವಾರ 8.40 ಕೋಟಿ ವೆಚ್ಚದ ತಾಜಪೂರ-ಕಣಮುಚನಾಳ 7.40 ಕಿಮೀ ರಸ್ತೆ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಸಿದ್ದರಾಮಯ್ಯನವರ ಸರ್ಕಾರದಲ್ಲಿ ರಾಜ್ಯದ ನೀರಾವರಿ ಯೋಜನೆಗಳಲ್ಲಿ ಸಿಂಹಪಾಲು ವಿಜಯಪುರ ಜಿಲ್ಲೆಗೆ ದೊರೆತಿದೆ. ಅದರಲ್ಲಿ 224 ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚಿನ ಅನುದಾನ ಬಬಲೇಶ್ವರ ಕ್ಷೇತ್ರಕ್ಕೆ ದೊರೆತಿದೆ ಎಂದರು.
ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸುವ ಕಾರ್ಯ ಪ್ರಗತಿಯಲ್ಲಿದೆ. ಇದರ ಅಗತ್ಯತೆ ಕುರಿತು ನೀರಾವರಿ ಸಚಿವರೊಂದಿಗೆ ಚರ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಟ್ಯಾಂಕರ್ ನೀರು ತರುವ ಅಗತ್ಯವಿರುವುದಿಲ್ಲ. ಆದಷ್ಟುಬೇಗ ಎಲ್ಲ ಹೊಲಗಳಿಗೆ ಎಫ್‌ಐಸಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ವಿಜಯಪುರ: ಶಾಸಕ ಯತ್ನಾಳಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪಿ ಬಂಧನ
ಇಂದು ನೀರಾವರಿ ಯೋಜನೆ ಮಾಡಿದ್ದರಿಂದ 5 ಲಕ್ಷ ಕಿಮ್ಮತ್ತಿನ ಜಮೀನು 15-20 ಲಕ್ಷ ಆಗಿದೆ. ರೈತರನ್ನು ಶ್ರೀಮಂತಗೊಳಿಸುವ ಕೆಲಸವನ್ನು ನಾನು ಮಾಡಿದ್ದು, ನಿಮ್ಮ ಜಮೀನು ಮಾರದೇ ಸ್ವಾವಲಂಬಿ ಜೀವನ ನಡೆಸಬೇಕು ಎಂದು ಕರೆ ನೀಡಿದರು.
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಹಂತ-3ರ ಅಡಿಯಲ್ಲಿ ತಾಜಪೂರ-ಕಣಮುಚನಾಳವರೆಗೆ ಹಾಗೂ ಹರನಾಳ-ತಿಕೋಟಾವರೆಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಅನುದಾನ ಬಿಡುಗಡೆಗೊಳಿಸಲು ಜ. 8ರಂದು ಪತ್ರ ಬರೆದಿದ್ದೆ. ಅದು ಈಗ ಮಂಜೂರಾಗಿ 10.50 ಕೋಟಿ ವೆಚ್ಚದಲ್ಲಿ 13.50 ಕಿಮೀ ಉದ್ದ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮುಂದಿನ ಒಂದು ವರ್ಷದ ಒಳಗಾಗಿ ಸುಸಜ್ಜಿತ ರಸ್ತೆ ನಿರ್ಮಾಣವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ತಾಪಂ ಅಧ್ಯಕ್ಷೆ ಪ್ರಭಾವತಿ ನಾಟಿಕಾರ, ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನ್ನವರ, ಪಿಜಿಎಸ್‌ವೈ ಕಾರ್ಯ ನಿರ್ವಾಹಕ ಅಭಿಯಂತರರು ಅಜೀತ ಗಾಳೆ, ಎಇಇ ಪ್ರಭಾಕರ ದಾಶ್ಯಾಳ, ಗುತ್ತಿಗೆದಾರ ಎಂ.ಬಿ. ಬೀಳಗಿ, ಗ್ರಾಮದ ಮುಖಂಡರಾದ ಆರ್.ಜಿ. ಯರನಾಳ, ಭೀಮನಗೌಡ ಪಾಟೀಲ, ಕಾಶಿನಾಥಗೌಡ ಪಾಟೀಲ, ಗೌಸಪೀರ ಜಮಾದಾರ, ರಾಮಗೊಂಡ ಸಂಖ, ರಾಚಗೊಂಡ ಸೊಲಾಪುರ, ಕಾಶಪ್ಪ ಪೂಜಾರಿ, ಲಕ್ಷ್ಮಣ ಚಾಪೆ, ಸಂಜೀವ ಖೈರಾವ, ಜಾಕೀರ ಬಾಗವಾನ ಅನೇಕರಿದ್ದರು.