ವಿಜಯಪುರ(ಸೆ.09): ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಕೊಲೆ ಬೆದರಿಕೆಯೊಡ್ಡಿದ ವ್ಯಕ್ತಿಯೊಬ್ಬನನ್ನು ಪೊಲೀಸರು ಸೋಮವಾರ ಬಂಧಿಸಿ, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ ಅಗರವಾಲ ತಿಳಿಸಿದ್ದಾರೆ.

ನಗರದ ಕನಕದಾಸ ಬಡಾವಣೆಯ ರಘು ಕಣಮೇಶ್ವರ (39) ಬಂಧಿತ ಆರೋಪಿ. ಈತ ಇತ್ತೀಚೆಗೆ ನಗರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಹರಿಕೆ ಮರಿ ಕಡಿದು ಹಾಕುವಂತೆ ಕಡಿಯುವುದಾಗಿ ಬಹಿರಂಗವಾಗಿಯೇ ಶಾಸಕರಿಗೆ ಕೊಲೆ ಬೆದರಿಕೆ ಹಾಕಿದ್ದನು. 

ಶಾಸಕ ಯತ್ನಾಳಗೆ ಕೊಲೆ ಬೆದರಿಕೆ: ಕ್ರಮಕ್ಕೆ ಪ್ರಧಾನಿ ಮೋದಿಗೆ ದೂರು

ಕೊಲೆ ಬೆದರಿಕೆ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ತೀವ್ರ ಚರ್ಚೆಗೀಡಾಗಿತ್ತು. ಆರೋಪಿ ಪರಾರಿಯಾಗಿ ತಲೆಮರೆಸಿಕೊಂಡಿದ್ದ. ನಂತರ ತಾಂಡಾವೊಂದರ ಹೊಲಗಳಲ್ಲಿ ಅಡಗಿಕೊಂಡು ವಿಡಿಯೋ, ಆಡಿಯೋ ಹರಿಬಿಟ್ಟಿದ್ದ. ಪೊಲೀಸರು ಕಾರ್ಯಾಚರಣೆ ನಡೆಸಿ, ಸೋಮವಾರ ರಾತ್ರಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಸಂಬಂಧ ಗೋಳಗುಮ್ಮಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ ಅಗರವಾಲ್‌ ತಿಳಿಸಿದ್ದಾರೆ.