ದೇವದುರ್ಗ(ಜು.18): ತಾಲೂಕಿನಾದ್ಯಂತ ಕೊರೋನಾ ಹಾವಳಿ ತೀವ್ರಗೊಂಡಿದ್ದು, ನಾಗರಿಕರು ಆತಂಕಗೊಂಡಿದ್ದಾರೆ. ಶಾಸಕ ಕೆ.ಶಿವನಗೌಡ ನಾಯಕರ ಬಳಿ ಪಾಸಿಟಿವ್‌ ವ್ಯಕ್ತಿಯೊಬ್ಬರು ಬಂದು ಭೇಟಿ ಮಾಡಿರುವ ಹಿನ್ನೆಲೆಯಲ್ಲಿ ಸ್ವಯಂ ಹೋಂ ಕ್ವಾರಂಟೈನ್‌ನಲ್ಲಿರಲು ನಿರ್ಧರಿಸಿದ್ದಾರೆ.

ನಿನ್ನೆ(ಶುಕ್ರವಾರ) ಸಾಮಾಜಿಕ ಜಾಲತಾಣಗಳಲ್ಲಿ ಶಾಸಕರ ನಿಲುವು ಪ್ರಕಟಗೊಂಡಿದ್ದು, ಸಾರ್ವಜನಿಕರ ಭೇಟಿ ಸಂದರ್ಭದಲ್ಲಿ ಈ ಅತಾಚುರ್ಯ ಜರುಗಿದೆ. ಕಾರಣ ಎಲ್ಲರ ಆರೋಗ್ಯ ದೃಷ್ಠಿಯಿಂದ 15 ದಿನಗಳ ವರೆಗೆ ಯಾರೂ ಭೇಟಿ ಮಾಡಬಾರದು. ಅಗತ್ಯವಿದ್ದಲ್ಲಿ ಆಪ್ತ ಸಹಾಯಕರಿಗಾಗಲಿ ಅಥವಾ ತುರ್ತು ಸಂದರ್ಭವಿದ್ದಲ್ಲಿ ನನಗೆ ದೂರವಾಣಿಯಲ್ಲಿ ಸಂಪರ್ಕಿಸಬೇಕೆಂಬ ಮನವಿಯನ್ನು ಶಾಸಕ ಶಾಸಕ ಕೆ.ಶಿವನಗೌಡ ನಾಯಕ ತಿಳಿಸಿದ್ದಾರೆ. ಈಗಾಗಲೇ ದೇವದುರ್ಗ ಪಟ್ಟಣದಲ್ಲಿ ಕೊರೋನಾ ಪಾಸಿಟಿವ್‌ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕೆಇಬಿ ಮುಖ್ಯರಸ್ತೆ ಮತ್ತು ಗಾಂಧಿ ವೃತ್ತ ರಸ್ತೆ ಮಾರ್ಗ ಮಧ್ಯೆ ಸೀಲ್‌ಡೌನ್‌ ಮಾಡಲಾಗಿದೆ. ತಾಲೂಕಿನಲ್ಲಿ ಇದುವರೆಗೆ 366 ಪ್ರಕರಣಗಳು ಬೆಳಕಿಗೆ ಬಂದಿದ್ದು, ಬಹುತೇಕರು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ಖಚಿತಪಡಿಸಿವೆ.

ಲಾಕ್‌ಡೌನ್ ವೇಳೆ MLA ಕಾರಿನಲ್ಲಿ ಚಾಲಕನ ಓಡಾಟ, ಕಾರು ತಡೆದ ಪೊಲೀಸ್!

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ಸಿಬ್ಬಂದಿ ಒಬ್ಬರಿಗೆ ಪಾಸಿಟಿವ್‌ ಕಂಡುಬಂದ ಹಿನ್ನೆಲೆಯಲ್ಲಿ ಆತಂಕದ ವಾತಾವರಣ ಕಂಡುಬಂತು.ಆಸ್ಪತ್ರೆಯಲ್ಲಿ ಸ್ವಚ್ಛತಾ ಕ್ರಮಗಳನ್ನು ಕೈಗೊಂಡು ಸಾರ್ವಜನಿಕರ ಸೇವೆಗೆ ಅಣಿಗೊಳಿಸಲಾಗಿದೆ. ತಾಲೂಕಿನ ಕೆ. ಇರಬಗೇರಾ ಗ್ರಾಪಂ ವ್ಯಾಪ್ತಿಯಲ್ಲಿ ಓರ್ವ ಪಾಸಿಟಿವ್‌ ವ್ಯಕ್ತಿಯೊಬ್ಬ ಎಸ್‌ಬಿಐ ಶಾಖೆಗೆ ಭೇಟಿ ನೀಡಿರುವದು ಪತ್ತೆಯಾಗಿದೆ. ಹೀಗಾಗಿ ಬ್ಯಾಂಕ್‌ ಶಾಖೆಯನ್ನು ಕೂಡ ಸೀಲ್‌ಡೌನ್‌ ಮಾಡಬೇಕೆ ಎಂಬ ಚರ್ಚೆ ನಡೆದಿದೆ.