ಉಡುಪಿಯಲ್ಲಿ ಗಾಳಿಗೂ ಬಿಲ್: 8,000 ನೀರಿನ ಮೀಟರ್ ಕಿತ್ತೊಗೆಯಲು ಶಾಸಕ ಭಟ್ ಸೂಚನೆ
ಜನರಿಗೆ ಕುಡಿಯುವ ನೀರು ಉಚಿತವಾಗಿ ಸಿಗಬೇಕು ಅನ್ನೋದು ಆದರ್ಶ ಸಮಾಜದ ಕಲ್ಪನೆ. ಆದರೆ ನೀರಿಗೆ ಮೀಟರ್ ಅಳವಡಿಸಿ ಬಿಲ್ ಪಡೆಯುವುದು ನಗರಾಡಳಿತ ವ್ಯವಸ್ಥೆಯಲ್ಲಿ ಸಾಮಾನ್ಯ. ಆದರೆ ಉಡುಪಿಯಲ್ಲಿ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ನೀರಿನ ಜೊತೆ ಗಾಳಿಗೂ ಹಣ ಕೊಡಬೇಕಾದ ಸ್ಥಿತಿ ಎದುರಾಗಿದೆ.
ಉಡುಪಿ (ಜು.21): ಜನರಿಗೆ ಕುಡಿಯುವ ನೀರು ಉಚಿತವಾಗಿ ಸಿಗಬೇಕು ಅನ್ನೋದು ಆದರ್ಶ ಸಮಾಜದ ಕಲ್ಪನೆ. ಆದರೆ ನೀರಿಗೆ ಮೀಟರ್ ಅಳವಡಿಸಿ ಬಿಲ್ ಪಡೆಯುವುದು ನಗರಾಡಳಿತ ವ್ಯವಸ್ಥೆಯಲ್ಲಿ ಸಾಮಾನ್ಯ. ಆದರೆ ಉಡುಪಿಯಲ್ಲಿ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ನೀರಿನ ಜೊತೆ ಗಾಳಿಗೂ ಹಣ ಕೊಡಬೇಕಾದ ಸ್ಥಿತಿ ಎದುರಾಗಿದೆ. ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ವಾರಾಹಿ ಕುಡಿಯುವ ನೀರಿನ ಪೂರೈಕೆಯ ಗುತ್ತಿಗೆಯನ್ನು ವಹಿಸಿಕೊಂಡಿರುವ ಕೆಯುಐಡಿಎಫ್‍ಸಿ ಸಂಸ್ಥೆ ಅಳವಡಿಸಿದ ಹೊಸ ನೀರಿನ ಮೀಟರ್‌ನಲ್ಲಿ ನೀರು ಬಿಡಿ.. ಗಾಳಿ (ಏರ್ ಪ್ರೆಶರ್)ಗೂ ರನ್ ಆಗುತ್ತಿರುವುದು ಇದೀಗ ಬಯಲಾಗಿದೆ.
ಈ ಬಗ್ಗೆ ಉಡುಪಿ ನಗರಸಭೆ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪವಾಗಿದೆ. ಸಂಸ್ಥೆ ಈವರೆಗೆ ಅಳವಡಿಸಿದ ಸುಮಾರು 8,000 ಮೀಟರ್ ಗಳನ್ನು ತಕ್ಷಣ ತೆಗೆದು ಹಾಕುವಂತೆ ಶಾಸಕ ಕೆ.ರಘುಪತಿ ಭಟ್ ಅವರು ಸೂಚಿಸಿದ್ದಾರೆ. ನಗರಸಭೆಯ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯ ಸುಂದರ ಕೆ.ಕಲ್ಮಾಡಿ ಅವರು ಈ ಅವಾಂತರದ ಬಗ್ಗೆ ಸಭೆಯ ಗಮನ ಸೆಳೆದರು. 300 ರೂ.ನೀರಿನ ಬಿಲ್ ಬರುತ್ತಿದ್ದ ಮನೆಗಳಿಗೆ 1,300 ರೂ. ಬಿಲ್ ಬರುತ್ತಿದ್ದು, ಇದರ ಮರ್ಮವೇನು ಎಂದು ಅವರು ಅಧ್ಯಕ್ಷರನ್ನು ಪ್ರಶ್ನಿಸಿದರು.
ಕರಾವಳಿಯಲ್ಲಿ ಕಡಲ್ಕೊರೆತ; ಕಡಲಜೀವಶಾಸ್ತ್ರಜ್ಞರಿಂದ ಎಚ್ಚರಿಕೆ
ಕೆಯುಐಡಿಎಫ್‍ಸಿ ಸಂಸ್ಥೆಯ ಅಧಿಕಾರಿ ಅರಕೇಶ್ ಅವರು 24*7 ನೀರು ಪೂರೈಕೆಯ ದೃಷ್ಟಿಯಿಂದ ಈ ನೂತನ ಮೀಟರ್ ಅಳವಡಿಸಿದ್ದು, ಇದು ನೀರು ಮಾತ್ರವಲ್ಲದೆ ಪೈಪ್‍ನಲ್ಲಿ ಬರುವ ಗಾಳಿ ಒತ್ತಡಕ್ಕೂ ರನ್ ಆಗುತ್ತದೆ ಎಂದು ಉತ್ತರಿಸಿದಾಗ ನಗರ ಸಭೆ ದಂಗಾಯಿತು. ಇದರಿಂದ ಗಾಬರಿಯಾದ ಶಾಸಕ ರಘುಪತಿ ಭಟ್ ಅವರು ಸಂಸ್ಥೆಯ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಈವರೆಗೆ ಅಳವಡಿಸಲಾದ ಎಲ್ಲಾ ಮೀಟರ್‌ಗಳನ್ನು ತೆಗೆದು ಹಾಕುವಂತೆ ಸೂಚಿಸಿದರು.
ಕೆಯುಐಡಿಎಫ್‍ಸಿನ ಇನ್ನೋರ್ವ ಅಧಿಕಾರಿ ರಾಜಶೇಖರ್ ಅವರು ವಾರಾಹಿ ನೀರು 24*7 ಬಂದ ಮೇಲೆ ಈ ಸಮಸ್ಯೆ ಇರದು. ಮೀಟರ್ ಜೊತೆಗೆ ಏರ್‌ವಾಲ್ ಹಾಕಿದರೆ ಸಮಸ್ಯೆಯಾಗದು ಎಂದು ಸಮಜಾಯಿಶಿ ನೀಡಲು ಪ್ರಯತ್ನಿಸಿದರು. ಅಧಿಕಾರಿಯ ಉತ್ತರಕ್ಕೆ ಮತ್ತಷ್ಟು ಕೆರಳಿದ ಶಾಸಕ ಭಟ್, ಕೆಯುಐಡಿಎಫ್‍ಸಿ ಉಡುಪಿಯಲ್ಲಿ ನಡೆಸಿದ ಯಾವುದೇ ಕಾಮಗಾರಿಗಳು ಗುಣಮಟ್ಟದಲ್ಲಿಲ್ಲ. ನಿಮಗೆ ಮನ ಬಂದಂತೆ ಮಾಡಲು ಅವಕಾಶ ಕೊಡಲು ಸಾಧ್ಯವಿಲ್ಲ. ನಗರಸಭೆ, ಜನಪ್ರತಿನಿಧಿಗಳ ಗಮನಕ್ಕೆ ತಾರದೆ ಮೀಟರ್ ಅಳವಡಿಸಿದ್ದೀರಿ.
ಸುಸೈಡ್ ಕೇಸಿನಲ್ಲಿ ಕ್ಲೀನ್ ಚಿಟ್, ಈಶ್ವರಪ್ಪ ಮೊದಲ ಪ್ರತಿಕ್ರಿಯೆ, ಮತ್ತೆ ಮಂತ್ರಿಯಾಗುವ ಬಗ್ಗೆ ಹೇಳಿದ್ದಿಷ್ಟು
300ರೂ.ಬರುವಲ್ಲಿ 1,300 ರೂ. ಬಂದರೆ ಜನ ನಮ್ಮನ್ನು ಸುಮ್ಮನೇ ಬಿಟ್ಟಾರೆಯೇ ? ನಮಗೆ ನಿಮ್ಮ ಹೊಸ ಮೀಟರ್ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಭೆಯಲ್ಲಿಯೇ ನಿರ್ಣಯ ಮಾಡಿ. ಈವರೆಗೆ ಮಾಡಿದ ಕಾಮಗಾರಿಗೆ ಬಿಲ್ ಕೊಡಬೇಡಿ ಎಂದು ಪೌರಾಯುಕ್ತರಿಗೆ ತಾಕೀತು ಮಾಡಿದ ಅವರು ವಾರಾಹಿ ನೀರು ಉಡುಪಿಗೆ ಬಂದರೂ, 24*7 ನೀರು ಕೊಡಲಾಗುತ್ತದೆ ಎಂಬುದಕ್ಕೆ ಗ್ಯಾರಂಟಿ ಏನಿದೆ ? ಈ ಮೀಟರ್ ಅವಾಂತರದ ಬಗ್ಗೆ ಕೂಡಲೇ ಪರಿಶೀಲನೆ ನಡೆಸಿ ತನಗೆ ವರದಿ ನೀಡುವಂತೆ ಸೂಚಿಸಿದರು.