ಮೊರಾರ್ಜಿ ಶಾಲೆಗೆ ಶಾಸಕ ಗಣೇಶ್‌ಪ್ರಸಾದ್ ಭೇಟಿ: ವಿದ್ಯಾರ್ಥಿಗಳಿಂದ ದೂರಿನ ಸುರಿಮಳೆ
ಕಲುಷಿತ ಆಹಾರ ಸೇವಿಸಿ ಅಸ್ವಸ್ಥಗೊಂಡಿದ್ದ ಯಡವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಭೇಟಿ ನೀಡಿದಾಗ, ವಿದ್ಯಾರ್ಥಿಗಳು ದೂರಿನ ಸುರಿಮಳೆಗೈದರು.
ಗುಂಡ್ಲುಪೇಟೆ (ಜು.23): ಕಲುಷಿತ ಆಹಾರ ಸೇವಿಸಿ ಅಸ್ವಸ್ಥಗೊಂಡಿದ್ದ ಯಡವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಭೇಟಿ ನೀಡಿದಾಗ, ವಿದ್ಯಾರ್ಥಿಗಳು ದೂರಿನ ಸುರಿಮಳೆಗೈದರು. ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಶಾಲೆಗೆ ಭೇಟಿ ನೀಡಿ ಮೊದಲಿಗೆ ಪ್ರಭಾರ ಪ್ರಾಂಶುಪಾಲ ಕುಮಾರಸ್ವಾಮಿ ಎಂ ಹಾಗೂ ಇತರ ಉಪನ್ಯಾಸಕರನ್ನು ವಸತಿ ಶಾಲೆಯ ಬಗ್ಗೆ ಇರುವ ದೂರುಗಳ ಬಗ್ಗೆ ಸುಧೀರ್ಘ ಚರ್ಚಿಸಿ ಮಾಹಿತಿ ಪಡೆದರು.
ಸ್ನಾನಕ್ಕೆ ಹಾಗೂ ಕುಡಿವ ನೀರು ಬರುತ್ತಿಲ್ಲ. ಮೆನುವಿನಂತೆ ಊಟ, ತಿಂಡಿ ಕೊಡುತ್ತಿಲ್ಲ. ಊಟ, ತಿಂಡಿ ಇನ್ನು ಸ್ವಲ್ಪ ಹಾಕಿ ಅಂದ್ರೆ ಹಾಕಲ್ಲ, ಬೆಳಗ್ಗೆ ಮಾಡಿದ ತಿಂಡಿ ಉಳಿದರೆ ಮಧ್ಯಾಹ್ನಕ್ಕೂ ಕೊಡ್ತಾರೆ. ಚಟ್ನಿ, ಉಪ್ಪಿನ ಕಾಯಿಗೆ ನೀರು ಹಾಕ್ತಾರೆ, ಚೇರ್, ಕುರ್ಚಿ ಇಲ್ಲ, ನಿಗಧಿತ ಸಮಯಕ್ಕೆ ಊಟ, ತಿಂಡಿ ಕೊಡಲ್ಲ, ವಿಸಿಟರ್ ಬಂದಾಗ ಕ್ಲೀನ್ ಮಾಡ್ತಾರೆ, ಶೌಚಾಲಯ ಗಲೀಜಾಗಿ ಇರುತ್ತವೆ, ಸಿಸಿ ಕ್ಯಾಮೆರಾ ಇದ್ರೂ ಕೆಟ್ಟಿದೆ ಎಂಬಿತ್ಯಾದಿ ದೂರು ಸುರಿ ಮಳೆ ಗೈದರು.
ಸಿಎಂ ಸಿದ್ದರಾಮಯ್ಯಗೆ ಹೈಕಮಾಂಡ್ ಸಪೋರ್ಟ್ ಇದೆ: ಸಚಿವ ಆರ್.ಬಿ.ತಿಮ್ಮಾಪುರ
ನೂರಾರು ಮಕ್ಕಳ ಮಾತು ತಾಳ್ಮೆಯಿಂದ ಆಲಿಸಿದ ಶಾಸಕರು ಮಕ್ಕಳು ಸಲಹೆ ಮೇರೆಗೆ ವಸತಿ ನಿಲಯಗಳ ಶೌಚಾಲಯ, ಅಡುಗೆ ಮನೆಗೆ ಪ್ರಾಂಶುಪಾಲರು, ಉಪನ್ಯಾಸಕರು, ಪೋಷಕರು ಹಾಗೂ ಮಕ್ಕಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ಮುನಿರಾಜು, ತಾಪಂ ಮಾಜಿ ಸದಸ್ಯ ನೀಲಕಂಠಪ್ಪ, ಎಪಿಎಂಸಿ ಸದಸ್ಯ ಆರ್.ಎಸ್.ನಾಗರಾಜು, ತಾಪಂ ಮಾಜಿ ಉಪಾಧ್ಯಕ್ಷ ಬಂಗಾರನಾಯಕ, ಗ್ರಾಪಂ ಮಾಜಿ ಅಧ್ಯಕ್ಷ ಚಿಕ್ಕಾಟಿ ಮಹೇಶ್, ಗುತ್ತಿಗೆದಾರ ಶ್ರೀಕಂಠಪುರ ನಾಗರಾಜು, ಯಡವನಹಳ್ಳಿ ಸಿದ್ದನಾಯಕ್, ಕೃಷ್ಣ ಸೇರಿದಂತೆ ನೂರಾರು ಮಂದಿ ಪೋಷಕರು ಇದ್ದರು.
ಮಕ್ಕಳೊಂದಿಗೆ ಸಂವಾದ ನಡೆಸಿದ ಶಾಸಕ: ಮಾಹಿತಿ ಪಡೆದ ಬಳಿಕ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ವಸತಿ ಶಾಲೆಯ ಕೊಠಡಿಗೆ ತೆರಳಿ ಅಲ್ಲಿದ್ದ ವಿದ್ಯಾರ್ಥಿಗಳೊಂದಿಗೆ ಕೆಲ ಕಾಲ ಸಂವಾದ ನಡೆಸಿ ವಸತಿ ಶಾಲೆ ಹಾಗೂ ವಸತಿ ನಿಲಯದಲ್ಲಿನ ಕುಂದು ಕೊರತೆ ಆಲಿಸಿದರು. ನಾನು ನಿಮ್ಮ ಸಮಸ್ಯೆ ಆಲಿಸಲು ಬಂದಿದ್ದೇನೆ. ನಿಮ್ಮ ಸಮಸ್ಯೆ ಹೇಳಿದ್ದೀರಾ, ನಿಮ್ಮ ಬಿಸಿ ನೀರು ವ್ಯವಸ್ಥೆ, ಮೆನು ಪ್ರಕಾರ ಆಹಾರ, ಶೌಚಾಲಯಕ್ಕೆ ಸ್ವಚ್ಛತೆ, ಸಿಸಿ ಕ್ಯಾಮೆರಾ ಅಳವಡಿಕೆಗೆ ಇಲ್ಲಿನ ಪ್ರಾಂಶುಪಾಲರಿಗೆ ಸೂಚನೆ ನೀಡಿದ್ದೇನೆ ಎಂದರು. ಸ್ವಂತ ಹಣದಲ್ಲಿ ಕ್ಲೀನ್: ವಸತಿ ನಿಲಯ ಹಾಗೂ ಶಾಲೆಯ ಆವರಣದ ಸುತ್ತ ಗಿಡ ಗಂಟಿಗಳು ಬೆಳೆದು ನಿಂತಿವೆ ಅದು ಕ್ಲೀನ್ ಮಾಡಲು ಶಾಲೆಯಲ್ಲಿ ಹಣ ಇಲ್ಲದೆ ಇದ್ರೆ ನಾನೇ ಹಣ ಕೊಟ್ಟು ಕ್ಲೀನ್ ಮಾಡಿಸುವೆ ನೀವೇನು ಹೆದರುವ ಅಗತ್ಯವಿಲ್ಲ ನಿಮ್ಮ ಸಮಸ್ಯೆ ಹೇಳಿಕೊಳ್ಳಿ ಎಂದರು.
ಎಚ್ಚರಿಕೆ ಕೊಟ್ಟ ಶಾಸಕ: ವಸತಿ ಶಾಲೆಯಲ್ಲಿ ಗುಣಮಟ್ಟದ ಆಹಾರ, ಸ್ವಚ್ಛತೆ ಬಗ್ಗೆ ಮತ್ತೇನಾದರೂ ದೂರು ಬಂದರೆ ನೀವಾರು ಇಲ್ಲಿ ಉಳಿಯಲು ಬಿಡುವುದಿಲ್ಲ ಕ್ರಮಕ್ಕೆ ಶಿಪಾರಸ್ಸು ಮಾಡುತ್ತೇನೆ ಎಂದು ಅಡುಗೆ ಸಿಬ್ಬಂದಿಗೆ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ವಾರ್ನಿಂಗ್ ಕೊಟ್ಟರು. ಸರ್ಕಾರ ಮಕ್ಕಳ ಊಟ, ತಿಂಡಿಗೆ ದುಡ್ಡು ಕೊಡುತ್ತಿದೆ. ಆದರೂ, ಅಡುಗೆ ಸಿಬ್ಬಂದಿ ನಿರ್ಲಕ್ಷ್ಯಎದ್ದು ಕಾಣುತ್ತಿದೆ. ಮುಂದೆ ಹೀಗಾಗಬಾರದು ಮತ್ತೆ ಭೇಟಿ ನೀಡುವ ವೇಳೆಗೆ ದೂರು ಬಂದರೆ ನಾನು ಸಹಿಸುವುದಿಲ್ಲ ಎಂದರು. ಮಕ್ಕಳೊಂದಿಗೆ ಮಾತನಾಡಿದ ಶಾಸಕರು ನೀವು ಯಾರಿಗೂ ಹೆದರ ಬೇಡಿ, ಸಮಸ್ಯೆ ಹೇಳಿ, ನಿಮ್ಮ ಭವಿಷ್ಯ ರೂಪಿಸಿಕೊಳ್ಳಿ, ನಿಮಗೆ ಅನುಕೂಲವಾಗುತ್ತದೆ. ಮಕ್ಕಳಿಗೆ ಧೈರ್ಯ ತುಂಬಿದ ಬಳಿಕ ಮಕ್ಕಳು ವಸತಿ ನಿಲಯದ ಸಮಸ್ಯೆ ಬಿಚ್ಚಿಟ್ಟರು.
ಮಕ್ಕಳಿಗೆ ಇನ್ಮುಂದೆ ತೊಂದರೆ ಆಗದು: ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇಂಥ ಘಟನೆ ನಡೆಯಬಾರದಿತ್ತು ನಡೆದು ಹೋಗಿದೆ. ಮುಂದೆ ಹೀಗಾಗದಂತೆ ನೋಡಿಕೊಳ್ಳುವ ಜವಬ್ದಾರಿ ನನ್ನದು ಎಂದು ಶಾಸಕ ಗಣೇಶ್‌ಪ್ರಸಾದ್ ಹೇಳಿದರು. ಪೋಷಕರೊಂದಿಗೆ ಮಾತನಾಡಿ, ನಾನು ಕ್ಷೇತ್ರದ ಜನರ ಪ್ರತಿನಿಧಿಯಾಗಿ ಇಲ್ಲಿಗೆ ಬಂದಿದ್ದೇನೆ. ಮಕ್ಕಳ ಆರೋಗ್ಯ ಮೊದಲು ಮುಖ್ಯ ನಂತರ ಓದು. ಹಾಗಾಗಿ, ಮಕ್ಕಳಿಗೆ ಏನು ಕೊರತೆಯಾಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದರು. ಕಲುಷಿತ ಆಹಾರ ಸೇವಿಸಿ ಪ್ರಕರಣದಲ್ಲಿ ಎಲ್ಲಾ ವಿದ್ಯಾರ್ಥಿಗಳು ಗುಣಮುಖರಾಗಿದ್ದಾರೆ. ಪ್ರಾಂಶುಪಾಲರು ಕರ್ತವ್ಯ ಲೋಪದ ಮೇರೆಗೆ ಅಮಾನತ್ತುಗೊಂಡಿದ್ದಾರೆ. ತನಿಖೆ ನಡೆಯುತ್ತಿವೆ. ತನಿಖಾ ವರದಿ ಬಂದ ಬಳಿಕ ಮುಂದಿನ ಕ್ರಮ ತಾನಾಗಿಯೇ ಆಗಲಿದೆ ಎಂದರು.
ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ವಾಸ್ತವ್ಯವಿರಿ: ಡಿ.ಕೆ.ಶಿವಕುಮಾರ್ ಸೂಚನೆ
ಶಾಸಕರೊಂದಿಗೆ ಫೋಟೋ ತೆಗೆಸಿಕೊಂಡ ಮಕ್ಕಳು: ಶಾಸಕ ಗಣೇಶ್‌ಪ್ರಸಾದ್‌ರ ಮಾತು ಕೇಳಿದ ವಿದ್ಯಾರ್ಥಿಗಳು ಫೋಟೋ ಬೇಕು ಎಂದು ಕೇಳಿದಾಗ ಶಾಸಕರನ್ನು ಮುತ್ತಿಕೊಂಡ ಮಕ್ಕಳು ಫೋಟೋ ತೆಗೆಸಿಕೊಂಡರು. ಮಕ್ಕಳು ಮೊದ ಮೊದಲಿಗೆ ಶಾಸಕರ ಕಂಡ ಮಕ್ಕಳು ವಸತಿ ನಿಲಯ ಹಾಗೂ ಶಾಲೆಯ ಸಮಸ್ಯೆ ಹೇಳಲು ಹಿಂಜರಿದರಾದರೂ ನಂತರ ಶಾಸಕರ ಸಲುಗೆ ಹಾಗೂ ಮಾತಿನ ದಾಟಿ ನೋಡಿ ಸುತ್ತುವರಿದು ಮಳೆಯ ನಡುವೆ ಕಾರು ಏರಲು ಬಂದಾಗಲು ಮಕ್ಕಳು ಶಾಸಕರನ್ನು ಸಂತಸದಿಂದ ಬೀಳ್ಕೋಟ್ಟರು.