ಯಲಬುರ್ಗಾ: ಹತ್ತು ಸಾವಿರ ದಿನಸಿ ಕಿಟ್ ನೀಡಿದ ಶಾಸಕ ಹಾಲಪ್ಪ
* ಕೋವಿಡ್‌ನಿಂದ ಸಂಕಷ್ಟದಲ್ಲಿ ಬಡವರಿಗೆ ಆಸರೆ
* 10 ಸಾವಿರ ಕಿಟ್ ವಿತರಣೆ ಶ್ಲಾಘನೀಯ: ಸಂಗಣ್ಣ ಕರಡಿ
* ಗವಿಶ್ರೀ ಸೇವೆ ಅವಿಸ್ಮರಣೀಯ
ಶಿವಮೂರ್ತಿ ಇಟಗಿ
ಯಲಬುರ್ಗಾ(ಜೂ.06): ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಯಲಬುರ್ಗಾ ಹಾಗೂ ಕುಕನೂರ ತಾಲೂಕಿನ 10 ಸಾವಿರ ಬಡವರಿಗೆ ಶಾಸಕ ಹಾಲಪ್ಪ ಆಚಾರ ಅವರು ಸ್ವಂತ ಹಣದಲ್ಲಿ ಆಹಾರ ಕಿಟ್ ವಿತರಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.
ಪಟ್ಟಣದ ಬಯಲು ರಂಗ ಮಂದಿರ ಆವರಣದಲ್ಲಿ ಶನಿವಾರ ಬಿಜೆಪಿ ತಾಲೂಕು ಮಂಡಲದ ವತಿಯಿಂದ ಆಯೋಜಿಸಿದ್ದ 10 ಸಾವಿರ ಉಚಿತ ದಿನಸಿ ಕಿಟ್‌ಗಳನ್ನು ತಾಲೂಕಾಡಳಿತಕ್ಕೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಷ್ಟೋ ಶಾಸಕರು ಸ್ಥಿತಿವಂತರಿದ್ದರೂ ಇಂತಹ ಸಹಾಯ ಸಹಕಾರ ಮಾಡುವ ಗುಣ ಇರುವುದಿಲ್ಲ. ಹಾಲಪ್ಪ ಆಚಾರ್ ಅವರ ಇಂತಹ ಮಾನವೀಯ ಕಾರ್ಯವನ್ನು ಮೆಚ್ಚಬೇಕು. ಯಲಬುರ್ಗಾ ಆಸ್ಪತ್ರೆ ಜಿಲ್ಲೆಯಲ್ಲೇ ಮಾದರಿ ಆಸ್ಪತ್ರೆಯನ್ನಾಗಿ ಮಾಡುವಲ್ಲಿ ಶಾಸಕರ ಕಾಳಜಿಯೇ ಎದ್ದು ಕಾಣುತ್ತದೆ. ಕೋವಿಡ್ ಕರ್ತವ್ಯದಲ್ಲಿ ನಿರತರಾದ ಎಲ್ಲ ವೈದ್ಯರು, ಸಿಬ್ಬಂದಿಗೆ ಶಾಸಕರು ದಿನಕ್ಕೆ 3 ಹೊತ್ತು ಊಟದ ವ್ಯವಸ್ಥೆ ಹಾಗೂ ಸೋಂಕಿತರಿಗೆ ಹಣ್ಣು, ಕಷಾಯ ವ್ಯವಸ್ಥೆಯನ್ನು ತಮ್ಮ ಸ್ವಂತ ವೆಚ್ಚದಲ್ಲಿ ಮಾಡಿಕೊಡುತ್ತಿರುವುದು ಅವರ ಜನಪರ ಕಾಳಜಿಗೆ ಸಾಕ್ಷಿ ಎಂದು ಗುಣಗಾನ ಮಾಡಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ದೊಡ್ಡನಗೌಡ ಪಾಟೀಲ ಮಾತನಾಡಿ, ಲಸಿಕೆ ವಿಚಾರದಲ್ಲಿ ಕಾಂಗ್ರೆಸಿಗರು ಮೋದಿ ಲಸಿಕೆ ಎಂದು ಅಪಪ್ರಚಾರ ಮಾಡುವ ಮೂಲಕ ಅನೇಕರ ಸಾವಿಗೆ ಕಾರಣರಾಗಿದ್ದಾರೆ. ಆದರೆ ಇದೀಗ ಲಸಿಕೆ ಸಮರ್ಪಕವಾಗಿ ದೊರೆಯುತ್ತಿಲ್ಲ ಎಂದು ಆರೋಪ ಮಾಡುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.
ಗಂಗಾವತಿ: ರೈತರಿಗೆ ಅಂತರ್ಜಾಲ ಮೂಲಕ ತರಬೇತಿ
ಶಾಸಕ ಹಾಲಪ್ಪ ಆಚಾರ ಮಾತನಾಡಿ, ತಾಲೂಕಿನಲ್ಲಿ ಟಾಸ್ಕ್ ಫೋರ್ಸ್ ಸಮಿತಿ ಅತ್ಯಂತ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದೆ. ತಾಲೂಕಿನಾದ್ಯಂತಹ ತಹಸೀಲ್ದಾರರು ತಮ್ಮ ಕಂದಾಯ ಸಿಬ್ಬಂದಿ ಮೂಲಕ ಬಡ ಕೂಲಿ ಕಾರ್ಮಿಕರು, ನಿರ್ಗತಿಕರು, ಅನಾಥರ ಪಟ್ಟಿಮಾಡಿಕೊಂಡಿದ್ದಾರೆ. ಪಕ್ಷಾತೀತವಾಗಿ, ಜಾತ್ಯತೀತವಾಗಿ ಅನ್ಯರ ಪಾಲಾಗದಂತೆ ಅರ್ಹ ಬಡವರಿಗೆ ಈ ದಿನಸಿ ಆಹಾರ ಧಾನ್ಯಗಳ ಕಿಟ್ ತಲುಪಬೇಕೆನ್ನುವ ಉದ್ದೇಶದಿಂದ ತಾಲೂಕಾಡಳಿತಕ್ಕೆ ನೀಡಿದ್ದೇವೆ ಎಂದರು.
ಸಾನಿಧ್ಯ ವಹಿಸಿದ್ದ ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ, ಹಾಲಪ್ಪ ಆಚಾರ ಅವರು ಜನರ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಹೀಗಾಗಿ ತಮ್ಮ ಸ್ವಂತ ಹಣದಲ್ಲಿ ಬಡವರಿಗೆ 10 ಸಾವಿರ ದಿನಸಿ ಆಹಾರ ಕಿಟ್‌ಗಳನ್ನು ನೀಡಿದ್ದಾರೆ. ದೇವರು ಅವರಿಗೆ ಇನ್ನೂ ದಾನ ಧರ್ಮ ಮಾಡುವ ಶಕ್ತಿ ನೀಡಲಿ ಎಂದು ಶುಭ ಹಾರೈಸಿದರು.
ಕೋವಿಡ್ ನಿಯಂತ್ರಿಸುವಲ್ಲಿ ಶಾಸಕರು, ತಾಲೂಕಿನ ಎಲ್ಲ ವೈದ್ಯ ಸಿಬ್ಬಂದಿ, ತಾಲೂಕಾಧಿಕಾರಿಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸ್ ಇಲಾಖೆ, ಪಪಂ ಮತ್ತು ಗ್ರಾಪಂ ಸಿಬ್ಬಂದಿ ಹಾಗೂ ಮಾಧ್ಯಮದವರು ಕೊರೋನಾ ವೈರಸ್ ನಿಯಂತ್ರಿಸುವ ಕಾರ್ಯದಲ್ಲಿ ಸಾಕಷ್ಟುಶ್ರಮವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಪ್ಪಳ: ಗವಿಮಠ ಕೋವಿಡ್ ಆಸ್ಪತ್ರೆಗೆ ಎನ್‌ಆರ್‌ಐ ನೆರವು
ತಹಸೀಲ್ದಾರ್ ಶ್ರೀಶೈಲ ತಳವಾರ, ಇಒ ಡಾ. ಜಯರಾಂ ಚವ್ಹಾಣ, ಸಿಪಿಐ ಎಂ. ನಾಗರಡ್ಡಿ, ಮುಖಂಡರಾದ ಬಸವಲಿಂಗಪ್ಪ ಭೂತೆ, ಸಿ.ಎಚ್. ಪಾಟೀಲ, ವೀರಣ್ಣ ಹುಬ್ಬಳ್ಳಿ, ಎಂ. ವಿಶ್ವನಾಥ, ಕಳಕಪ್ಪ ಕಂಬಳಿ, ಪಪಂ ಅಧ್ಯಕ್ಷರಾದ ಅಮರೇಶ ಹುಬ್ಬಳ್ಳಿ, ಶಂಭು ಜೋಳದ, ರತನ ದೇಸಾಯಿ, ಶರಣಪ್ಪ ಈಳಿಗೇರ, ಬಸವನಗೌಡ ತೊಂಡಿಹಾಳ, ಅಯ್ಯನಗೌಡ ಕೆಂಚಮ್ಮನವರ, ಶಿವಪ್ಪ ವಾದಿ, ಶಿವಕುಮಾರ ನಾಗಲಾಪುರಮಠ, ವಸಂತಕುಮಾರ ಭಾವಿಮನಿ, ಸುರೇಶ ಹೊಸಳ್ಳಿ, ವೆಂಕಟೇಶ ಗಾದಿ, ಸಿದ್ದರಾಮೇಶ ಬೇಲೇರಿ, ರಂಗನಾಥ ವೆಲಂಕೊಂಡಿ, ರಾಚಪ್ಪ ಹಳ್ಳಿ, ಜಗದೀಶಪ್ಪ ಕಲಭಾವಿ, ಮಾರುತಿ ಗಾವರಾಳ, ಬಾಪುಗೌಡ ಪಾಟೀಲ, ಕಲ್ಲೇಶ ಕರಮುಡಿ, ಶರಣು ಹಾವೇರಿ, ಹನುಮಂತ ರಾಠೋಡ, ಕಳಕಪ್ಪ ತಳವಾರ, ಈರಪ್ಪ ಬಣಕಾರ, ಶ್ರೀಕಾಂತ ಪೂಜಾರ, ಮೋಹನ ಚಲವಾದಿ, ವಿರೂಪಾಕ್ಷಪ್ಪ ಶ್ರೀಗಿರಿ ಇದ್ದರು.
ಗವಿಶ್ರೀ ಸೇವೆ ಅವಿಸ್ಮರಣೀಯ
ಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಶ್ರೀಗಳು ಸರ್ಕಾರದ ಯಾವ ಸೌಲಭ್ಯವನ್ನೂ ಪಡೆಯದೆ ಮಠದಲ್ಲಿ 200 ಬೆಡ್‌ಗಳ ಆಕ್ಸಿಜನ್ ಆಸ್ಪತ್ರೆ ಆರಂಭಿಸಿ, ಸೋಂಕಿತರಿಗೆ ತಾವೇ ಅಡುಗೆ ತಯಾರಿಸುವ ಕಾರ್ಯದಲ್ಲಿ ತಲ್ಲೀನರಾಗಿ, ಜನರ ಸೇವೆಗೆ ಮುಂದಾಗಿರುವ ಕಾರ್ಯ ಅವಿಸ್ಮರಣೀಯವಾಗಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಪ್ಯಾಕೇಜ್ ನೆರವು
ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಲಾಕ್‌ಡೌನ್ ಸಂಕಷ್ಟಕ್ಕೆ ಸಿಲುಕಿರುವ ವಿವಿಧ ಸಮುದಾಯದವರಿಗೆ ಎರಡು ಹಂತದ ಪ್ಯಾಕೇಜ್ ಘೋಷಿಸಿ ಜನರ ಹಿತ ಕಾಪಾಡಿದ್ದಾರೆ. ಸಂಸದ ಸಂಗಣ್ಣ ಕರಡಿ ಅವರು ಲೋಕಸಭಾ ವ್ಯಾಪ್ತಿಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಹಲವಾರು ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಜತೆಗೆ ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ ಅವರು ಜಿಲ್ಲಾದ್ಯಂತ ಸಂಚರಿಸಿ ಪಕ್ಷ ಸಂಘಟಿಸಿ, ಹೊಸ ಚೈತನ್ಯ ನೀಡುತ್ತಿದ್ದಾರೆ ಎಂದು ಶಾಸಕ ಹಾಲಪ್ಪ ಆಚಾರ್ ಹೇಳಿದರು.