ಕೊಪ್ಪಳ(ಜೂ.04): ಇಲ್ಲಿನ ಗವಿಮಠ ಕೋವಿಡ್‌ ಆಸ್ಪತ್ರೆಗೆ ಬ್ರೀದ್‌ ಇಂಡಿಯಾ ಅಭಿಯಾನದಡಿ ಆಕ್ಸಿಜನ್‌ ಕಾನ್ಸಂಟ್ರೇಟರ್‌ ಸೇರಿ ಮೆಡಿಕಲ್‌ ಉಪಕರಣಗಳನ್ನು ಅನಿವಾಸಿ ಭಾರತೀಯರು ದೇಣಿಗೆ ನೀಡಿದ್ದಾರೆ. ಅಭಿಯಾನದ ಸ್ವಯಂ ಸೇವಕರು ಮೆಡಿಕಲ್‌ ಉಪಕರಣಗಳನ್ನು ಗವಿಸಿದ್ದೇಶ್ವರ ಸ್ವಾಮೀಜಿಗೆ ಹಸ್ತಾಂತರಿಸಿದ್ದಾರೆ.

ಈ ವೇಳೆ ಮಾತನಾಡಿದ ಅಭಿಯಾನದ ಕಾರ್ಯಕರ್ತ ಹರ್ಷ, ಅನಿವಾಸಿ ಭಾರತೀಯರೇ ಹೆಚ್ಚಿರುವ ಐ ಕ್ಯಾಟ್‌ ಫೌಂಡೇಷನ್‌ ಸೊಸೈಟಿ ಆಫ್‌ ಎಮರ್ಜನ್ಸಿ ಮೆಡಿಸಿನ್‌ ಇಂಡಿಯಾ ಹಾಗೂ ಅವಿರತ ಭಾರತ ಸಂಸ್ಥೆಗಳ ಸಹಯೋಗದಲ್ಲಿ ಬ್ರೀದ್‌ ಇಂಡಿಯಾ ಎಂಬ ಘೋಷವಾಕ್ಯದಡಿ ಕೋವಿಡ್‌ ಸಾಂಕ್ರಾಮಿಕ ವಿರುದ್ಧ ಹೋರಾಟ ಮಾಡಲಾಗುತ್ತಿದೆ. ಆಕ್ಸಿಜನ್‌ ಸೇರಿ ವಿವಿಧ ಅಗತ್ಯ ಮೆಡಿಕಲ್‌ ಉಪಕರಣಗಳನ್ನು ಕೋವಿಡ್‌ ಆಸ್ಪತ್ರೆಗೆ ದಾನವಾಗಿ ನೀಡುತ್ತಿರುವ ಈ ಸಂಸ್ಥೆಗಳು ಕೊರೋನ ವಿರುದ್ಧ ದೇಶಾದ್ಯಂತ ಹೋರಾಟ ಮಾಡುತ್ತಿವೆ. ಇಲ್ಲಿನ ಗವಿಮಠವೂ ಬಡ ಕೋವಿಡ್‌ ರೋಗಿಗಳ ಅನುಕೂಲಕ್ಕಾಗಿ ಕೋವಿಡ್‌ ಆಸ್ಪತ್ರೆ ತೆರೆದಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಮೆಡಿಕಲ್‌ ಉಪಕರಣ ನೀಡಲಾಗಿದೆ. ಇದರಲ್ಲಿ 7 ಸಾಮಾನ್ಯ ಆಕ್ಸಿಜನ್‌ ಕಾನ್ಸಂಟ್ರೇಟರ್‌ ಮತ್ತು 3 ಆಕ್ಸಿಜನ್‌ ಉತ್ಪಾದಿಸಿ ಸಿಲಿಂಡರ್‌ಗೆ ತುಂಬುವ ಸಾಮರ್ಥ್ಯದ ಯಂತ್ರ ಇವೆ. ಜತೆಗೆ ವಿವಿಧ ಮೆಡಿಕಲ್‌ ಉಪಕರಣ ಒಳಗೊಂಡಿದೆ ಎಂದು ಮಾಹಿತಿ ನೀಡಿದರು.

ಕೊಪ್ಪಳ: 'ಗವಿಮಠ ಶ್ರೀಗಳ ಕಾರ್ಯ ರಾಜ್ಯಕ್ಕೆ ಮಾದರಿ'

ಬ್ರೀದ್‌ ಇಂಡಿಯಾ ಅಭಿಯಾನದ ಸಂಸ್ಥಾಪಕರಲ್ಲಿ ಒಬ್ಬರಾದ ಡಾ. ಶಾಲಿನಿ ನಾಲ್ವಾಡ್‌ ಅವರು ಕೊಪ್ಪಳ ಮೂಲದವರಾಗಿದ್ದಾರೆ. ಕೊಪ್ಪಳ ಜಿಲ್ಲೆಯ ಯಾವುದೇ ಎನ್‌ಜಿಇಒ ಮತ್ತು ಸಂಘ ಸಂಸ್ಥೆಗಳು ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಸೇವೆ ಮಾಡುತ್ತಿದ್ದರೆ, ನೆರವು ನೀಡುತ್ತೇವೆ ಎಂದರು. ಡಾ. ವಿಶ್ವನಾಥ ನಾಲ್ವಾಡ್‌ ಮಾತನಾಡಿ, ಐ ಕ್ಯಾಟ್‌ ಸಂಸ್ಥೆ ದೇಶಾದ್ಯಂತ ಏರ್‌ ಆ್ಯಂಬುಲೆನ್ಸ್‌ ಸೇವೆ ನೀಡುತ್ತಿದ್ದು, ಜನ ಸಾಮಾನ್ಯರಿಗೂ ಈ ಸೇವೆ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಈ ಸಂಸ್ಥೆ ಸಹ ಸಂಸ್ಥಾಪಕಿ ಡಾ. ಶಾಲಿನಿ ಕೊಪ್ಪಳ ಮೂಲದವರು ಎಂಬುದು ನಮಗೆಲ್ಲ ಹೆಮ್ಮೆಯ ವಿಷಯ ಎಂದರು.

ನಗರಸಭೆ ಸದಸ್ಯ ಗುರುರಾಜ ಹಲಗೇರಿ, ಅನಿಲ್‌ ಕೊಪ್ಪಳ, ಮಾರುತಿ ಬೋಸ್ಲೆ, ಸಿದ್ದು ನಿಲೂಗಲ್‌, ಹರ್ಷ ಎಂ. ಕೃಷ್ಣ, ಯತಿರಾಜ, ವರಿಷ್ಠ, ವಿ.ಎಚ್‌. ಗವಿಸಿದ್ದಯ್ಯ ಇದ್ದರು.