Asianet Suvarna News Asianet Suvarna News

'ಯಡಿಯೂರಪ್ಪ ಸರ್ಕಾರ ಶಾಸಕರಿಗೆ ಅನುದಾನ ನೀಡುವಲ್ಲಿ ತಾರತಮ್ಯ ಮಾಡ್ತಿದೆ'

ಹಿಂದಿನ ಸರ್ಕಾರ ಇದ್ದಾಗ ತಮ್ಮ ಕ್ಷೇತ್ರಕ್ಕೆ 350 ಕೋಟಿ ಅನುದಾನ ನೀಡಿತ್ತು| ಬಿಜೆಪಿ ಸರ್ಕಾರ ಬಂದ ಬಳಿಕ ಈ ಅನುದಾನ 30 ಕೋಟಿಗೆ ಕಡಿತ ಮಾಡಿ ಅನ್ಯಾಯ| ಕೋವಿಡ್‌ ಸಂದರ್ಭದಲ್ಲಿ ಆಹಾರ ವಿತರಣೆ, ಆಹಾರ ಕಿಟ್‌ ವಿತರಣೆ ವೇಳೆಯೂ ತಾರತಮ್ಯ| ವಿರೋಧ ಪಕ್ಷದ ಶಾಸಕರಿಗೆ ತಾರತಮ್ಯ ಮಾಡುವುದು ಸರಿಯಲ್ಲ: ಬೈರತಿ ಸುರೇಶ್‌| 

MLA Byrathi Suresh Talks Over BS Yediyurappa Government grg
Author
Bengaluru, First Published Feb 5, 2021, 8:38 AM IST

ಬೆಂಗಳೂರು(ಫೆ.05):  ರಾಜ್ಯ ಸರ್ಕಾರ ಶಾಸಕರಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿರುವುದರಿಂದ ಕ್ಷೇತ್ರದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಹೆಬ್ಬಾಳ ಶಾಸಕ ಬೈರತಿ ಸುರೇಶ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಹಿಂದಿನ ಸರ್ಕಾರ ಇದ್ದಾಗ ತಮ್ಮ ಕ್ಷೇತ್ರಕ್ಕೆ 350 ಕೋಟಿ ಅನುದಾನ ನೀಡಿತ್ತು. ಬಿಜೆಪಿ ಸರ್ಕಾರ ಬಂದ ಬಳಿಕ ಈ ಅನುದಾನವನ್ನು 30 ಕೋಟಿಗೆ ಕಡಿತ ಮಾಡಿ ಅನ್ಯಾಯ ಮಾಡಿದೆ. ಇನ್ನು ಕೋವಿಡ್‌ ಸಂದರ್ಭದಲ್ಲಿ ಆಹಾರ ವಿತರಣೆ, ಆಹಾರ ಕಿಟ್‌ ವಿತರಣೆ ವೇಳೆಯೂ ತಾರತಮ್ಯ ಮಾಡಲಾಗಿತ್ತು. ಯಾವುದೇ ಸರ್ಕಾರ ಆಡಳಿತ ಪಕ್ಷದ ಶಾಸಕರಿಗೆ ಹೆಚ್ಚಿನ ಅನುದಾನ ಕೊಡುವುದು ಸಾಮಾನ್ಯ. ಹಾಗಂತ ವಿರೋಧ ಪಕ್ಷದ ಶಾಸಕರಿಗೆ ತಾರತಮ್ಯ ಮಾಡುವುದು ಸರಿಯಲ್ಲ. ಹೀಗಾಗಿ ಮುಂದಿನ ಬಜೆಟ್‌ನಲ್ಲಿ ಈ ಸಮರ್ಪಕ ಅನುದಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ. 

ನಿರಾಶ್ರಿತರಿಗೆ 100 ಟನ್‌ ಧವಸ ಧಾನ್ಯ ವಿತರಿಸಿದ ಬೈರತಿ ಸುರೇಶ್‌

ಕೊರೋನಾ ವೇಳೆ ವರ್ಗಾವಣೆ ದಂಧೆ

ಕೊರೋನಾ ಸಂದರ್ಭದಲ್ಲಿ ಸರ್ಕಾರ ಅಧಿಕಾರಿಗಳ ವರ್ಗಾವಣೆ ಮಾಡದಂತೆ ಸೂಚಿಸಿತ್ತು. ಆದರೆ, ಹೆಬ್ಬಾಳ ಕ್ಷೇತ್ರದಲ್ಲಿ ತಮ್ಮ ವಿರುದ್ಧ ಪರಾಜಿತರಾಗಿರುವ ಅಭ್ಯರ್ಥಿ ಅವ್ಯಾಹತವಾಗಿ ವರ್ಗಾವಣೆಯಲ್ಲಿ ದಂಧೆ ಮಾಡಿದರು. ಈಗಲೂ ಆ ದಂಧೆಯಲ್ಲಿ ನಿರತರಾಗಿದ್ದಾರೆ. ಮೂರು-ನಾಲ್ಕು ತಿಂಗಳಿಗೆ ಅಧಿಕಾರಿಗಳನ್ನು ವರ್ಗಾವಣೆ ಮಾಡಿದರೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗುತ್ತವೆ. ಈ ರೀತಿಯ ವ್ಯಕ್ತಿಗಳು ಸರ್ಕಾರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಸರ್ಕಾರ ಈ ಬಗ್ಗೆ ಗಮನಹರಿಸಬೇಕು ಎಂದು ಆಗ್ರಹಿಸಿದರು.
 

Follow Us:
Download App:
  • android
  • ios