ಹಾಸನ(ಜು.19): ಜುಲೈ ಅಂತ್ಯ ಸಮೀಪಿಸಿದ್ರೂ ಮಳೆ ಇಲ್ಲದ ಕಾರಣ ಕುಡಿವ ನೀರಿನ ಸಮಸ್ಯೆ ಸೃಷ್ಟಿಯಾಗಿದೆ. ಇದನ್ನರಿತು ಅಗತ್ಯವಿರುವ ಕಡೆ ಟ್ಯಾಂಕರ್‌ ಮೂಲಕ ನೀರು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕ ಸಿ.ಎನ್‌.ಬಾಲಕೃಷ್ಣ ಹೇಳಿದರು.

ಚನ್ನರಾಯಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನುಗ್ಗೇಹಳ್ಳಿ, ಬಾಗೂರು ಮತ್ತು ಹಿರಿಸಾವೆ ಹೋಬಳಿಗಳಲ್ಲಿನ ಕೆಲ ಹಳ್ಳಿಗಳಲ್ಲಿ ಕುಡಿವ ನೀರಿನ ಸಮಸ್ಯೆ ಇದೆ. ಸಮಸ್ಯೆ ಇರುವ ಕಡೆ ಖಾಸಗಿ ಕೊಳವೆ ಬಾವಿಯಿಂದ ನೀರು ಸರಬರಾಜು ಮಾಡುವಂತೆ ಸೂಚಿಸಲಾಗಿದೆ. ತಾಲೂಕಿನ ಜುಟ್ಟನಹಳ್ಳಿ ಪಂಚಾಯ್ತಿಯ ಬಸವನಹಳ್ಳಿ ಮತ್ತು ಕಬ್ಬಳಿ ಪಂಚಾಯ್ತಿ ಬಿಳಿಕೆರೆ ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಒದಗಿಸಲಾಗುತ್ತಿದೆ ಎಂದರು.

ತಾವು ಕ್ಷೇತ್ರದಲ್ಲಿ ಇಲ್ಲದಿದ್ದರೂ ಅಧಿಕಾರಿಗಳೊಂದಿಗೆ ನಿರಂತರ ದೂರವಾಣಿ ಸಂಪರ್ಕದಲ್ಲಿದ್ದು, ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆ ಎಂದು ತಿಳಿದು ತಹಸೀಲ್ದಾರ್‌ ಮತ್ತು ತಾಪಂ ಇಒಗೆ ನಿರ್ದೆಶನ ನೀಡುವ ಮೂಲಕ ನೀರಿನ ಸಮಸ್ಯೆಗೆ ಸ್ಪಂದಿಸುತ್ತಿರುವುದಾಗಿ ತಿಳಿಸಿದರು.

ತಾಲೂಕಿನಲ್ಲಿ ಸದ್ಯಕ್ಕೆ ಎರಡು ತಿಂಗಳವರೆಗೂ ಮೇವಿನ ಕೊರತೆ ಇಲ್ಲ, ಅಷ್ಟರಲ್ಲಿ ಮಳೆ ಬೀಳದಿದ್ದಲ್ಲಿ ತಾಲೂಕಿನ ದಿಡಗ, ಹಿರಿಸಾವೆ, ಕಬ್ಬಳಿ, ಜುಟ್ಟನಹಳ್ಳಿ, ಮಟ್ಟನವಿಲೆ, ಕೆಂಬಾಳು, ಬ್ಯಾಡರಹಳ್ಳಿ ಸೇರಿ 10 ಕೇಂದ್ರಗಳನ್ನು ಗುರಿತಿಸಿ ಮೇವು ಸರಬರಾಜಿಗೆ ಕ್ರಮಕ್ಕೆ ಸೂಚಿಸಲಾಗಿದೆ ಎಂದರು.

ಮಳೆ ಪ್ರಮಾಣ ಕಡಿಮೆ ಇರುವ ಕಡೆ ಮೋಡ ಬಿತ್ತನೆಗೆ ಸರ್ಕಾರ ತಿರ್ಮಾನಿಸಿದ್ದು, ಮಳೆ ಇಲ್ಲದ ಪರಿತಪಿಸುತ್ತಿರುವ ನಮ್ಮ ಭಾಗಕ್ಕೂ ಮೋಡ ಬಿತ್ತನೆ ಮಾಡುವಂತೆ ಸರ್ಕಾರವನ್ನು ಮನವಿ ಮಾಡುವುದಾಗಿ ತಿಳಿಸಿದರು.

ಎಪಿಎಂಸಿ ಅಧ್ಯಕ್ಷ ಬಿ.ಎಚ್‌.ಶಿವಣ್ಣ, ಮಾಜಿ ಅಧ್ಯಕ್ಷ ವಿ.ಎನ್‌.ಮಂಜುನಾಥ್‌, ತಾಪಂ ಇಒ ಎಚ್‌.ಎಸ್‌.ಚಂದ್ರಶೇಖರ್‌ ಇದ್ದರು.

ಬೆಂಗಳೂರಿಗರೇ ಎಚ್ಚರ : ನಿಮ್ಮ ಮನೆಗೂ ನೀರು ಪೂರೈಕೆ ನಿಲ್ಲಬಹುದು!