Asianet Suvarna News Asianet Suvarna News

'ಜಾರಕಿಹೊಳಿ ಕುಟುಂಬ ಒಂದಾಗಿರಬೇಕೆಂಬ ಮಹಾದಾಸೆ ನನ್ನದಾಗಿತ್ತು'

ಕುಟುಂಬ ಒಂದಾಗಿರಬೇಕೆಂಬ ಮಹಾದಾಸೆ ನನ್ನದಿತ್ತು ಎಂದ ಶಾಸಕ ಬಾಲಚಂದ್ರ ಜಾರಕಿಹೊಳಿ |ಇದಕ್ಕಾಗಿ ಸಾಕಷ್ಟು ಬಾರಿ ಪ್ರಯತ್ನಪಟ್ಟೆ| ಆದರೂ ಯಾರೊಬ್ಬರೂ ನನ್ನ ಮಾತು ಕೇಳುವ ಸ್ಥಿತಿಯಲ್ಲಿರಲಿಲ್ಲ| ಹೀಗಾಗಿ ನಮ್ಮ ಕುಟುಂಬದಲ್ಲಿಯೇ ಸಹೋದರರಿಬ್ಬರೂ ಎದುರಾಳಿಯಾಗಿ ಚುನಾವಣೆ ಎದುರಿಸುತ್ತಿದ್ದಾರೆ| 

MLA Balachandra Jarakiholi Talked about His Family
Author
Bengaluru, First Published Nov 20, 2019, 12:05 PM IST

ಗೋಕಾಕ(ನ.20): ರಾಜಕೀಯವಾಗಿ ಬೇರೆ ಬೇರೆಯಾಗಿದ್ದರೂ ನಮ್ಮ ಕುಟುಂಬ ಒಂದಾಗಿರಬೇಕೆಂಬ ಮಹಾದಾಸೆ ನನ್ನದಾಗಿತ್ತು. ಇದಕ್ಕಾಗಿ ಸಾಕಷ್ಟು ಬಾರಿ ಪ್ರಯತ್ನಪಟ್ಟೆ. ಆದರೂ ಯಾರೊಬ್ಬರೂ ನನ್ನ ಮಾತು ಕೇಳುವ ಸ್ಥಿತಿಯಲ್ಲಿರಲಿಲ್ಲ. ಹೀಗಾಗಿ ನಮ್ಮ ಕುಟುಂಬದಲ್ಲಿಯೇ ಸಹೋದರರಿಬ್ಬರೂ ಎದುರಾಳಿಯಾಗಿ ಚುನಾವಣೆ ಎದುರಿಸುತ್ತಿದ್ದಾರೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ. 

ಅಣ್ಣನ ಮೇಲೆ ವೈರಲ್ ವಿಡಿಯೋ ಬಿಟ್ಟ ತಮ್ಮ, ಸತೀಶ್ ವಿಡಿಯೋ ಬಾಂಬ್!

ಮಂಗಳವಾರ ಎನ್‌ಎಸ್‌ಎಫ್‌ ಅತಿಥಿ ಗೃಹದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕುಟುಂಬವೇ ಬೇರೆ. ರಾಜಕೀಯವೇ ಬೇರೆ. ಯಾರೊಬ್ಬರೂ ವ್ಯಕ್ತಿಗತ ಟೀಕೆ ಮಾಡದಂತೆ ಮನವಿ ಮಾಡಿಕೊಂಡ ಅವರು, ಇಬ್ಬರು ಸಹೋದರರ ಮಧ್ಯೆ ಮೂರನೆ ವ್ಯಕ್ತಿಗೆ ಲಾಭವಾಗಲಿದೆ ಎಂಬುದನ್ನು ಸ್ಪಷ್ಟವಾಗಿ ತಳ್ಳಿಹಾಕಿ, ಈ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಮೇಶ ಜಾರಕಿಹೊಳಿ ಅವರು ಜಯ ಸಾಧಿಸುತ್ತಾರೆ ಎಂದು ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬಿಜೆಪಿ ಕಾರ್ಯಕರ್ತರು ಮತ್ತು ರಮೇಶ ಜಾರಕಿಹೊಳಿ ಅವರ ಕಾರ್ಯಕರ್ತರಲ್ಲಿ ಯಾವುದೇ ಮನಸ್ತಾಪಗಳಿಲ್ಲ. ಈಗಾಗಲೇ ಎಲ್ಲರೊಂದಿಗೂ ಮಾತನಾಡಿ ಒಂದಾಗಿ ಹೋಗುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಶೇ.80 ರಷ್ಟು ಬಿಜೆಪಿ ಕಾರ್ಯಕರ್ತರು ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಭಾಗವಹಿಸಿದ್ದರು. ಬಿಜೆಪಿ ಸರ್ಕಾರದ ಜನಪ್ರಿಯ ಯೋಜನೆಗಳನ್ನು ಮತದಾರರ ಮನೆ ಬಾಗಿಲಿಗೆ ತಲುಪಿಸಲು ಕಾರ್ಯಕರ್ತರಿಗೆ ಈಗಾಗಲೇ ಸೂಚಿಸಲಾಗಿದೆ. ರಮೇಶ ಜಾರಕಿಹೊಳಿ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳು ಸಹ ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಗಲಿವೆ ಎಂದು ಹೇಳಿದರು.

ಬಿಜೆಪಿ ಸರ್ಕಾರದ ರಚನೆಯಲ್ಲಿ ರಮೇಶ ಜಾರಕಿಹೊಳಿ ನೇತೃತ್ವದ 17 ಶಾಸಕರ ಪಾತ್ರ ಬಹು ಮುಖ್ಯವಾಗಿತ್ತು. ಜೊತೆಗೆ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡಿದರೆ ಮಾತ್ರ ನಾವು ಬಿಜೆಪಿಗೆ ಬೆಂಬಲ ನೀಡುತ್ತೇವೆ ಎಂದು ಬಿಜೆಪಿರಾಷ್ಟ್ರಾಧ್ಯಕ್ಷ ಅಮಿತ ಶಾ ಅವರಲ್ಲಿ ಮನವಿ ಮಾಡಿಕೊಂಡಿದ್ದರು. ಹೀಗಾಗಿ ಯಡಿಯೂರಪ್ಪರು ಸಿಎಂ ಆದ್ರು. ಗೋಕಾಕ ಉಪಚುನಾವಣೆಯಲ್ಲಿ ಬಿ.ಎಸ್‌. ಯಡಿಯೂರಪ್ಪ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ. ಕ್ಷೇತ್ರದ ಎಲ್ಲ ಸಮುದಾಯಗಳ ಬೆಂಬಲದೊಂದಿಗೆ ರಮೇಶ ಜಾರಕಿಹೊಳಿ ಅವರು ಆಯ್ಕೆಯಾಗಲಿದ್ದಾರೆ ಎಂದು ಹೇಳಿದರು.

ಸಾಲ ಮಾಡಿದ್ದು ದೊಡ್ಡ ವಿಷಯವೇನಲ್ಲ:

ಸ್ವಂತ ಕಾರ್ಖಾನೆ ನಡೆಸುತ್ತಿರುವ ರಮೇಶ ಜಾರಕಿಹೊಳಿ ವಿವಿಧ ಬ್ಯಾಂಕುಗಳಲ್ಲಿ ಸಾಲ ಮಾಡಿರುವುದು ದೊಡ್ಡ ವಿಷಯವೇನಲ್ಲ. ಕಾರ್ಖಾನೆ ನಡೆಸುವುದು ಇಂದಿನ ದಿನಗಳಲ್ಲಿ ಕಷ್ಟಕರವಾಗಿದೆ. ಬಹುತೇಕ ಕಾರ್ಖಾನೆ ನಡೆಸುತ್ತಿರುವ ಮಾಲೀಕರುಗಳು ಸಹ ಬ್ಯಾಂಕುಗಳಲ್ಲಿ ಸಾಲ ಹೊಂದಿದ್ದಾರೆ. ಮಾಡಿರುವ ಸಾಲವನ್ನು ಇಷ್ಟರಲ್ಲಿಯೇ ರಮೇಶ ತೀರಿಸುತ್ತಾರೆ. ಸಾಲಕ್ಕೂ ಹಾಗೂ ಚುನಾವಣೆಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಪೂಜಾರಿ ಸ್ಪರ್ಧೆಯಿಂದ ತೊಂದರೆಯಿಲ್ಲ:

ಜೆಡಿಎಸ್‌ನಿಂದ ಸ್ಪರ್ಧೆಗಿಳಿದಿರುವ ಅಶೋಕ ಪೂಜಾರಿ ಅವರ ಜೊತೆ ಮಾತನಾಡಿದ್ದೆ. ಯಾವುದೇ ಕಾರಣಕ್ಕೂ ಬಿಜೆಪಿ ಬಿಡಬೇಡಿ. ನಮ್ಮೊಂದಿಗೆ ಪ್ರಚಾರಕ್ಕೆ ಬನ್ನಿ. ಸಣ್ಣಪುಟ್ಟ ವ್ಯತ್ಯಾಸಗಳಿದ್ದರೂ ಕುಳಿತು ಮಾತಾಡೋಣ. ಈಗಾಗಲೇ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದರಿಂದ ಎಲ್ಲರಿಗೂ ಒಳ್ಳೆಯದಾಗಲಿದೆ. ಸ್ವತಃ ಮುಖ್ಯಮಂತ್ರಿಗಳು ಸಹ ಮಾತನಾಡಿದ್ದರು. ಆದರೆ ಇದ್ಯಾವದನ್ನೂ ಲೆಕ್ಕಿಸದೆ ಜೆಡಿಎಸ್‌ನಿಂದ ಪೂಜಾರಿ ಸ್ಪರ್ಧೆ ಮಾಡಿದ್ದಾರೆ. ಇವರ ಸ್ಪರ್ಧೆಯಿಂದ ನಮಗೆ ಯಾವುದೇ ಹಾನಿಯಾಗುವುದಿಲ್ಲ. ಈ ಚುನಾವಣೆಯನ್ನು ನಾವು ಸಮರ್ಥವಾಗಿ ಎದುರಿಸುತ್ತೇವೆ. ರಮೇಶ ಅವರು ಸುಮಾರು 50 ಸಾವಿರ ಮತಗಳಿಂದ ಆಯ್ಕೆಯಾಗಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ರಮೇಶಗೆ ಮಂತ್ರಿ ಸ್ಥಾನ:

ರಮೇಶ ಜಾರಕಿಹೊಳಿ ಅವರು 1999 ರಿಂದ ಸತತ ಶಾಸಕರಾಗಿ, ಸಚಿವರಾಗಿ ಗೋಕಾಕ ಮತಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದಾರೆ. ಡಿ.5ರಂದು ನಡೆಯುವ ಉಪಚುನಾವಣೆಯಲ್ಲಿ ರಮೇಶ ಜಾರಕಿಹೊಳಿಗೆ ಮತ ನೀಡಿ ಆಶೀರ್ವದಿಸಬೇಕು. ಇದರಿಂದ ಕ್ಷೇತ್ರಕ್ಕೆ ಎರಡು ಲಾಭವಾಗಲಿವೆ. ಶಾಸಕ ಸ್ಥಾನದ ಜೊತೆಗೆ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಮಹತ್ವದ ಖಾತೆ ಸಿಗಲಿದೆ. ಸ್ವತಃ ಯಡಿಯೂರಪ್ಪ ಇದರ ಬಗ್ಗೆ ಈಗಾಗಲೇ ಸುಳಿವು ನೀಡಿದ್ದಾರೆ ಎಂದು ಶಾಸಕ ಬಾಲಚಂದ್ರ ಹೇಳಿದರು.

ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ

Follow Us:
Download App:
  • android
  • ios