ನಾರಾಯಣ ಹೆಗಡೆ

ಹಾವೇರಿ(ಡಿ.19): ಅಪಾರ ನಿರೀಕ್ಷೆ ಇಟ್ಟುಕೊಂಡು ರಾಣಿಬೆನ್ನೂರು ಕ್ಷೇತ್ರದ ಜನತೆ ಅರುಣಕುಮಾರ್ ಪೂಜಾರ ಅವರನ್ನು ಗೆಲ್ಲಿಸಿ ಕಳಿಸಿದ್ದಾರೆ. ಯುವಜನರ ಆಶಾಕಿರಣ ಎಂದೇ ಬಿಂಬಿತವಾಗಿರುವ ನೂತನ ಶಾಸಕ ಅರುಣಕುಮಾರ್ ಮುಂದೆ ಸವಾಲುಗಳ ಸರಮಾಲೆಯೇ ಇದ್ದು, ಅದನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಕ್ಷೇತ್ರಕ್ಕೆ ಅರುಣೋದಯವಾಗುವಂತೆ ಮಾಡುವ ಜವಾಬ್ದಾರಿ ಹೆಗಲೇರಿದೆ. 

ರಾಜಕೀಯದ ಹಳೆ ಹುಲಿ, ಕ್ಷೇತ್ರದ ಪ್ರತಿಯೊಂದು ಹಳ್ಳಿಗಳ ನಾಡಿಮಿಡಿತ ಅರಿತಿರುವ, ರಾಜಕೀಯದ ಎಲ್ಲಾ ಪಟ್ಟುಗಳನ್ನು ತಿಳಿದಿರುವ ಕೆ.ಬಿ. ಕೋಳಿವಾಡರ ವಿರುದ್ಧ ಗೆದ್ದು ಇತಿಹಾಸ ನಿರ್ಮಿಸಿರುವ ಯುವ ಶಾಸಕ ಅರುಣಕುಮಾರ್ ಮೇಲೆ ಈಗ ಸಾಕಷ್ಟು ಜವಾಬ್ದಾರಿಯಿದೆ. ಇದೇ ಕಾರಣಕ್ಕೆ ರಾಜಕೀಯ ಲೆಕ್ಕಾಚಾರಗಳನ್ನು ತಲೆಕೆಳಗಾಗುವಂತೆ ಮಾಡಿದ ಕ್ಷೇತ್ರದ ಜನತೆ ಅರುಣಕುಮಾರ್ ಅವರನ್ನು ಬೆಂಬಲಿಸಿ ಗೆಲ್ಲಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹಳಬರು ಕ್ಷೇತ್ರದ ಅಭಿವೃದ್ಧಿ ಮಾಡಿದ್ದು ಸಾಕು, ಹೊಸಬರಿಗೆ ಅವಕಾಶ ಕೊಡೋಣ ಎಂಬ ಸಂದೇಶವನ್ನು ಮತದಾರರು ನೀಡಿದ್ದಾರೆ. ಕ್ಷೇತ್ರದ ಜನತೆ ಎದುರಿಸುತ್ತಿರುವ ಅನೇಕ ಸಮಸ್ಯೆಗಳನ್ನು ಬಗೆಹರಿಸಿ, ಬೇಡಿಕೆಗಳಿಗೆಲ್ಲ ಸ್ಪಂದಿಸುವ ಕಾಲ ಈಗ ಬಂದಿದೆ. ಇಷ್ಟು ವರ್ಷ ಕ್ಷೇತ್ರವನ್ನು ಪ್ರತಿನಿಧಿಸಿದವರು ಏನೂ ಮಾಡಿಲ್ಲ ಎಂಬ ಆರೋಪ ಮಾಡುತ್ತಿದ್ದವರ ಕೈಗೇ ಅಧಿಕಾರ ಬಂದಿದೆ. ಯುವಕರಾಗಿರುವುದರಿಂದ ಹುಮ್ಮಸ್ಸು ಕೂಡ ಇದೆ. ಬಡಜನರ ಕಷ್ಟ ಕಾರ್ಪಣ್ಯಗಳನ್ನು ಹತ್ತಿರದಿಂದ ನೋಡಿರುವ ಅರುಣಕುಮಾರ್ ಪೂಜಾರ ಈಗ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸ್ಪಷ್ಟ ಯೋಜನೆ ರೂಪಿಸಿಕೊಂಡು  ಕಾರ್ಯೋನ್ಮುಖರಾಗುವ ಅಗತ್ಯವಿದೆ. 

ಪ್ರಮುಖ ಸವಾಲು: 

ರಾಣಿಬೆನ್ನೂರು ತಾಲೂಕು ಸದ್ಯ ಹಾವೇರಿ ಉಪ ವಿಭಾಗದಲ್ಲಿದೆ. ರೈತರ ಜಮೀನುಗಳ ವ್ಯಾಜ್ಯಗಳಿಗೆ ಸಂಬಂಧಿಸಿದ ಮೇಲ್ಮನವಿ ಪ್ರಕರಣ, ಭೂಸ್ವಾಧಿನ ಪ್ರಕರಣಗಳು, ಇನಾಮು ಜಮೀನಿಗೆ ಸಂಬಂಧಿಸಿದ ಪ್ರಕರಣಗಳು, ಭೂನ್ಯಾಯ ಮಂಡಳಿ ವ್ಯಾಜ್ಯಗಳು ಮುಂತಾದವುಗಳಿಗೆ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಪರಿಹಾರ ದೊರಕುತ್ತದೆ. ಹೀಗಾಗಿ ರಾಣಿಬೆನ್ನೂರು ಜನತೆ ಹಾವೇರಿಯ ಎಸಿ ಕಚೇರಿಗೆ ಅಲೆಯಬೇಕಾಗುತ್ತಿದೆ. ಇದನ್ನು ತಪ್ಪಿಸಲು ಬ್ಯಾಡಗಿ, ಹಿರೇಕೆರೂರ ತಾಲೂಕುಗಳನ್ನು ಒಳಗೊಂಡು ರಾಣಿಬೆನ್ನೂರು ನಗರದಲ್ಲಿಯೇ ಉಪ ವಿಭಾಗಾಧಿಕಾರಿ ಕಚೇರಿ ಪ್ರಾರಂಭಿಸಬೇಕು ಎಂಬ ಬೇಡಿಕೆಯಿದೆ. 

ಜಿಲ್ಲೆಯಲ್ಲಿಯೇ ಅತಿ ದೊಡ್ಡ ನಗರವಾದ ರಾಣಿಬೆನ್ನೂರಿಗೆ ಬಸ್ ನಿಲ್ದಾಣದ ಅಗತ್ಯವಿದೆ. ಈಗಿರುವ ಬಸ್‌ ನಿಲ್ದಾಣವು ನಗರದ ಮಧ್ಯವರ್ತಿ ಸ್ಥಳದಲ್ಲಿದ್ದರೂ ತುಂಬಾ ಚಿಕ್ಕದಾಗಿದೆ. ಬಸ್ಸುಗಳು ಸರಾಗವಾಗಿ ಬಸ್‌ ನಿಲ್ದಾಣದ ಒಳಗೆ ಹೋಗಿ ಬರಲು ಪ್ರಯಾಸ ಪಡುವಂತಹ ಸ್ಥಿತಿಯಿದೆ. ಇದರ ಸಮೀಪದಲ್ಲಿಯೇ ಟ್ರಾಫಿಕ್ ಸಿಗ್ನಲ್ ಇರುವುದರಿಂದ ಅನೇಕ ಬಾರಿ ಈ ಮಾರ್ಗವಾಗಿ ವಾಹನಗಳು ಸಂಚರಿಸಲು ತೊಂದರೆಯಾಗುತ್ತಿದೆ. 

ವಾಣಿಜ್ಯ ನಗರಿ ರಾಣಿಬೆನ್ನೂರು ಬೆಳೆಯುತ್ತಿರುವುದರಿಂದ ಜನಸಂಖ್ಯೆ ಹಾಗೂ ವಾಹನಗಳ ದಟ್ಟಣೆ ನಿಯಂತ್ರಣಕ್ಕಾಗಿ ನಗರದಲ್ಲಿ ವರ್ತುಲ ರಸ್ತೆ ನಿರ್ಮಿಸಬೇಕಾಗಿದೆ. ಈ ನಿಟ್ಟಿನಲ್ಲಿ ನಗರ ಯೋಜನಾ ಪ್ರಾಧಿಕಾರದ ಕಚೇರಿಯ ಸಹಹೋಗದೊಂದಿಗೆ ನೀಲ ನಕ್ಷೆ ರೂಪಿಸಿ ಜಾರಿಗೆ ತರಬೇಕಾಗಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಅಭಿವೃದ್ಧಿಗೂ ಕ್ರಮ ಕೈಗೊಳ್ಳಬೇಕಿದೆ. ಜಿಲ್ಲೆಯಲ್ಲಿಯೇ ರಾಣಿಬೆನ್ನೂರು ಅತಿಹೆಚ್ಚು ಜನಸಂಖ್ಯೆ ಹೊಂದಿರುವ ನಗರವಾಗಿದ್ದು, ಇನ್ನೊಂದು ಪೊಲೀಸ್ ಠಾಣೆಯ ಅವಶ್ಯವಿದೆ. ಸಿಬ್ಬಂದಿ ಕೊರತೆಯಿಂದಾಗಿ ರಾಣಿಬೆನ್ನೂರು ಶಹರ ಪೊಲೀಸ್ ಠಾಣೆಯ ಸಿಬ್ಬಂದಿ ಒತ್ತಡದಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ. ಇದಲ್ಲದೆ ಬೆಳೆಯುತ್ತಿರುವ ನಗರದ ಜನತೆ ಶಾಂತಿ ಭದ್ರತೆ ಒದಗಿಸುವ ಸಲುವಾಗಿಯೂ ಇನ್ನೊಂದು ಠಾಣೆಯ ಅವಶ್ಯವಿದೆ ಎಂಬುದು ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿದೆ. 

ನೀರಾವರಿಗೆ ಬೇಕು ಆದ್ಯತೆ: 

ಜಿಲ್ಲೆಗೆ ವರದಾನವಾಗಿರುವ ತುಂಗಭದ್ರಾ ನದಿ ರಾಣಿಬೆನ್ನೂರು ತಾಲೂಕಿನಲ್ಲಿಯೇ ಹರಿದಿದೆ. ಬೇಸಿಗೆಯಲ್ಲಿ ಅನೇಕ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ಅದಕ್ಕಾಗಿ ತುಂಗಭದ್ರಾ ನದಿಯಿಂದ ಕೆರೆ ತುಂಬಿಸುವ ಕಾರ್ಯ ಆಗಬೇಕಿದೆ. ಅಲ್ಲದೇ ನನೆಗುದಿಗೆ ಬಿದ್ದಿರುವ ಏತ ನೀರಾವರಿ ಯೋಜನೆ, ಕುಡಿಯುವ ನೀರಿನ ಯೋಜನೆಗಳನ್ನು ಚುರುಕುಗೊಳಿಸಬೇಕಿದೆ. ಆ ಮೂಲಕ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಅಲ್ಲದೇ ಕೃಷಿ ಸಂಬಂಧಿ ಕಾರ್ಖಾನೆ, ಗಾರ್ಮೆಂಟ್ಸ್ ಸ್ಥಾಪಿಸುವ ಮೂಲಕ ಮಹಿಳೆಯರು, ಯುವ ಜನರಿಗೆ ಸ್ಥಳೀಯವಾಗಿ ಉದ್ಯೋಗ ನೀಡಲು ಗಮನ ನೀಡಬೇಕಿದೆ. ಸರ್ಕಾರಿ ಶಾಲೆಗಳಿಗೆ ಮೂಲಸೌಲಭ್ಯ ಕಲ್ಪಿಸುವ ಮೂಲಕ ಕನ್ನಡ ಶಾಲೆ ಉಳಿಸಲು ಪ್ರಯತ್ನಿಸಬೇಕಿದೆ.

ಕ್ಷೇತ್ರದ ಜನರ ಆಶಯ ಈಡೇರಿಸುವಂತಾಗಲಿ

ರಾಣಿಬೆನ್ನೂರು ರಾಜಕೀಯಕ್ಕೂ ಹಾಗೂ ಅಕ್ರಮ ಮರಳುಗಾರಿಕೆಗೂ ಅವಿನಾಭಾವ ಸಂಬಂಧವಿದೆ ಎಂಬ ಆರೋಪವಿದೆ. ತುಂಗಭದ್ರಾ ನದಿಯಲ್ಲಿ ಸಿಗುವ ಉತ್ಕೃಷ್ಟ ದರ್ಜೆಯ ಮರಳು ರಾಜಧಾನಿ ಬೆಂಗಳೂರು,ಇತ್ತ ಹುಬ್ಬಳ್ಳಿ ಕಡೆಗೆ ಅಕ್ರಮವಾಗಿ ರಾಜಾರೋಷವಾಗಿ ಸಾಗಣೆಯಾಗುತ್ತದೆ. ಆದರೆ, ಸ್ಥಳೀಯ ಬಡ ಜನರಿಗೆ ಮನೆ ಕಟ್ಟಿಕೊಳ್ಳಲು ಮರಳು ಸಿಗುತ್ತಿಲ್ಲ. ಸಮುದ್ರದೊಂದಿಗೆ ನೆಂಟಸ್ಥನ, ಆದರೆ ಉಪ್ಪಿಗೆ ಬರ ಎಂಬಂತ ಸ್ಥಿತಿ ಇಲ್ಲಿಯ ಜನರದ್ದು. ಈ ಸಮಸ್ಯೆಯನ್ನು ನೂತನ ಶಾಸಕರು ಹೇಗೆ ನಿಭಾಯಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿದೆ. ಜನರ ನಿರೀಕ್ಷೆಗಳನ್ನು ಹುಸಿಗೊಳಿಸದೇ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಕ್ಷೇತ್ರಕ್ಕೆ ಅರುಣೋದಯವಾಗಬೇಕು ಎಂಬುದು ಜನರ ಆಶಯವಾಗಿದೆ.

ಈ ಬಗ್ಗೆ ಮಾತನಾಡಿದ ಶಾಸಕ ಅರುಣಕುಮಾರ ಪೂಜಾರ ಅವರು, ಸಮಯದಲ್ಲಿ ಮತದಾರರಿಗೆ ನೀಡಿರುವ ಭರವಸೆಗಳ ಈಡೇರಿಕೆಗೆ ಒತ್ತು ನೀಡಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ. ತಾಲೂಕಿನಲ್ಲಿ ಕೆರೆ ತುಂಬಿಸುವ, ಹನಿ ನೀರಾವರಿ ಮುಂತಾದ ಯೋಜನೆಗಳ ಜಾರಿಗೆ ಒತ್ತು ನೀಡುತ್ತೇನೆ. ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಖಾನೆಗಳ ಸ್ಥಾಪನೆಗೆ ಪ್ರಯತ್ನಿಸುತ್ತೇನೆ. ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಪದೇ ಪದೇ ಕಚೇರಿಗೆ ಅಲೆದಾಡುವಂತೆ ಮಾಡಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸಾರ್ವಜನಿಕರಿಗೆ ಸುಲಭವಾಗಿ ಮತ್ತು ಯೋಗ್ಯ ದರದಲ್ಲಿ ಮರಳು ಲಭಿಸುವಂತೆ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಜತೆ ಚರ್ಚಿಸುತ್ತೇನೆ ಎಂದು ತಿಳಿಸಿದ್ದಾರೆ. 

ನೀರಾವರಿಗೆ ಆದ್ಯತೆ ನೀಡಬೇಕು. ತಾಲೂಕಿನಲ್ಲಿ ಹರಿದಿರುವ ತುಂಗಭದ್ರಾ ನದಿಯಿಂದ ಎಲ್ಲ ಕೆರೆಗಳನ್ನು ಭರ್ತಿ ಮಾಡಬೇಕು. ಹಸಿರು ಕ್ರಾಂತಿ ಮಾಡುವ ಮೂಲಕ ರಾಜ್ಯದಲ್ಲೇ ಮಾದರಿ ತಾಲೂಕನ್ನಾಗಿಸಲು ನೂತನ ಶಾಸಕರು ಶ್ರಮಿಸಬೇಕು ಎಂದು ರೈತ ಮುಖಂಡ ರವೀಂದ್ರಗೌಡ ಪಾಟೀಲ ಅವರು ಹೇಳಿದ್ದಾರೆ. 

ಅರಣ್ಯಭೂಮಿ ಸಾಗುವಳಿದಾರ ರೈತರಿಗೆ ಹಕ್ಕುಪತ್ರ ಕೊಡಿಸುವುದು ತುರ್ತಾಗಿ ಆಗಬೇಕಿದೆ. ಅಲ್ಲದೇ ಸರ್ಕಾರ ಜಾರಿಗೆ ತಂದಿರುವ ಸಾಲ ಮನ್ನಾ ಯೋಜನೆ ಎಲ್ಲ ರೈತರಿಗೆ ತಲು ಪಬೇಕು. ರಾಣಿಬೆನ್ನೂರಿನಲ್ಲಿ ಎಸಿ ಕಚೇರಿ ಆರಂಭಿಸಲು ಒತ್ತು ನೀಡಬೇಕು ಎಂದು ವಕೀಲ ಎಸ್.ಡಿ. ಹಿರೇಮಠ ಅವರು ತಿಳಿಸಿದ್ದಾರೆ.