ಮಳವಳ್ಳಿ(ಮಾ.04):  ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ಅವರ ಬಗ್ಗೆ ಸಚಿವ ಸಿ.ಪಿ.ಯೋಗೇಶ್ವರ್‌ ಹಗುರವಾಗಿ ಮಾತಾಡಿರುವುದನ್ನ ಶಾಸಕ ಡಾ.ಕೆ.ಅನ್ನದಾನಿ ಖಂಡಿಸಿದರು.

ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸುಮಾರು 5.5 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಕನ್ನಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ರಾಜ್ಯದ ಉತ್ತಮ ನಾಯಕರಲ್ಲಿ ಒಬ್ಬರಾಗಿ, 2 ಬಾರಿ ಆಡಳಿತ ನಡೆಸಿರುವ ಮಾಜಿ ಸಿಎಂ ಎಚ್ಡಿಕೆ ಬಗ್ಗೆ ಸಚಿವ ಸಿ.ಪಿ.ಯೋಗೇಶ್ವರ್‌ ಬಳಸುತ್ತಿರುವ ಪದಗಳು ಸರಿಯಲ್ಲ ಎಂದು ಕಿಡಿಕಾರಿದರು.

ಸಚಿವ ಸ್ಥಾನದಲ್ಲಿ ಇದ್ದು ಈ ರೀತಿ ಮಾತನಾಡುವುದು ಯೋಗೇಶ್ವರ್‌ಗೆ ಶೋಭೆಯಲ್ಲ. ಮಾಜಿ ಸಿಎಂ ಕುಮಾರಸ್ವಾಮಿ ರಾಜ್ಯದ ದೊಡ್ಡ ನಾಯಕರು ಎಂಬುವುದನ್ನು ಮನಗಣಬೇಕು ಎಂದರು.

ಜಾರಕಿಹೊಳಿ ರಾಸಲೀಲೆ : ಇದೊಂದು ಪಕ್ಕಾ ಪ್ಲಾನ್ಡ್ ಘಟನೆ ...

ರಮೇಶ್‌ ಜಾರಕಿಹೊಳಿ ಸೆಕ್ಸ್‌ ಸಿಡಿ ಬಗ್ಗೆ ನಮ್ಮ ನಾಯಕರು ಮಾತನಾಡುತ್ತಾರೆ. ಯಾರು ತಪ್ಪು ಮಾಡಿದ್ದಾರೋ ಎಂಬುದು ತನಿಖೆಯಿಂದ ಸತ್ಯ ಹೊರಬರಬೇಕಿದೆ. ಶಾಸಕನಾಗಿ ಅಭಿವೃದ್ಧಿ ಕಡೆಗೆ ಮಾತ್ರ ಗಮನ ಹರಿಸುವೆ. ಕನ್ನಳ್ಳಿ ಗ್ರಾಮದ ಜನರ ಬೇಡಿಕೆಯಂತೆ ಸೇತುವೆ ಮತ್ತು ರಸ್ತೆ ಅಭಿವೃದ್ಧಿಗೆ ಹೆಚ್ಚುವರಿಯಾಗಿ 20 ಲಕ್ಷ ರು. ಅನುದಾನ ನೀಡಲಾಗುವುದು ಎಂದರು.

ಹಿಂದೆ ಕುಮಾರಸ್ವಾಮಿ ಸಿಎಂ ಆಗಿದ್ದ ಅವಧಿಯಲ್ಲಿ ತಾಲೂಕಿನ ಹಿಂದುಳಿದ ಜನರು ವಾಸಿಸುವ ಪ್ರದೇಶಗಳಿಗೆ ಮೂಲ ಸೌಕರ್ಯ ಒದಗಿಸುವ ಉದ್ದೇಶದಿಂದ 10 ಕೋಟಿ ರು. ಅನುದಾನ ನೀಡಿದ್ದರು. ಯಡಿಯೂರಪ್ಪ ಅವರ ಸರ್ಕಾರ ತಡೆಹಿಡಿದಿದ್ದ ಅನುದಾನವನ್ನು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಬಿಡುಗಡೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ 45 ಗ್ರಾಮಗಳ ಅಭಿವೃದ್ಧಿಗೆ ನೀಲನಕ್ಷೆ ಸಿದ್ಧವಾಗಿದೆ. ಸದ್ಯದಲ್ಲಿಯೇ ಕಾಮಗಾರಿ ಆರಂಭವಾಗಲಿದೆ ಎಂದರು.

ಗಗನಚುಕ್ಕಿ ಜಲಪಾತದ ಬಳಿ ಭಾನುವಾರ ಚಾಲನೆ ನೀಡಿದ್ದ ಸುಮಾರು 3.54 ಕೋಟಿ ರು. ವೆಚ್ಚದ ಕಾಮಗಾರಿಗೆ ಭೂಮಿಪೂಜೆ ಕಾರ್ಯಕ್ರಮಕ್ಕೆ ಸಚಿವರು ಹಾಗೂ ಅಧಿಕಾರಿಗಳ ಗೈರಿನ ಬಗ್ಗೆ ಮಾತನಾಡಿದ ಶಾಸಕರು, ಯಾವುದೂ ಒಂದು ಪಕ್ಷದ ಕಾರ್ಯಕ್ರಮವಲ್ಲ. ಕ್ಷೇತ್ರದ ಜನರು ಮತ ನೀಡಿ ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ಮತ್ತೆ ಬಿಜೆಪಿಯವರು ಬೇಕಾದರೆ ಸಚಿವರು ಹಾಗೂ ಮುಖ್ಯಮಂತ್ರಿಗಳನ್ನು ಕರೆದುಕೊಂಡು ಬಂದ ಪೂಜೆ ಮಾಡಲಿ ನನ್ನದೇನು ಅಭ್ಯಂತರವಿಲ್ಲ ಎಂದರು.

ಈ ವೇಳೆ ಶೆಟ್ಟಹಳ್ಳಿ ಗ್ರಾಪಂ ಅಧ್ಯಕ್ಷ ನಾಗೇಂದ್ರ, ಸದಸ್ಯರಾದ ಮನೋಹರ್‌, ತಾಲೂಕು ಜೆಡಿಎಸ್‌ ಘಟಕದ ಅಧ್ಯಕ್ಷ ಮಲ್ಲೇಗೌಡ, ನಂಜುಂಡಸ್ವಾಮಿ ಇದ್ದರು.