ಡಿ.ಜೆ.ಹಳ್ಳಿ ಗಲಭೆ: ಸಂಪತ್ ರಾಜ್ ವಿರುದ್ಧ ಕ್ರಮಕ್ಕೆ ಸೋನಿಯಾಗೆ ಮನವಿ, ಅಖಂಡ
ನಮ್ಮ ಮನೆಗೆ ಬೆಂಕಿ ಹಚ್ಚಿ ಇಂದಿಗೆ ಮೂರು ತಿಂಗಳಾಗಿದೆ. ಮನೆ ಸುಟ್ಟಿದ್ದರಿಂದ ಬೀದಿಗೆ ಬಂದಿದ್ದೇವೆ, ಒಂದೇ ಒಂದು ಕರ್ಚಿಪ್ ಸಹ ಸಿಕ್ಕಿಲ್ಲ. ಈವರೆಗೂ ಪ್ರಕರಣದ ಪ್ರಮುಖ ಆರೋಪಿಗಳನ್ನು ಈವರೆಗೆ ಬಂಧಿಸಿಲ್ಲ. ಗೃಹ ಸಚಿವರು ಆದಷ್ಟು ಬೇಗ ಬಂಧಿಸುವಂತೆ ಸೂಚಿಸಲಿ, ಒಬ್ಬ ಶಾಸಕನ ಮನೆಗೆ ಬೆಂಕಿ ಇಡುತ್ತಾರೆ ಎಂದರೆ ಏನರ್ಥ ಎಂದ ಅಖಂಡ ಶ್ರೀನಿವಾಸಮೂರ್ತಿ
ಬೆಂಗಳೂರು(ನ.12): ಡಿ.ಜೆ.ಹಳ್ಳಿ ಗಲಭೆ ವೇಳೆ ನಮ್ಮ ಮನೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಮಾಜಿ ಮೇಯರ್ ಸಂಪತ್ ರಾಜ್ ನೇರ ಪಾತ್ರ ವಹಿಸಿದ್ದು, ಅವರ ಮೇಲೆ ಪಕ್ಷದ ವತಿಯಿಂದ ಕ್ರಮ ಕೈಗೊಳ್ಳುವಂತೆ ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿ ಹಾಗೂ ರಾಹುಲ್‌ಗಾಂಧಿ ಅವರಿಗೆ ಮನವಿ ಮಾಡುವುದಾಗಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಹೇಳಿದ್ದಾರೆ. ಅಲ್ಲದೆ, ಈ ವಿಚಾರದಲ್ಲಿ ಕಾಂಗ್ರೆಸ್ ಮುಖಂಡರ ನೆರವನ್ನು ಯಾಚಿಸಿದ್ದು, ಅವರು ನಮ್ಮ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪ್ರಕರಣದ ಪ್ರಮುಖ ಆರೋಪಿಯ ಇನ್ನೂ ಬಂಧನವಾಗದ ಹಿನ್ನೆಲೆಯಲ್ಲಿ ಕೋರ್ಟ್‌ಗೆ ಮೊರೆ ಹೋಗುವ ಬಗ್ಗೆ ತಮ್ಮ ವಕೀಲರ ಜೊತೆ ಚರ್ಚಿಸುವುದಾಗಿಯೂ ತಿಳಿಸಿದರು. ನಮ್ಮ ಮನೆಗೆ ಬೆಂಕಿ ಹಚ್ಚಿ ಇಂದಿಗೆ ಮೂರು ತಿಂಗಳಾಗಿದೆ. ಮನೆ ಸುಟ್ಟಿದ್ದರಿಂದ ಬೀದಿಗೆ ಬಂದಿದ್ದೇವೆ, ಒಂದೇ ಒಂದು ಕರ್ಚಿಪ್ ಸಹ ಸಿಕ್ಕಿಲ್ಲ. ಈವರೆಗೂ ಪ್ರಕರಣದ ಪ್ರಮುಖ ಆರೋಪಿಗಳನ್ನು ಈವರೆಗೆ ಬಂಧಿಸಿಲ್ಲ. ಗೃಹ ಸಚಿವರು ಆದಷ್ಟು ಬೇಗ ಬಂಧಿಸುವಂತೆ ಸೂಚಿಸಲಿ, ಒಬ್ಬ ಶಾಸಕನ ಮನೆಗೆ ಬೆಂಕಿ ಇಡುತ್ತಾರೆ ಎಂದರೆ ಏನರ್ಥ ಎಂದರು.
ಪ್ರಕರಣ ಸಂಬಂಧ ಹಿರಿಯರಾದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ಶಾಸಕ ಜಮೀರ್ ಅಹಮದ್ ಅವರ ಜೊತೆ ಮಾತನಾಡಿ ನ್ಯಾಯ ಕೊಡಿಸುವಂತೆ ಕೇಳಿದ್ದೇನೆ. ಸಿದ್ದರಾಮಯ್ಯ ನನ್ನ ಪರವಾಗಿದ್ದಾರೆ. ಅಧಿವೇಶನದಲ್ಲಿ ಗಟ್ಟಿಯಾಗಿ ನನ್ನ ಪರ ಮಾತನಾಡಿದ್ದಾರೆ ಎಂದರು.
ಬೆಂಗಳೂರು ಗಲಭೆ ಪ್ರಕರಣ: ಸಂಪತ್ ರಾಜ್‌ಗೆ ನಿರೀಕ್ಷಣಾ ಜಾಮೀನು ನೀಡಬೇಡಿ
ಕಾಂಗ್ರೆಸ್ ಬಿಟ್ಟು ಹೋಗಲ್ಲ:
ನಾನು ಯಾವ ಪಕ್ಷಕ್ಕೂ ಹೋಗುವುದಿಲ್ಲ, ನಾನು ಕಾಂಗ್ರೆಸ್ಸಿಗ, ಉದ್ದೇಶಪೂರ್ವಕವಾಗಿ ಬೇರೆ ಪಕ್ಷಕ್ಕೆ ಹೋಗುತ್ತಿದ್ದಾರೆಂದು ಆರೋಪ ಮಾಡುತ್ತಿದ್ದಾರೆ. ನಾನು ಕಾಂಗ್ರೆಸ್‌ನಲ್ಲಿಯೇ ಇರುತ್ತೇನೆ ಎಂದು ಅಖಂಡ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅಧ್ಯಕ್ಷರನ್ನೇ ಕೇಳಿ:
ಈ ವಿಷಯ ಕುರಿತು ಎರಡು-ಮೂರು ಬಾರಿ ಡಿ.ಕೆ. ಶಿವಕುಮಾರ್ ಅವರ ಜೊತೆ ಮಾತನಾಡಿದಾಗ, ನ್ಯಾಯ ಕೊಡಿಸುವುದಾಗಿ ಹೇಳಿದ್ದಾರೆ. ಆದರೆ ಈವರೆಗೆ ಶಿವಕುಮಾರ್ ಘಟನೆ ಬಗ್ಗೆ ಬಹಿರಂಗ ಹೇಳಿಕೆ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷರ ಅಸಹಕಾರ ನೀಡುತ್ತಿದ್ದಾರೆಯೇ ಎಂಬ ಬಗ್ಗೆ ನೀವು ಅಧ್ಯಕ್ಷರನ್ನೇ ಕೇಳಬೇಕು ಎಂದು ಅಖಂಡ ಶ್ರೀನಿವಾಸಮೂರ್ತಿ ಉತ್ತರಿಸಿದರು.
ಗಲಭೆಗೆ ನಡೆದ ಸ್ಥಳದಿಂದ ಸುಮಾರು 300 ಮೀಟರ್ ದೂರದಲ್ಲಿ ಸಂಪತ್‌ರಾಜ್ ಅವರ ಶಿಷ್ಯ ಅರುಣ್ ಮತ್ತು ಸಂತೋಷ್ ಇದ್ದರು ಎಂಬುದು ಮೊಬೈಲ್ ಟವರ್ ಲೋಕೇಶನ್ ಮೂಲಕ ಗೊತ್ತಾಗಿರುವುದು ಸಿಸಿಬಿ ಪೊಲೀಸರು ನಡೆಸಿದ ತನಿಖೆಯಿಂದ ಗೊತ್ತಾಗಿದೆ. ಈಗಾಗಲೇ ಸಂತೋಷ್, ಅರುಣ್ ಅವರನ್ನು ಬಂಧಿಸಿದ್ದಾರೆ. ಅವರು ಯಾರ ಜೊತೆ ಮಾತನಾಡಿದ್ದಾರೆ ಎಂಬುದು ಸಹ ಗೊತ್ತಾಗಿದೆ, ಇನ್ನೇನು ಸಾಕ್ಷಿ ಬೇಕು ಎಂದು ಪ್ರತಿಕ್ರಿಯಿಸಿದರು.
ಪ್ರಕರಣದ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಶೂನ್ಯವೇಳೆ ಪ್ರಸ್ತಾಪಿಸಲು ಉದ್ದೇಶಿಸಿದ್ದೆ. ಆದರೆ ವಿಳಂಬವಾದ ಕಾರಣ ಪ್ರಸ್ತಾಪಿಸಲು ಆಗಲಿಲ್ಲ. ನನಗೆ ಬಂದ ಸ್ಥಿತಿ ಯಾವ ಶಾಸಕರಿಗೂ ಬರಬಾರದು. ನನಗೆ ಆಗಿರುವ ನೋವು ಬೇರೆ ಯಾರಿಗೂ ಆಗಬಾರದು ಎಂದರು.