ಬೆಂಗಳೂರು ಗಲಭೆ ಪ್ರಕರಣ: ಸಂಪತ್ ರಾಜ್‌ಗೆ ನಿರೀಕ್ಷಣಾ ಜಾಮೀನು ನೀಡಬೇಡಿ
ವಿಶೇಷ ನ್ಯಾಯಾಲಯಕ್ಕೆ ಸಿಸಿಬಿ ಪರ ವಕೀಲರಿಂದ ಆಕ್ಷೇಪಣೆ ಸಲ್ಲಿಕೆ| ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧನ ಭೀತಿಯಲ್ಲಿರುವ ಮಾಜಿ ಮೇಯರ್ ಸಂಪತ್ ರಾಜ್| ಅ.27ಕ್ಕೆ ವಿಚಾರಣೆ ಮುಂದೂಡಿದ ನ್ಯಾಯಾಲಯ|
ಬೆಂಗಳೂರು(ಅ.24): ನಗರದ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಚ್ಚಲು ಮಾಜಿ ಮೇಯರ್ ಸಂಪತ್‌ರಾಜ್ ಕುಮ್ಮಕ್ಕು ನೀಡಿರುವುದು ತನಿಖೆ ವೇಳೆ ಗೊತ್ತಾಗಿರುವುದರಿಂದ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಾರದು ಎಂದು ಸಿಸಿಬಿ ಪರ ವಕೀಲರು ವಿಶೇಷ ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಸಿದ್ದಾರೆ.
ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧನ ಭೀತಿಯಲ್ಲಿರುವ ಮಾಜಿ ಮೇಯರ್ ಸಂಪತ್ ರಾಜ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗೆ ಸಿಸಿಬಿ ಪರ ವಕೀಲ ಪ್ರಸನ್ನಕುಮಾರ್ ಶುಕ್ರವಾರ ಆಕ್ಷೇಪಣೆ ಸಲ್ಲಿಸಿದ್ದಾರೆ.
ಸಂಪತ್‌ರಾಜ್ ಸಹಾಯಕರಾದ ಅರುಣ್ ಮತ್ತು ಸಂತೋಷ್ ಘಟನೆ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿದ್ದು, ಕುಮ್ಮಕ್ಕು ನೀಡಿದ್ದಾರೆ. ಘಟನೆ ನಡೆದ ದಿನ ಮತ್ತು ಘಟನೆಗೂ ಮುನ್ನ ಈ ಇಬ್ಬರು ಸಹಾಯಕರೊಂದಿಗೆ ಅರ್ಜಿದಾರರು ಸುದೀರ್ಘವಾಗಿ ಮೊಬೈಲ್ ಸಂಭಾಷಣೆ ನಡೆಸಿದ್ದಾರೆ. ಅಲ್ಲದೆ, ಈಗಾಗಲೇ ಬಂಧನವಾಗಿರುವ 12 ಜನ ಆರೋಪಿಗಳು ಅರ್ಜಿದಾರರ ವಿರುದ್ಧ ಹೇಳಿಕೆಗಳನ್ನು ನೀಡಿದ್ದಾರೆ. ಹೀಗಾಗಿ ಅವರನ್ನು ವಶಕ್ಕೆ ಪಡೆದ ವಿಚಾರಣೆ ನಡೆಸಬೇಕಾಗಿದೆ.
ಡಿಜೆಹಳ್ಳಿಯಲ್ಲಿ ಗಲಭೆ ದಿನ ನಿಜಕ್ಕೂ ಆಗಿದ್ದೇನು? ವಿವರ ಕೊಟ್ಟ ನವೀನ್
ಕೊರೋನಾ ಸೋಂಕು ತಗುಲಿದೆ ಎಂದು ನಾಲ್ಕು ವಾರಗಳಿಗೂ ಹೆಚ್ಚು ದಿನಗಳ ಕಾಲ ತನಿಖಾಧಿಕಾರಿಗಳಿಂದ ತಪ್ಪಿಸಿಕೊಂಡಿದ್ದಾರೆ. ಒಬ್ಬ ಜನಪ್ರತಿನಿಧಿ ಆಗಿರುವವರು ತನಿಖೆಗೆ ಲಭ್ಯವಾಗದಿರುವ ನಡೆ ಕಾನೂನು ಬಾಹಿರ. ಆದ್ದರಿಂದ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಾರದು ಎಂದು ವಕೀಲರು ಕೋರಿದರು. ಪ್ರಕರಣದಲ್ಲಿ ಎರಡನೇ ಪ್ರತಿವಾದಿಯಾಗಿರುವ ಶಾಸಕ ಅಖಂಡ ಶ್ರೀನಿವಾಸ್‌ಮೂರ್ತಿ ಪರ ವಕೀಲರು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಅ.27ಕ್ಕೆ ಮುಂದೂಡಿದರು.
ಏನಿದು ಪ್ರಕರಣ?:
ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ಗಲಭೆಗೆ ಒಳ ಸಂಚು ರೂಪಿಸಿದ್ದಾರೆ ಎಂದು ತನ್ನ ವಿರುದ್ಧ ಆರೋಪ ಪಟ್ಟಿಯಲ್ಲಿ ತಿಳಿಸಿದ್ದಾರೆ. ಆದರೆ, ಎಲ್ಲಿ ಸಂಚು ನಡೆಸಲಾಗಿದೆ, ಯಾರ ಜೊತೆ ಸಂಚು ಮಾಡಲಾಗಿದೆ ಎಂಬುದನ್ನು ತಿಳಿಸಿಲ್ಲ. ಅಲ್ಲದೆ, ಗಲಭೆಯಲ್ಲಿ ಭಾಗಿಯಾಗಿರುವ ಬಗ್ಗೆ ಪುರಾವೆಗಳು ಇಲ್ಲ. ಘಟನೆ ಸಂಬಂಧ ದಾಖಲಾಗಿರುವ 67 ಎಫ್‌ಐಆರ್‌ಗಳಲ್ಲೂ ತಮ್ಮ ಹೆಸರು ಉಲ್ಲೇಖಿಸಿಲ್ಲ. ಆದ್ದರಿಂದ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಸಂಪತ್‌ರಾಜ್ ಅರ್ಜಿಯಲ್ಲಿ ಕೋರಿದ್ದರು.