ಬೆಂಗಳೂರು (ಫೆ.25):  ಚಿತ್ರದುರ್ಗದ ಮುರುಘಾ ಮಠದ ಕೋಟ್ಯಂತರ ಹಣ ದುರ್ಬಳಕೆಗೆ ಸಂಬಂಧಿಸಿದ ಅಸಲು ದಾವೆಯಲ್ಲಿ (ಒಎಸ್‌) ಮಠದ ಭಕ್ತರೊಬ್ಬರನ್ನು ಪ್ರತಿವಾದಿ ಮಾಡುವ ವಿಚಾರ ಕುರಿತು ಬೃಹನ್ಮಠದ ಪೀಠಾಧಿಪತಿ ಮುರುಘರಾಜೇಂದ್ರ ಶರಣರಿಗೆ ತುರ್ತು ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಈ ಕುರಿತು ಮಠದ ಭಕ್ತರಾದ ವಿಜಯಪುರ ಜಿಲ್ಲೆಯ ವಿಜಯಕುಮಾರ್‌ ಸಲ್ಲಿಸಿರುವ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರು ಬುಧವಾರ ವಿಚಾರಣೆ ನಡೆಸಿದರು.

ಅರ್ಜಿ ಕುರಿತು ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಬೃಹನ್ಮಠದ ಮಠಾಧಿಪತಿ ಮುರುಘರಾಜೇಂದ್ರ ಶರಣರು ಸೇರಿದಂತೆ ಅರ್ಜಿಯಲ್ಲಿನ ಎಲ್ಲ ಏಳು ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿದರು. ಜತೆಗೆ, ಅರ್ಜಿ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ಎರಡು ವಾರ ವಿಚಾರಣೆ ಮುಂದೂಡಿದರು.

ಸ್ವಾಮೀಜಿ ಸಹೋದರನಿಂದ ಅತ್ಯಾಚಾರ ಕೇಸ್ : ತಪ್ಪು ಮಾಡಿದವರಿಗೆ ಕ್ಷಮೆ ಇಲ್ಲ .

ಪ್ರಕರಣವೇನು?: ಮರುಘರಾಜೇಂದ್ರ ಶರಣರು ಬೃಹನ್ಮಠದ ಆಸ್ತಿ ಹಾಗೂ ಕೋಟ್ಯಂತರ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ, ಮಠಾಧಿಪತಿ ಸ್ಥಾನದಲ್ಲಿ ಮುಂದುವರಿಯದಂತೆ ಅವರಿಗೆ ನಿರ್ಬಂಧ ಹೇರಬೇಕು ಎಂದು ಕೋರಿ ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ, ವಿಶ್ವನಾಥ ಹಿರೇಮಠ ಮತ್ತು ರುದ್ರೇಶ್‌ ಎಂಬುವವರು ಬೆಂಗಳೂರಿನ 56ನೇ ಸಿಸಿಎಚ್‌ ನ್ಯಾಯಾಲಯದಲ್ಲಿ ಅಸಲು ದಾವೆ ದಾಖಲಿಸಿದ್ದರು. ಈ ದಾವೆಯಲ್ಲಿ ತಮ್ಮನ್ನು ಪ್ರತಿವಾದಿಯಾಗಿ ಪರಿಗಣಿಸುವಂತೆ ಕೋರಿ ವಿಜಯ್‌ ಕುಮಾರ್‌ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ವಜಾಗೊಳಿಸಿ ಬೆಂಗಳೂರಿನ 56ನೇ ಸಿಸಿಎಚ್‌ ನ್ಯಾಯಾಲಯ ಕಳೆದ 2020 ನ.9ರಂದು ಆದೇಶಿಸಿತ್ತು.

ಈ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿರುವ ವಿಜಯ್‌ ಕುಮಾರ್‌, ತಾವು ಸಹ ಮಠದ ಭಕ್ತರಾಗಿದ್ದೇವೆ. ಶರಣ ವಿರುದ್ಧದ ಮೂಲ ದಾವೆಯಲ್ಲಿ ಭಾಗಿಯಾಗುವ ಅರ್ಹತೆ ತಮಗೂ ಇದೆ. ಮೂಲ ದಾವೆಯಲ್ಲಿ ತಮ್ಮನ್ನು ಪ್ರತಿವಾದಿಯಾಗಿ ಮಾಡಬೇಕು ಎಂದು ಕೋರಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ವಜಾಗೊಳಿಸಿದ ಅಧೀನ ನ್ಯಾಯಾಲಯದ ಆದೇಶ ನ್ಯಾಯಸಮ್ಮತವಾಗಿಲ್ಲ. ಆದ್ದರಿಂದ ಅಧೀನ ನ್ಯಾಯಾಲಯದ ಆದೇಶ ರದ್ದುಗೊಳಿಸಬೇಕು. ಮೂಲ ದಾವೆಯಲ್ಲಿ ತಮ್ಮನ್ನು ಪ್ರತಿವಾದಿಯನ್ನಾಗಿ ಮಾಡಲು ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಅಲ್ಲದೆ, ಈ ತಕರಾರು ಅರ್ಜಿ ಇತ್ಯರ್ಥವಾಗುವರೆಗೂ ಮೂಲ ದಾವೆ ಕುರಿತ ಅಧೀನ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಗೆ ತಡೆ ನೀಡಬೇಕು ಎಂದು ವಿಜಯ್‌ ಕುಮಾರ್‌ ಮಧ್ಯಂತರ ಮನವಿ ಮಾಡಿದ್ದಾರೆ.