ಉಡುಪಿ: SSLC ವಿದ್ಯಾರ್ಥಿಗಳಿಗಾಗಿ ಮಿಷನ್-100
SSLCಯ ಪ್ರತಿ ವಿದ್ಯಾರ್ಥಿಯೂ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಬೇಕೆಂದು ಉಡುಪಿಯಲ್ಲಿ ಹೊಸ ಕಾರ್ಯಕ್ರಮವೊಂದನ್ನು ಆರಂಭಿಸಲಾಗಿದೆ. ಈಗಾಗಲೇ ನಡೆದ ಪರೀಕ್ಷೆಯಲ್ಲಿ ಹಿಂದುಳಿದ 500 ವಿದ್ಯಾರ್ಥಿಗಳನ್ನು ಆಯ್ಕೆಗೊಳಿಸಿ, ಅವರಿಗೆ ಉತ್ತೇಜನ ನೀಡುವ ಕೆಲಸ ಮಾಡಲಾಗುತ್ತಿದೆ.
ಉಡುಪಿ(ಸೆ.09): ಪ್ರಸಕ್ತ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿನ 2,657 ವಿದ್ಯಾರ್ಥಿಗಳು ಹಾಜರಾಗಲಿದ್ದು, ಪ್ರತಿಯೊಬ್ಬರು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಬೇಕು ಎನ್ನುವ ಉದ್ದೇಶದಿಂದ ಮಿಷನ್-100 ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕ್ಷೇತ್ರದ ಶಾಸಕ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
ಅವರು ಕಾರ್ಕಳದಲ್ಲಿ ನಡೆದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಉಡುಪಿ, ಜಿ.ಪಂ. ಉಡುಪಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಸಾರ್ವಜನಿಕ ಶಿಕ್ಷಣ ಇಲಾಖೆ ಕಾರ್ಕಳ ಮತ್ತು ವಿಕಾಸ ಸೇವಾ ಸಂಸ್ಥೆ ಸಹಯೋಗದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ರೂಪಿಸಿದ ಮಿಷನ್-100 ಕಾರ್ಯಕ್ರಮದ ಪೂರ್ವಭಾವಿಯಾಗಿ ಪೋಷಕರಿಗಾಗಿ ಆಯೋಜಿಸಿದ ಸಂಕಲ್ಪ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಪ್ರೋತ್ಸಾಹ:
ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳು ಒಂದು ದೃಢವಾದ ಸಂಕಲ್ಪದೊಂದಿಗೆ ಸಹಕರಿಸಿದ್ದಲ್ಲಿ ಮಾತ್ರ ಶೇ. ನೂರು ಫಲಿತಾಂಶದೊಂದಿಗೆ ಮಿಷನ್-100 ಸಾಧನೆ ಸಾಧ್ಯವಾಗಲಿದೆ. ಈಗಾಗಲೇ ನಡೆದ ಪರೀಕ್ಷೆಯಲ್ಲಿ ಹಿಂದುಳಿದ 500 ವಿದ್ಯಾರ್ಥಿಗಳನ್ನು ಆಯ್ಕೆಗೊಳಿಸಿ, ಅವರಿಗೆ ಉತ್ತೇಜನ ನೀಡುವ ಕೆಲಸ ಮಾಡಲಾಗುತ್ತಿದೆ. ಒಟ್ಟಿನಲ್ಲಿ ಕಾರ್ಕಳ ತಾಲೂಕಿನ ಫಲಿತಾಂಶದಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನವನ್ನು ಅಂಗೀಕರಿಸುವಂತಾಗಬೇಕು ಎಂದರು.
ಡಿಕೆಶಿ ಬಿಡುಗಡೆಗಾಗಿ ಕೊಲ್ಲೂರಿನಲ್ಲಿ ಚಂಡಿಕಾ ಹೋಮ
ಎಸ್‌ವಿಟಿ ಟ್ರಸ್ಟ್‌ನ ಕಾರ್ಯದರ್ಶಿ ಕೆ.ಪಿ. ಶೆಣೈ, ಶಿಕ್ಷಣ ಇಲಾಖೆಯ ನಿರ್ದೇಶಕ ಶೇಷಶಯನ ಕಾರಿಂಜ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ಶೆಣೈ, ಎಸ್‌ವಿಟಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಯೋಗೇಂದ್ರ ನಾಯಕ್ ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್, ದೇವದಾಸ್ ಕೆರಮನೆ ಕಾರ್ಯಕ್ರಮ ನಿರೂಪಿಸಿದರು, ವೆಂಕಟ್ರಮಣ ಕಲ್ಕೂರ ವಂದಿಸಿದರು.
ತುಳುವಿಗಾಗಿ ಮತ್ತೆ ಕರಾವಳಿಯಲ್ಲಿ ಟ್ವೀಟ್ ಅಭಿಯಾನ!