ಬೆಳಗಾವಿ: ತಪ್ಪಿಸಿಕೊಂಡಿದ್ದ ನಾಯಿ 250 ಕಿ.ಮೀ ದೂರದಿಂದ ಮರಳಿ ಮನೆಗೆ ಬಂತು..!
ಕೆಲವು ದಿನಗಳ ನಂತರ ಕಾಣೆಯಾಗಿದ್ದ ಶ್ವಾನ ಬರೋಬ್ಬರಿ 250 ಕಿ.ಮೀ ಕ್ರಮಿಸಿ ತನ್ನ ಮಾಲೀಕನ ಮನೆ ಮುಂದೆ ಪ್ರತ್ಯಕ್ಷವಾಗಿದೆ. ಇದರಿಂದ ಕುಟುಂಬಸ್ಥರು ಸಂತಸಗೊಂಡಿದ್ದು, ಮಹಾರಾಜ್‌ನಿಗೆ ಹೂವಿನ ಹಾರ ಹಾಕಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ.
ಬೆಳಗಾವಿ(ಆ.01): ಪಂಢರಪುರ ಪಾದಯಾತ್ರೆಗೆ ತೆರಳಿದಾಗ ತಪ್ಪಿಸಿ ಕೊಂಡಿದ್ದ ಶ್ವಾನವೊಂದು ಸುಮಾರು 250 ಕಿ. ಮೀ ದೂರ ಕ್ರಮಿಸಿ ಮರಳಿ ಮಾಲೀಕನ ಮನೆಯನ್ನು ಹುಡುಕಿಕೊಂಡು ಬಂದಿದ್ದು, ಗ್ರಾಮಸ್ಥರು ಶ್ವಾನವನ್ನು ಮೆರವಣಿಗೆ ಮಾಡಿ ಔತಣಕೂಟ ಏರ್ಪಡಿಸಿದ್ದಾರೆ.
ಜಿಲ್ಲೆಯ ನಿಪ್ಪಾಣಿ ತಾಲೂಕಿನ ಯಮಗರ್ಣಿ ಗ್ರಾಮದ ಕಮಲೇಶ್ ಕುಂಬಾರ ಎನ್ನುವವರ ಕಪ್ಪು- ಬಿಳಿ ಬಣ್ಣ ಮಿಶ್ರಿತ ಮಹಾರಾಜ್ ಎಂಬ ಹೆಸರಿನ ಶ್ವಾನ ವಾಪಸ್ ಬಂದಿದೆ. ಕಮಲೇಶ್ ಅವರು ಪ್ರತಿ ವರ್ಷದಂತೆ 2024ರ ಜೂನ್ ಕೊನೆಯ ವಾರದಲ್ಲಿ ಮಹಾರಾಷ್ಟ್ರದ ಪಂಢರಪುರ ವಿಠಲ ಮತ್ತು ರುಕ್ಷೀಣಿ ದರ್ಶನಕ್ಕೆ ಪಾದಯಾತ್ರೆ ಕೈಗೊಂಡಿದ್ದರು. ಈ ವೇಳೆ ತಮ್ಮ ಜತೆಗೆ ಮಹಾರಾಜ್‌ನನ್ನು (ನಾಯಿ) ಕರೆದುಕೊಂಡು ಹೋಗಿದ್ದರು. ವೈಥೋಬಾ ದೇವಾಲಯದಲ್ಲಿ ದೇವರ ದರ್ಶನ ಮಾಡಿ ವಾಪಸ್ ಬರುವಾಗ ಶ್ವಾನ ಕಾಣೆಯಾಗಿತ್ತು. ಆಗ ಕಮಲೇಶ್ ದೇವಸ್ಥಾನದ ಸುತ್ತಮುತ್ತ ಹುಡುಕಿದಾಗ ಮಹಾರಾಜ್ ಕಾಣಲಿಲ್ಲ.
ಪ್ರಾಣಿ ಪ್ರಿಯರಿಗೆ ಬಿಬಿಎಂಪಿಯಿಂದ ಹೊಸ ನಿಯಮ ಜಾರಿ, ನಾಯಿಗಳಿಗೆ ಬಿಸ್ಕತ್ ಹಾಕುವಂತಿಲ್ಲ
ಹುಡುಕಾಟ ಕೈಬಿಟ್ಟು ನಿರಾಶೆಯಿಂದಲೇ ಕಮಲೇಶ್ ಅವರು ಜು.14ರಂದು ತಮ್ಮೂರಿಗೆ ಮರಳಿ ಬಂದಿದ್ದರು. ದಾರಿಯಲ್ಲಿ ತಪ್ಪಿಸಿಕೊಂಡ ಶ್ವಾನ ಎಲ್ಲಿಯೋ ಹೋಗಿರಬಹುದು ಮರಳಿ ಬರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ಆದರೆ, ಕೆಲವು ದಿನಗಳ ನಂತರ ಕಾಣೆಯಾಗಿದ್ದ ಶ್ವಾನ ಬರೋಬ್ಬರಿ 250 ಕಿ.ಮೀ ಕ್ರಮಿಸಿ ತನ್ನ ಮಾಲೀಕನ ಮನೆ ಮುಂದೆ ಪ್ರತ್ಯಕ್ಷವಾಗಿದೆ. ಇದರಿಂದ ಕುಟುಂಬಸ್ಥರು ಸಂತಸಗೊಂಡಿದ್ದು, ಮಹಾರಾಜ್‌ನಿಗೆ ಹೂವಿನ ಹಾರ ಹಾಕಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ.