ಬೆಂಗಳೂರು(ಮಾ.26): ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಒಂದು ಲಕ್ಷ ಬಹುಮಹಡಿ ವಸತಿ ನಿರ್ಮಾಣ ಮಾಡುವ ಯೋಜನೆಯಡಿ ಮನೆಗಳನ್ನು ನಿರ್ಮಾಣ ಮಾಡಲು ಅವಶ್ಯವಿರುವ 500 ಎಕರೆ ವಸತಿ ಯೋಗ್ಯ ಭೂಮಿ ಮಂಜೂರು ಮಾಡುವಂತೆ ಕೋರಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ವಸತಿ ಸಚಿವ ವಿ.ಸೋಮಣ್ಣ ಪತ್ರ ಬರೆದಿದ್ದಾರೆ.

ಸರ್ಕಾರ ಈಗಾಗಲೆ 1,014 ಎಕರೆ ಭೂಮಿಯನ್ನು ರಾಜೀವ್‌ ಗಾಂಧಿ ವಸತಿ ನಿಗಮಕ್ಕೆ ಹಸ್ತಾಂತರಿಸಿದೆ. ಆದರೆ, ಈ ಭೂಮಿಯಲ್ಲಿ 311 ಎಕರೆ ಪ್ರದೇಶ ಮಾತ್ರ ವಸತಿ ಬಳಕೆಗೆ ಯೋಗ್ಯವಾಗಿದ್ದು, ಉಳಿದ ಭೂಮಿ ವಸತಿ ಬಳಕೆಗೆ ಯೋಗ್ಯವಾಗಿಲ್ಲ. ಕಂದಾಯ ಇಲಾಖೆ ಮೂಲಕ ಹರಾಜು ಹಾಕಲು ಉದ್ದೇಶಿಸಿರುವ 103.12 ಎಕರೆ ಸರ್ಕಾರಿ ಭೂಮಿಯನ್ನು ನಿಗಮಕ್ಕೆ ಮಂಜೂರು ಮಾಡಿಕೊಡಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.

ಬಡವರಿಗೆ ಸಂತಸದ ಸುದ್ದಿ ನೀಡಿದ ಸಚಿವ ಸೋಮಣ್ಣ

ಕಂದಾಯ ಸಚಿವ ಆರ್‌.ಅಶೋಕ್‌ ಅವರಿಗೂ ಪ್ರತ್ಯೇಕ ಪತ್ರ ಬರೆದಿರುವ ಸಚಿವ ಸೋಮಣ್ಣ ಅವರು, ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಗೆ ಪೂರಕವಾಗಿ ಹರಾಜು ಹಾಕಲು ಉದ್ದೇಶಿಸಿರುವ 103.12 ಎಕರೆ ಸರ್ಕಾರಿ ಭೂಮಿ ಸೇರಿದಂತೆ 500 ಎಕರೆ ಭೂಮಿ ಮಂಜೂರು ಮಾಡಲು ಕೋರಿದ್ದಾರೆ. ಅಲ್ಲದೆ, ರಾಜೀವ್‌ ಗಾಂಧಿ ವಸತಿ ನಿಗಮಕ್ಕೆ ಮಂಜೂರು ಮಾಡಿರುವ ಭೂಮಿಯ ಪೈಕಿ ಬಿಬಿಎಂಪಿ ವ್ಯಾಪ್ತಿಯಲ್ಲಿ 30 ಎಕರೆ ಅನುಪಯುಕ್ತ ಭೂಮಿಯಿದ್ದು, ಇದು ಕ್ವಾರಿಗಳು, ಹಳ್ಳಕೊಳ್ಳಗಳಿಂದ ಕೂಡಿದೆ. ಈ ಭೂಮಿಯನ್ನು ಪಾಲಿಕೆ ವತಿಯಿಂದಲೇ ಸಮತಟ್ಟು ಮಾಡಿಕೊಡಲು ಹಾಗೂ ಈ ಸ್ಥಳದಲ್ಲಿ ವಸತಿ ನಿರ್ಮಾಣ ಮಾಡಲು ಸೂಕ್ತ ಅನುದಾನವನ್ನು ಪಾಲಿಕೆ ವತಿಯಿಂದಲೇ ಒದಗಿಸಬೇಕು ಎಂದು ಅವರು ಬಿಬಿಎಂಪಿ ಆಯುಕ್ತರಿಗೂ ತಿಳಿಸಿದ್ದಾರೆ.

ದೇಶದ ಪ್ರಧಾನಿ ಹಾಗೂ ರಾಜ್ಯದ ಮುಖ್ಯಮಂತ್ರಿಗಳ ಬದ್ಧತೆಯಂತೆ ಬಡ ಜನರ ಪಾಲಿಗೆ ಸ್ವಂತ ಸೂರು ಒದಗಿಸಿಕೊಡುವ ಕಾರ್ಯಕ್ರಮವಾಗಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಒಂದು ಲಕ್ಷ ಬಹುಮಹಡಿ ವಸತಿ ನಿರ್ಮಾಣ ಮಾಡುವ ಯೋಜನೆಯನ್ನು ಕ್ಷಿಪ್ರಪ್ರಗತಿಯಲ್ಲಿ ಕಾರ್ಯರೂಪಕ್ಕೆ ತರಲು ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಅಧಿಕಾರಿಗಳೊಂದಿಗೆ ಹಲವು ಬಾರಿ ಸಭೆಗಳನ್ನು ನಡೆಸಿ ಕಾಲಮಿತಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಮೂಲಕ ವಸತಿ ಸಚಿವ ಸೋಮಣ್ಣ ಅವರು ಬೆಂಗಳೂರು ನಗರ ಜಿಲ್ಲೆಯಲ್ಲಿ ಲಭ್ಯವಾಗಿರುವ ಭೂಮಿಯನ್ನು ಬಳಸಿಕೊಂಡು 311 ಎಕರೆ ಪ್ರದೇಶದಲ್ಲಿ 46,499 ಮನೆಗಳ ನಿರ್ಮಾಣಕ್ಕೆ ಈಗಾಗಲೇ ಚಾಲನೆ ನೀಡಿದ್ದಾರೆ.