ಸಚಿವ ವಿ. ಸೋಮಣ್ಣ ಅವರು ಸ್ಟಿಂಗ್ ಆಪರೇಷನ್ ಬಗ್ಗೆ ತಮಗೆ ಯಾವುದೇ ಅನುಭವವಿಲ್ಲ ಎಂದು ಹೇಳಿದ್ದಾರೆ. ಡಿ.ಕೆ. ಶಿವಕುಮಾರ್ ಅವರಿಗಿಂತ ಮುಂಚೆಯೇ ತಾವು ರಾಜಕೀಯಕ್ಕೆ ಬಂದಿದ್ದು, ಸ್ಟಿಂಗ್ ಜನಕ ಯಾರು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಸಿಎಂ ಸಿದ್ದರಾಮಯ್ಯನವರಿಗೆ ಸ್ವಪಕ್ಷದವರಿಂದಲೇ ಹೆಚ್ಚು ವಿರೋಧವಿದೆ ಎಂದು ಟೀಕಿಸಿದ್ದಾರೆ.
ತುಮಕೂರು: ನಾನು ರಾಜಕೀಯಕ್ಕೆ ಬಂದು 50 ವರ್ಷವಾಯ್ತು. ನಾನು ಬಂದ ಮೇಲೆ ಡಿ.ಕೆ.ಶಿವಕುಮಾರ್ ರಾಜಕೀಯಕ್ಕೆ ಬಂದಿದ್ದು. ಸ್ಟಿಂಗ್‌ನ ಸಂಸ್ಥಾಪಕ ಯಾರು, ಅದರ ಜನಕ ಯಾರು, ಜನನಿ ಯಾರು ಎಂದು ಸಚಿವ ಸೋಮಣ್ಣ ಪ್ರಶ್ನಿಸಿದರು. ಸಚಿವರ ಮೇಲಿನ ಸ್ಟಿಂಗ್ ಆಪರೇಷನ್ ಬಗ್ಗೆ ಸಿಎಂ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸೋಮಣ್ಣ, ಇದನ್ನು ಯಾರು ಹೇಳಿದ್ದು ಅವರಿಗೆ ಕೇಳುವುದು ಒಳ್ಳೆಯದು. ಈ ವಿಚಾರದಲ್ಲಿ ನಾನು ಎಲ್‌ಬೋರ್ಡ್. ನನ್ನ ಕೇಳಿದರೆ ಏನು ಸಿಗುವುದಿಲ್ಲ ಎಂದರು.
ನನಗೆ ಸ್ಟಿಂಗೂ ಪಂಗೂ ಗೊತ್ತಿಲ್ಲ. ಅದರ ಬಗ್ಗೆ ನನಗೆ ಅನುಭವವೇ ಇಲ್ಲ. ಅದು ವರ್ಕ್‌ಔಟ್ ಆಗುತ್ತೋ ಇಲ್ವಾ ಅನ್ನೋದು ನನಗೇನು ಗೊತ್ತು. ಇದು ಯಾರೇ ಮಾಡಿದರೂ ಅಪಚಾರ. ಇದರ ಬಗ್ಗೆ ಜಾಸ್ತಿ ಮಾತನಾಡುವುದಿಲ್ಲ ಎಂದು ಹೇಳಿದರು.
ವಿರೋಧ ಪಕ್ಷದವರಿಗಿಂತ ಸ್ವಪಕ್ಷದವರೆ ವಿರೋಧ ಜಾಸ್ತಿ
ಸಿದ್ದರಾಮಯ್ಯ ನಾವು ಒಟ್ಟಿಗೆ ಇದ್ದವರು. ಸಿದ್ದರಾಮಯ್ಯನವರು ಎರಡನೇ ಬಾರಿ ಸಿಎಂ ಆದ ಮೇಲೆ ವಿರೋಧ ಪಕ್ಷದವರಿಗಿಂತ ಸ್ವಪಕ್ಷದವರೆ ವಿರೋಧ ಜಾಸ್ತಿ ಇತ್ತು. ಸಿದ್ದರಾಮಯ್ಯನವರಿಗೆ ಏನೇನ್ ಮಾಡಿದ್ದಾರೋ ಗೊತ್ತಿಲ್ಲ. ಸುಳ್ಳನ್ನು ನಿಜ ಮಾಡುವ ಸಂಸ್ಕೃತಿ ನಮಗೆ ಗೊತ್ತಿಲ್ಲ. ಆ ಪ್ರವೃತ್ತಿನೂ ಗೊತ್ತಿಲ್ಲ. ಇಂತಹ ಅನಾಚಾರ ಬಿಟ್ಟು ರಾಜ್ಯದ ಜನರ ಕಡೆ ಗಮನ ಹರಿಸಬೇಕು ಎಂದರು.
ಟ್ರ್ಯಾಪಿಂಗ್ ರಾಜಕಾರಣ ಬೇಸರ ತಂದಿದೆ: ಎ.ಎಸ್.ಪೊನ್ನಣ್ಣ
ಟ್ರ್ಯಾಪಿಂಗ್ ಮಾಡುತ್ತಿರುವ ಬಗ್ಗೆ ಎಲ್ಲ ಎಲ್ಲಾ ದಾಖಲೆಗಳಿವೆ, ಬಿಡುಗಡೆ ಮಾಡುತ್ತೇನೆ ಎಂದು ಶಾಸಕ ರವಿ ಗಣಿಗ ಹೇಳಿಕೆ ವಿಚಾರವಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ ಮಡಿಕೇರಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ರವಿ ಗಣಿಗ ಮಾಧ್ಯಮದಿಂದ ಬಂದವರು, ಬಹುಶ ಅವರಿಗೆ ಎಲ್ಲ ಮಾಹಿತಿ ದಾಖಲೆಗಳು ಸಿಕ್ಕಿರಬಹುದೇನೋ. ಅದೇನೆ ಇದ್ದರು ಕರ್ನಾಟಕದ ರಾಜಕಾರಣ ಇಲ್ಲಿಗೆ ಬರಬಾರದಿತ್ತು. ಬಹಳ ದೊಡ್ಡ ದಿಗ್ಗಜರು, ಮುತ್ಸದಿಗಳು ಸಾಮಾಜಿಕ ನ್ಯಾಯ ಕೊಟ್ಟು ರಾಜ್ಯದ ಹಿತವನ್ನು ಕಾಪಾಡುವ ಕೆಲಸ ಮಾಡಿದ್ದಾರೆ. ಇಂದು ಅದನ್ನೆಲ್ಲ ಬಿಟ್ಟು ಯಾವ ವಿಷಯ ಚರ್ಚೆ ಆಗುತ್ತಿದೆ, ಈ ರಾಜಕೀಯ ಸ್ಥಿತಿ ಎಲ್ಲಿ ಹೋಗಿ ತಲುಪುತ್ತದೆ ಎನ್ನುವ ಆತಂಕಕಾಡುತ್ತಿದೆ ಎಂದು ಹೇಳಿದರು.
ಆದರೆ ಇದು ಆಗಬಾರದಿತ್ತು, ಈ ರೀತಿ ರಾಜಕಾರಣ ಆಗಬಾರದಿತ್ತು. ಇದಕ್ಕೆ ಯಾರೇ ಕಾರಣ ಇರಬಹುದು, ಅವರು ಇವರು ಎಂದು ನಾನು ಬೊಟ್ಟು ಮಾಡಿ ತೋರಿಸಲ್ಲ, ಇದ್ಯಾವುದು ಸರಿಯಲ್ಲ ಎಂದರು.
ರವಿ ಗಣಿಗ ನಮ್ಮ ಪಕ್ಷದ ಶಾಸಕರಿರಬಹುದು, ಅವರೇನು ನನ್ನ ಬಳಿ ಚರ್ಚೆ ಮಾಡಿಲ್ಲ. ಆದರೆ ಇವತ್ತು ಎಲ್ಲರೂ ಅದೇ ರೀತಿ ಚರ್ಚೆ ಮಾಡುತ್ತಿದ್ದಾರೆ, ದೊಡ್ಡ ದೊಡ್ಡವರು ಇದನ್ನು ಚರ್ಚೆ ಮಾಡುತ್ತಿದ್ದಾರೆ. ಇಂದು ಜೆನ್ಜಿ ಗಳಿಗೆ ನೂರೆಂಟು ಸಮಸ್ಯೆಗಳು ಇವೆ, ಅವರಿಗೆ ಮಾರ್ಗದರ್ಶಕರಾಗಬೇಕಾಗಿತ್ತು. ಅವರು ಪೆನ್ ಡ್ರೈವ್, ಸಿಡಿ, ಸ್ಟಿಂಗ್ ಆಪರೇಷನ್ ಬಗ್ಗೆ ಚರ್ಚೆ ಮಾಡುವಂತೆ ಆಗಿದೆ, ಇದು ನನಗೆ ಬೇಸರ ಎಂದರು.


