ಬಾಗಲಕೋಟೆ(ಮೇ.09): ಸಾಯೋರು ಸಾಯುವವರೇ, ಬೇರೆ ಬೇರೆ ಕಾರಣಗಳಿಗೂ ಸಾಯುತ್ತಾರೆ. ರೆಮ್‌ಡಿಸಿವರ್ 6 ಬಾರಿ ಕೊಟ್ಟವರು ಸಾಯುತ್ತಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ್‌ ಕತ್ತಿ ಮತ್ತೊಂದು ವಿವಾದಾತ್ಮಕ ಹೇಳಿಕೆಯನ್ನ ನೀಡಿದ್ದಾರೆ. 

ಇಂದು(ಭಾನುವಾರ) ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಧೈರ್ಯ ಕಳೆದುಕೊಂಡು ಸಾಯುವವರಿಗೆ ಏನು ಮಾಡೋಕಾಗಲ್ಲ. ಪಂಪ್ ಹೊಡೆದು ಧೈರ್ಯ ತುಂಬಬೇಕಾ?. ಧೈರ್ಯದಿಂದ ಎಲ್ಲರೂ ಚಿಕಿತ್ಸೆ ಪಡೆದು ಬದುಕುವಂತಾಗಬೇಕು ಎಂದು ಬೇಜವಾಬ್ದಾರಿಯಾಗಿ ಹೇಳಿದ್ದಾರೆ.

"

ನೀವು ಉಳಿಯುತ್ತೀರೋ ಗೊತ್ತಿಲ್ಲ, ನಾನಂತೂ ಉಳಿಯಬೇಕು : ಸಚಿವ ಕತ್ತಿ ಮತ್ತೆ ವಿವಾದ!

ಧೈರ್ಯ ಕಳೆದುಕೊಂಡವರಿಗೆ ಏನು ಮಾಡೋಕಾಗಲ್ಲ. ಧೈರ್ಯ ತುಂಬೋದು ಪಂಪ್ ಹಾಕಿ ಮಾಡೋಕಾಗಲ್ಲ. ಕೊರೋನಾದಿಂದ ಧೈರ್ಯ ಕಳೆದುಕೊಂಡು ಸಾಯುವವರ ಸಂಖ್ಯೆಯೇ ಹೆಚ್ಚಾಗುತ್ತಿದೆ ಎಂದು ತಿಳಿಸಿದ್ದಾರೆ.

ಮೆಡಿಸಿನ್ ಕೊಟ್ಟರೂ ಧೈರ್ಯ ಕಳೆದುಕೊಂಡು ಸಾಯೋರಿದ್ದಾರೆ. ಅದಕ್ಕೆ ಯಾವುದೇ ಪರ್ಯಾಯ ಮಾರ್ಗವಿಲ್ಲ. ಆದರ ಜನ ಸಾಯಬಾರದೆಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳೋಣ. ಮಾಧ್ಯಮಗಳಲ್ಲಿ ಹೆಣ, ಬೆಡ್ ನೋಡಿಯೇ ಜನರಲ್ಲಿ ಭಯ ಹುಟ್ಟುತ್ತಿದೆ. ಹೀಗಾಗಿ ಚೇಂಜ್ ಮಾಡಿ ಬೇರೆನೂ ತೋರಿಸಿ ಮಾಧ್ಯಮಗಳಿಗೆ ವಿನಂತಿ ಮಾಡಿಕೊಂಡಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona