ಬಾಗಲಕೋಟೆ(ಮೇ.24): ಬ್ಲ್ಯಾಕ್ ಫಂಗಸ್ ಏನು ದೊಡ್ಡ ರೋಗ ಅಲ್ಲ. ಹಿಂದೆಯೇ ಇತ್ತು, ಮುಂದೆಯೂ ಇರುತ್ತದೆ. ಆದರೆ ಸ್ಟಿರಾಯ್ಡ್ ತೆಗೆದಕೊಂಡವರು ಮತ್ತು ಶುಗರ್ ರೋಗಿಗಳಿಗೆ ಬೇಗ ಬರುತ್ತದೆ. ಇವರಲ್ಲಿ ಹೆಚ್ಚು ತೊಂದರೆ ಕಂಡು ಬರುತ್ತಿದೆ. ಇದು ನಿರಂತರವಾದುದಲ್ಲ, ಕೋವಿಡ್ ಜೊತೆ ಇಂದು ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಸರಿ ಮಾಡುವ ಕೆಲಸ ಮಾಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹೇಳಿದ್ದಾರೆ. 

ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಭೀತಿ ವಿಚಾರದ ಬಗ್ಗೆ ಇಂದು(ಸೋಮವಾರ) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸದ್ಯ ಜಿಲ್ಲೆಯಲ್ಲಿ 20 ಜನ ಬ್ಲ್ಯಾಕ್ ಫಂಗಸ್‌ ಸೋಂಕಿನಿಂದ ಬಳಲುತ್ತಿದ್ದಾರೆ. ಅವರಿಗಾಗಿ ಈಗ ಮೆಡಿಸನ್ ಬರುತ್ತಿದೆ. ಬಂದ ತಕ್ಷಣ ನೀಡುತ್ತೇವೆ. ಈಗ ರೋಗಿಗಳಿಗೆ ಪರ್ಯಾಯವಾಗಿ ಔಷಧೋಪಚಾರ ನಡೆಯುತ್ತಿದೆ. ಇದುವರೆಗೆ ಬ್ಲ್ಯಾಕ್ ಫಂಗಸ್‌ನಿಂದ ಜಿಲ್ಲೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ದೆಶನದಂತೆ ಬ್ಲ್ಯಾಕ್ ಪಂಗಸ್ ರೋಗಿಗಳಿಗೆ ಜಿಲ್ಲೆಯಲ್ಲಿಯೇ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಬ್ಲ್ಯಾಕ್ ಪಂಗಸ್ ಸೋಂಕಿಗೆ ಬಾಗಲಕೋಟೆ ಜಿಲ್ಲಾಸ್ಪತ್ರೆ ಮತ್ತು ಕುಮಾರೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಂತ ವೈದ್ಯರಿದ್ದಾರೆ.

ಬ್ಲ್ಯಾಕ್ ಪಂಗಸ್ ಮೆಡಿಸಿನ್ ಬರಬೇಕಿದೆ. ಬಂದ ಕೂಡಲೇ ಚಿಕಿತ್ಸೆ ಆರಂಭಿಸುತ್ತೇವೆ. ಈಗಾಗಲೇ 20 ಬ್ಲ್ಯಾಕ್ ಪಂಗಸ್ ಕೇಸ್‌ಗಳಿಗೆ ಚಿಕಿತ್ಸೆ ನಡೆಯುತ್ತಿದೆ. ಜಿಲ್ಲೆಗೆ ಇನ್ನೊಂದೆರಡು ದಿನಗಳಲ್ಲಿ ಮೆಡಿಸಿನ್ ಬರಬಹುದು, ಬಂದ ಬಳಿಕ ಹೊಸ ರೋಗಿಗಳಿಗೂ ಚಿಕಿತ್ಸೆ ಕೊಡುತ್ತೇವೆ. ಬ್ಲ್ಯಾಕ್ ಪಂಗಸ್ ರೋಗಿಯ ಪರಿಸ್ಥಿತಿ ನೋಡಿಕೊಂಡು 60 ಇಂಜೆಕ್ಷನ್ ನೀಡಬೇಕು. ಮೆಡಿಸಿನ್ ಬಂದ ತಕ್ಷಣ ಬ್ಲ್ಯಾಕ್ ಪಂಗಸ್ ಗೆ ಚಿಕಿತ್ಸೆ ಪ್ರಾರಂಭ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. 

ಒಂದೇ ಕುಟುಂಬದ 11 ಮಂದಿಗೂ ಕೊರೋನಾ

ಹಕ್ಕು ಚ್ಯುತಿ ಮಂಡಿಸುತ್ತೇನೆ ಎಂದ ಮಾಜಿ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಸಚಿವ ಉಮೇಶ ಕತ್ತಿ, ವಿರೋಧ ಪಕ್ಷದ ನಾಯಕರಿಗೆ ಬೇರೆ ಕೆಲಸ ಇರೋದಿಲ್ಲ. ಅವರು ಅದನ್ನೇ ಮಾಡಬೇಕು, ಮಾಡಲಿ. ಹಕ್ಕು ಚ್ಯುತಿಯಲ್ಲಿ ಏನು ಬರುತ್ತೇ ಅಂತ ನೋಡೋಣ. ನಾವು ನೋಡಿಲ್ಲ. ನಾನು ಎಂಎಲ್ಎ ಆಗಿ 9 ಬಾರಿ ಆಯ್ಕೆಯಾಗಿದ್ದೇನೆ. ನನಗೂ ಗಮನಕ್ಕೆ ಬಂದಿಲ್ಲ, ಏನಾಗುತ್ತೋ ನೋಡೋಣ. ವಿಪಕ್ಷಗಳು ಹಕ್ಕು ಚ್ಯುತಿ ಮಾಡ್ತೀನಿ ಅಂದಾಗ ಬೇಡ ಅನ್ನೋಕೆ ಆಗಲ್ಲ. ಕೋವಿಡ್ ಸಂದರ್ಭದಲ್ಲಿ ಬೇಡ ಅಂತ ಮನವಿ ಮಾಡಿದ್ದೇವೆ. ಅವರು ಹಕ್ಕು ಚ್ಯುತಿ ಮಾಡೇ ಮಾಡ್ತೀವಿ ಅಂದ್ರೆ ಮಾಡಲಿ. ಅದರ ಮೇಲೆ ಏನು ಅಭಿಪ್ರಾಯ ಬರುತ್ತೇ ನೋಡೋಣ. ಅದು ಅವರಿಗೆ ಬಿಟ್ಟಿದ್ದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಸೆಮಿ ಲಾಕ್‌ಡೌನ್ ಮಧ್ಯೆ 35 ಕ್ಕೂ ಹೆಚ್ಚಿದ ಬಾಲ್ಯ ವಿವಾಹಗಳು ನಡೆದ ವಿಚಾರದ ಬಗ್ಗೆ ಮಾತನಾಡಿದ ಅವರು, ಈ ಬಗ್ಗೆ ಮಾಹಿತಿ ಬಂದಂತೆ ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ 7 ಮದುವೆಗಳ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಗ್ರಾಮ ಪಂಚಾಯತಿಯಿಂದ ಪರ್ಮಿಷನ್ ತಗೋಬೇಕು ಅಂತ ಕಾನೂನು ಇದೆ ತೊಂದರೆಯಾಗಿರಬೇಕು ನಿಜ ಆದರೆ ಎಲ್ಲರೂ ಸರಿಯಾಗಿ ನಡೆದುಕೊಳ್ಳಬೇಕು. ಇನ್ಮುಂದೆ ಇಂತಹ ಮದುವೆಗಳು ನಡೆಯದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಕತ್ತಿ ಹೇಳಿದ್ದಾರೆ.