ಬೆಂಗಳೂರು (ಮೇ.10):  ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ರೋಗಿಗಳಿಗೆ ಹಾಸಿಗೆಗಳ ಸ್ಥಿತಿಗತಿಯನ್ನು ಕ್ಷಣಕ್ಷಣಕ್ಕೆ ನೀಡುವ ಪೋರ್ಟಲ್‌ಗೆ ಚಾಲನೆ ದೊರಕಿದೆ. ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್‌ ಹೋಮ್ಸ್‌ ಒಕ್ಕೂಟದ (ಫನಾ) ಪ್ರಯತ್ನದ ಫಲವಾಗಿ  http//.serchmybe.com ಪೋರ್ಟಲ್‌ ರಚನೆಯಾಗಿದ್ದು ಇಲ್ಲಿ ಬೆಂಗಳೂರಿನ 95 ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿ ಖಾಲಿ ಇರುವ ಸಾಮಾನ್ಯ ಬೆಡ್‌, ಆಮ್ಲಜನಕಯುಕ್ತ ಬೆಡ್‌, ವೆಂಟಿಲೇಟರ್‌ ಸಹಿತ ಬೆಡ್‌, ಐಸಿಯು ಬೆಡ್‌ಗಳ ಮಾಹಿತಿ ನೀಡುತ್ತಿವೆ.

ಭಾನುವಾರ ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಅವರು ವರ್ಚುವಲ್‌ ಮೂಲಕ ಪೋರ್ಟಲ್‌ ಅನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಜನರಿಗೆ ಪಾರದರ್ಶಕ ಮಾಹಿತಿಯನ್ನು ನೀಡಲು ಮುಂದಾಗಿರುವ ಫನಾವನ್ನು ಅಭಿನಂದಿಸಿದರು. ನಂಬಿಗಸ್ಥ ಮತ್ತು ರಿಯಲ್‌ ಟೈಮ್‌ ಮಾಹಿತಿ ಜನರಿಗೆ ಸಿಕ್ಕಿದರೆ ಉಪಯುಕ್ತ ಆಗುತ್ತದೆ. ಅನೇಕ ಅಮೂಲ್ಯ ಜೀವಗಳು ಇದರಿಂದ ಉಳಿಯುತ್ತವೆ ಎಂದು ಹೇಳಿದರು.

ಕೇಂದ್ರದಿಂದ ವ್ಯಾಕ್ಸಿನ್ ಪೂರೈಕೆ, ರಾಜ್ಯದಲ್ಲಿ ಮೇ.10ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ...

ಕೆಪಿಎಂಇ ಕಾಯ್ದೆಯಡಿ ನೋಂದಣಿಯಾಗಿರುವ ಎಲ್ಲ ಆಸ್ಪತ್ರೆಗಳು ತಮ್ಮ ಪೋರ್ಟಲ್‌ ಮಾಹಿತಿಯನ್ನು ಇದರಲ್ಲಿ ನೀಡಿದರೆ ಒಳ್ಳೆಯದು. ಈ ನಿಟ್ಟಿನಲ್ಲಿ ಸರ್ಕಾರದ ಕಡೆಯಿಂದ ಏನಾದರೂ ಸೂಚನೆ ನೀಡುವುದು ಅಗತ್ಯ ಇದ್ದರೆ ನಾವು ಈ ಬಗ್ಗೆ ಗಮನ ಹರಿಸುತ್ತೇವೆ. ಈ ಪೋರ್ಟಲ್‌ ಸಾಂಕ್ರಾಮಿಕದ ಕಾಲದಲ್ಲಿ ಮಾತ್ರ ಇರದೆ ಆ ಬಳಿಕವು ಮುಂದುವರಿಯಬೇಕು ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಯಾಗಿದ್ದ ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಪೊರ್ಟಲ್‌ನಲ್ಲಿ ರಿಯಲ್‌ ಟೈಂ ನಲ್ಲಿ ಮಾಹಿತಿ ಬರುವುದು ಅತ್ಯವಶ್ಯಕ. ಇಲ್ಲದೇ ಹೋದಲ್ಲಿ ಜನರು ಸುಮಾರು 8-10 ಸಲ ನೋಡಿ ಆ ಬಳಿಕ ಪೋರ್ಟಲ್‌ ನೋಡುವುದನ್ನು ಬಿಟ್ಟು ಬಿಡುತ್ತಾರೆ. ಮೊದಲ ಅಲೆಯ ಸಂದರ್ಭದಲ್ಲಿ ಇಂತಹ ಪೋರ್ಟಲ್‌ ಇರಬೇಕಿತ್ತು. ಆದರೂ ದಾಖಲೆಯ ಹತ್ತೇ ದಿನಗಳÜಲ್ಲಿ ಇಂತಹ ಪೋರ್ಟಲ್‌ ನಿರ್ಮಾಣ ಮಾಡಿದ್ದಕ್ಕೆ ಫನಾವನ್ನು ಅಭಿನಂದಿಸುವುದಾಗಿ ಹೇಳಿದರು.

ಶಿವಮೊಗ್ಗದಲ್ಲಿ ವೆಂಟಿಲೇಟರ್‌ ಸಿಗದೇ ನರಳಿ ನರಳಿ ಸೋಂಕಿತ ಸಾವು : ಕಣ್ಣೀರಿಟ್ಟ ನರ್ಸ್‌ಗಳು ...

ಫನಾದ ಅಧ್ಯಕ್ಷ ಡಾ.ಎಚ್‌.ಎಂ. ಪ್ರಸನ್ನ ಮಾತನಾಡಿ, ಈ ಪೋರ್ಟಲ್‌ಗೆ ಆಸ್ಪತ್ರೆಗಳು ಸಕಾಲದಲ್ಲಿ ಮಾಹಿತಿಯನ್ನು ನೀಡಬೇಕು. ಆಸ್ಪತ್ರೆಗಳ ಸ್ಪಂದನೆ ಇಲ್ಲದೆ ಹೋದರೆ ಈ ಪೋರ್ಟಲ್‌ ಯಶ ಕಾಣಲು ಸಾಧ್ಯವಿಲ್ಲ. ಆದ್ದರಿಂದ ಆಸ್ಪತ್ರೆಗಳ ಆಡಳಿತ ಮಂಡಳಿ ಪೋರ್ಟಲ್‌ನಲ್ಲಿ ಬೆಡ್‌ ಸ್ಥಿತಿಗತಿಯನ್ನು ಸಕಾಲದಲ್ಲಿ ತುಂಬಬೇಕು ಎಂದು ಮನವಿ ಮಾಡಿದರು. ಸದ್ಯ ಬೆಂಗಳೂರಿನ ಆಸ್ಪತ್ರೆಗಳ ಮಾಹಿತಿ ನೀಡುತ್ತಿದ್ದರೂ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಖಾಸಗಿ ಆಸ್ಪತ್ರೆಗಳ ಮಾಹಿತಿ ನೀಡುತ್ತೇವೆ ಎಂದು ಹೇಳಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona