ಶಿವಮೊಗ್ಗ (ಮೇ.10):  ಕೋವಿಡ್‌ ಸೋಂಕಿತನೊಬ್ಬ ವೆಂಟಿಲೇಟರ್‌ ಸಿಗದೇ ಆಸ್ಪತ್ರೆ ವಾರ್ಡಿನಲ್ಲಿ 2 ಗಂಟೆ ತೀವ್ರ ನರಳಾಡಿ ಕೊನೆಯುಸಿರೆಳೆದ ದಾರುಣ ಘಟನೆ ನಗರದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ಶಿಕಾರಿಪುರದ ಆನಂದ್‌(46) ಮೃತಪಟ್ಟವರು.

ತೀವ್ರ ಅಸ್ವಸ್ಥ ಸ್ಥಿತಿಯಲ್ಲಿ ಆನಂದ್‌ ಅವರನ್ನು ಕುಟುಂಬಸ್ಥರು ಆ್ಯಂಬುಲೆನ್ಸ್‌ನಲ್ಲಿ ಶಿಕಾರಿಪುರದಿಂದ ಮೆಗ್ಗಾನ್‌ ಆಸ್ಪತ್ರೆಗೆ ಕರೆ ತಂದರು. ಅಷ್ಟರಲ್ಲೇ ಅವರ ಆಕ್ಸಿಜನ್‌ ಮಟ್ಟ40ಕ್ಕೆ ಕುಸಿದಿತ್ತು. 

ಶಿವಮೊಗ್ಗ : ಗುಣಮುಖರಾದ್ರೂ ಆಸ್ಪತ್ರೆಯಿಂದ ಮನೆಗೆ ಹೋಗುತ್ತಿಲ್ಲ ರೋಗಿಗಳು!

ಆದರೆ ಆಸ್ಪತ್ರೆಯಲ್ಲಿ ಎಲ್ಲ ವೆಂಟಿಲೇಟರ್‌ನಲ್ಲಿ ರೋಗಿಗಳು ಇದ್ದು, ಯಾವ ರೋಗಿಯನ್ನೂ ಇದರಿಂದ ಹೊರತರುವ ಸ್ಥಿತಿಯಲ್ಲಿ ವೈದ್ಯರು ಇರಲಿಲ್ಲ. ಹೀಗಾಗಿ ತಕ್ಷಣಕ್ಕೆ ಜನರಲ್‌ ವಾರ್ಡಿನಲ್ಲೇ ರೋಗಿಗೆ ಆಕ್ಸಿಜನ್‌ ಬೆಡ್‌ ವ್ಯವಸ್ಥೆ ಮಾಡಲಾಯಿತು. ಆದರೆ ತೀವ್ರ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ಈ ರೋಗಿ ಇದಕ್ಕೆ ಸ್ಪಂದಿಸಲಿಲ್ಲ. ರೋಗಿ ನರಳಾಡುತ್ತಿದ್ದರೂ ವೈದ್ಯರು, ನರ್ಸ್‌ಗಳು ಏನೂ ಮಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಪರಿಣಾಮ ಕೆಲ ಹೊತ್ತಿನಲ್ಲಿಯೇ ರೋಗಿ ಆನಂದ್‌ ಸಾವು ಕಂಡರು.

ಕಣ್ಣೆದುರೇ ನಡೆದ ಈ ಸಾವಿನಿಂದ ಕುಟುಂಬಸ್ಥರು ಕಂಗಾಲಾದರೆ, ಒಂದು ಜೀವ ನರಳಾಡಿ ಸತ್ತದ್ದನ್ನು ಕಂಡು ನರ್ಸ್‌ಗಳೂ ಕಣ್ಣೀರಾದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona