Asianet Suvarna News Asianet Suvarna News

Mysuru: ದಸರಾ ಗೋಲ್ಡ್‌ ಕಾರ್ಡ್‌ ಬಗ್ಗೆ ಶೀಘ್ರದಲ್ಲೇ ತೀರ್ಮಾನ: ಸಚಿವ ಸೋಮಶೇಖರ್‌

ದಸರಾ ಜಂಬೂಸವಾರಿ ಸೇರಿದಂತೆ ವಿವಿಧ ಕಾರ್ಯಕ್ರಮಗಳ ವೀಕ್ಷಣೆಗೆ ಗೋಲ್ಡ್‌ ಕಾರ್ಡ್‌ ಬಿಡುಗಡೆ ಮಾಡುವಂತೆ ಸಾಕಷ್ಟುಒತ್ತಡಗಳು ಬಂದಿರುವುದರಿಂದ ಶೀಘ್ರದಲ್ಲೇ ತೀರ್ಮಾನಿಸಲಾಗುವುದು ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದರು. 

Minister ST Somashekhar Talks About Mysuru Dasara 2022 gvd
Author
First Published Sep 18, 2022, 11:28 PM IST

ಮೈಸೂರು (ಸೆ.18): ದಸರಾ ಜಂಬೂಸವಾರಿ ಸೇರಿದಂತೆ ವಿವಿಧ ಕಾರ್ಯಕ್ರಮಗಳ ವೀಕ್ಷಣೆಗೆ ಗೋಲ್ಡ್‌ ಕಾರ್ಡ್‌ ಬಿಡುಗಡೆ ಮಾಡುವಂತೆ ಸಾಕಷ್ಟು ಒತ್ತಡಗಳು ಬಂದಿರುವುದರಿಂದ ಶೀಘ್ರದಲ್ಲೇ ತೀರ್ಮಾನಿಸಲಾಗುವುದು ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದರು. ಮೈಸೂರು ಜಿಪಂ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ದಸರಾ ಕಾರ್ಯಕಾರಿ ಸಮಿತಿ ಸಭೆಯ ಬಳಿಕ ದಸರಾ ವೆಬ್‌ಸೈಟ್‌ಗೆ ಚಾಲನೆ ನೀಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ಗೋಲ್ಡ್‌ ಕಾರ್ಡ್‌ ಬಿಡುಗಡೆ ಮಾಡುವಂತೆ ಪ್ರವಾಸೋದ್ಯಮ ಇಲಾಖೆ ಸೇರಿದಂತೆ ವಿವಿಧ ಸಂಘಟನೆಗಳು ಒತ್ತಡ ಹೇರಿವೆ. 

ಹೀಗಾಗಿ, ಎಷ್ಟು ಗೋಲ್ಡ್‌ ಕಾರ್ಡ್‌, ಟಿಕೆಟ್‌ ಮತ್ತು ಪಾಸ್‌ಗಳನ್ನು ಮುದ್ರಿಸುವ ಕುರಿತು ಸದ್ಯದಲ್ಲೇ ನಿರ್ಧರಿಸಲಾಗುವುದು ಎಂದರು. ದಸರಾ ಜಂಬೂಸವಾರಿ ವೀಕ್ಷಿಸಲು 22 ಸಾವಿರ ಮಂದಿಗೆ ಅರಮನೆ ಆವರಣದಲ್ಲಿ ಅವಕಾಶ ಕೊಡಲಾಗುವುದು. ಇದರಲ್ಲಿ ಯಾರ್ಯಾರಿಗೆ ಎಷ್ಟೆಷ್ಟುಎಂಬುದನ್ನು ಮೊದಲೇ ನಿರ್ಧರಿಸಲಾಗುವುದು. ಸಂಸದರು, ಶಾಸಕರು, ನಗರ ಪಾಲಿಕೆ ಸದಸ್ಯರು ಸೇರಿ ಇನ್ನಿತರರಿಗೆ ಎಷ್ಟುಪಾಸ್‌ ಕೊಡಬೇಕೆಂಬುದರ ಬಗ್ಗೆ ನಿರ್ಧರಿಸಲಾಗುವುದು ಎಂದು ಅವರು ಹೇಳಿದರು.

ಮೈಸೂರು ದಸರಾ ಮಹೋತ್ಸವ: ಭದ್ರತೆಯ ನೆಪದಲ್ಲಿ ಸಾರ್ವಜನಿಕರಿಗೆ ಕಿರಿಕಿರಿ

ಸಾಂಸ್ಕೃತಿಕ ಕಾರ್ಯಕ್ರಮ: ಅರಮನೆ ಸೇರಿದಂತೆ 9 ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, 900 ಅರ್ಜಿಗಳಲ್ಲಿ 280 ತಂಡಗಳನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಅರಮನೆಯಲ್ಲಿ ಸಂಜೆ 6 ರಿಂದ ರಾತ್ರಿ 10 ರವರೆಗೆ ಕಾರ್ಯಕ್ರಮ ನಡೆಯಲಿದೆ ಎಂದರು.

ನಾಲ್ಕು ದಿನಗಳ ಕಾಲ ಕವಿಗೋಷ್ಠಿ ನಡೆದರೆ, ಸೆ.26 ರಿಂದ 7 ದಿನಗಳ ಕಾಲ ಯೋಗಾ ದಸರಾ, ಸೆ.26 ರಿಂದ 10 ದಿನಗಳ ಕಾಲ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್‌್ಸ ಮೈದಾನ, ಲಲಿತಮಹಲ್‌ ಪ್ಯಾಲೇಸ್‌ ಮೈದಾನದಲ್ಲಿ ಆಹಾರ ಮೇಳ ನಡೆಯಲಿದ್ದು, ಯಾವ್ಯಾವ ತಿಂಡಿ- ತಿನಿಸುಗಳನ್ನು ಸಿದ್ಧಪಡಿಸಿ ಮೇಳದಲ್ಲಿ ಉಣಬಡಿಸಲು ಸಮಿತಿ ನಿರ್ಧರಿಸಲಿದೆ ಎಂದು ಅವರು ತಿಳಿಸಿದರು.

ಯುವ ದಸರಾ: ಸೆ.27 ರಿಂದ ಮಹಾರಾಜ ಕಾಲೇಜು ಮೈದಾನದಲ್ಲಿ ಏಳು ದಿನಗಳ ಕಾಲ ಯುವ ದಸರಾ ನಡೆಯಲಿದ್ದು, ಅ.1 ರಂದು ನಟ ಪುನೀತ್‌ ರಾಜಕುಮಾರ್‌ ನಟಿಸಿರುವ ಚಿತ್ರಗಳ ಗೀತೆಗಳನ್ನು ಹಾಡುವುದಕ್ಕೆ ಸೀಮಿತವಾಗಲಿದೆ. ಸೆ.27 ರಿಂದ 5 ದಿನಗಳ ಕಾಲ ಮಹಿಳಾ ಮತ್ತು ಮಕ್ಕಳ ದಸರಾ, ಸೆ.26 ರಿಂದ 29 ರವರೆಗೆ ನಾಲ್ಕು ದಿನಗಳ ಕಾಲ ಕ್ರೀಡೆ, ಸೆ.26 ರಿಂದ ಏಳು ದಿನಗಳ ಕಾಲ ಚಲನಚಿತ್ರೋತ್ಸವ ನಡೆಯಲಿದೆ. ಒಂದು ದಿನ ಅಪ್ಪು ನಟಿಸಿರುವ ಚಿತ್ರಗಳನ್ನು ವೀಕ್ಷಣೆ ಮಾಡಲು ಮೀಸಲಿಡಲಾಗಿದ್ದು, ಅಂದು ಪುನೀತ್‌ ಪತ್ನಿ ಅಶ್ವಿನಿ ಭಾಗವಹಿಸಲಿದ್ದಾರೆ ಎಂದರು.

ಮೊದಲ ಬಾರಿಗೆ ಐದು ದಿನಗಳ ಕಾಲ ಕೈಗಾರಿಕಾ ದಸರಾ ನಡೆಸಲು ತೀರ್ಮಾನಿಸಿದ್ದರೆ, ಮೂರು ದಿನಗಳ ಕಾಲದ ಪಾರಂಪರಿಕ ದಸರೆಯಲ್ಲಿ ಟ್ರಿಣ್‌ ಟ್ರಿಣ್‌ ಸೈಕಲ್‌ ಸವಾರಿ, ಸಾರೋಟಿನಲ್ಲಿ ದಂಪತಿಗಳ ಮೆರವಣಿಗೆ, ಪಾರಂಪರಿಕ ನಡಿಗೆ ನಡೆಯಲಿದೆ. ಕುಪ್ಪಣ್ಣ ಪಾರ್ಕ್ನಲ್ಲಿ 10 ದಿನಗಳ ಕಾಲ ದಸರಾ ಫಲಪುಷ್ಪ ಪ್ರದರ್ಶನ, ಸೆ.26 ರಿಂದ 90 ದಿನಗಳ ದಸರಾ ವಸ್ತುಪ್ರದರ್ಶನ ನಡೆಯಲಿದ್ದು, ದೊಡ್ಡವರಿಗೆ . 30, ಚಿಕ್ಕವರಿಗೆ . 20 ಟಿಕೆಟ್‌ ದರ ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದರು.

Mysuru Dasara 2022: ಕುಶಾಲತೋಪು ಶಬ್ದಕ್ಕೆ ಹೊಂದಿಕೊಳ್ಳುತ್ತಿರುವ ಗಜಪಡೆ

ಪ್ರವಾಸೋದ್ಯಮ ಇಲಾಖೆಯಿಂದ ಕಾಂಬೋ ಟಿಕೆಟ್‌ ಪರಿಚಯಿಸಿದ್ದು, ಒಂದೇ ಟಿಕೆಟ್‌ನಲ್ಲಿ ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ, ಕೆಆರ್‌ಎಸ್‌, ರೈಲ್ವೆ ಮ್ಯೂಸಿಯಂ ವೀಕ್ಷಿಸಬಹುದಾಗಿದ್ದು, ದೊಡ್ಡವರಿಗೆ . 500, ಚಿಕ್ಕವರಿಗೆ . 250 ಟಿಕೆಟ್‌ ನಿಗದಿಪಡಿಸಲಾಗಿದೆ ಎಂದರು. ಇದೇ ವೇಳೆ ವಿವಿಧ ಉಪ ಸಮಿತಿಗಳ ಪೋಸ್ಟರ್‌ಗಳನ್ನು ಬಿಡುಗಡೆಗೊಳಿಸಲಾಯಿತು. ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌, ಜಿಪಂ ಸಿಇಒ ಬಿ.ಆರ್‌. ಪೂರ್ಣಿಮಾ, ನಗರಪಾಲಿಕೆ ಆಯುಕ್ತ ಜಿ. ಲಕ್ಷ್ಮೀಕಾಂತ ರೆಡ್ಡಿ, ನಗರ ಪೊಲೀಸ್‌ ಆಯುಕ್ತ ಡಾ. ಚಂದ್ರಗುಪ್ತ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಬಿ.ಎಸ್‌. ಮಂಜುನಾಥಸ್ವಾಮಿ, ಉಪ ವಿಭಾಗಾಧಿಕಾರಿ ಕಮಲಾಬಾಯಿ, ಡಿಸಿಪಿಗಳಾದ ಎಂ.ಎಸ್‌. ಗೀತಾ ಪ್ರಸನ್ನ, ಶಿವರಾಜು, ಹೆಚ್ಚುವರಿ ಎಸ್ಪಿ ನಂದಿನಿ ಮೊದಲಾದವರು ಇದ್ದರು.

Follow Us:
Download App:
  • android
  • ios