ಚಿತ್ರದುರ್ಗ (ನ.02): ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಹೆಸರು ಉಲ್ಲೇಖ ಮಾಡುವಾಗ ಮಾಸ್ತಿ ಅವರ ಹೆಸರನ್ನು ಮಸ್ತಿ ಎಂದು ಸಚಿವ ಬಿ.ಶ್ರೀರಾಮುಲು ಕರೆದ ಪ್ರಸಂಗ ಭಾನುವಾರ ನಡೆಯಿತು. ಚಿತ್ರದುರ್ಗದಲ್ಲಿ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಚಿವ ಬಿ.ಶ್ರೀರಾಮುಲು 8 ಜ್ಞಾನ ಪೀಠ ಪ್ರಶಸ್ತಿಗಳು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿವೆ. ಕುವೆಂಪು, ಬೇಂದ್ರೆ,ಕಾರಂತ, ಮಸ್ತಿ, ಗೋಕಾಕ್‌, ಅನಂತಮೂರ್ತಿಯವರ ನೆನಪು ಮಾಡಿಕೊಳ್ಳಬೇಕು ಎಂದರು. ಮಾಸ್ತಿ ಎನ್ನುವ ಬದಲು ಮಸ್ತಿ ಎಂದಿದ್ದು ನೆರೆದಿದ್ದ ಸಾಹಿತ್ಯಾಸಕ್ತರ ಅಚ್ಚರಿಗೆ ಕಾರಣವಾಗಿತ್ತು.

ಹರಿದು ಹಂಚಿ ಹೋಗಿದ್ದ ಕರ್ನಾಟಕದ ಏಕೀಕರಣ ಮಾಡುವಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್‌.ನಿಜಲಿಂಗಪ್ಪನವರ ಪಾತ್ರ ಬಹುಮುಖ್ಯವಾದುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹೇಳಿದರು.

ಡಿಸೆಂಬರಲ್ಲಿ ರಾಜ್ಯ ಬಿಜೆಪಿಯಲ್ಲಿ ಭಾರಿ ಬದಲಾವಣೆ ಬಿರುಗಾಳಿ?

ಜಿಲ್ಲಾಡಳಿತದಿಂದ ನಗರದ ಜಿಲ್ಲಾ ಪೊಲೀಸ್‌ ಕವಾಯತು ಮೈದಾನದಲ್ಲಿ ಭಾನುವಾರ ಹಮ್ಮಿಕೊಳ್ಳಲಾದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಸಂದೇಶ ನೀಡಿದ ಅವರು ಮದ್ರಾಸ್‌, ಹೈದರಬಾದ್‌, ಮುಂಬೈ ಹಾಗೂ ಮೈಸೂರು ಪ್ರಾಂತ್ಯವಾಗಿ ನಾಲ್ಕು ವಿಭಾಗಗಳಾಗಿ ಹಂಚಿಹೋಗಿದ್ದ ವಿಶಾಲ ಕರುನಾಡನ್ನು ಒಂದು ಗೂಡಿಸುವ ನಿಟ್ಟಿನಲ್ಲಿ ಎಸ್‌.ನಿಜಲಿಂಗಪ್ಪ ಅಪಾರ ಶ್ರಮವಹಿಸಿದರು. 1915ರ ಕನ್ನಡ ಸಾಹಿತ್ಯ ಪರಿಷತ್‌ನ ಮೊದಲ ಸಮ್ಮೇಳನದಲ್ಲಿ ಈ ಬಗ್ಗೆ ಪ್ರಸ್ತಾಪವಾಗಿತ್ತು. ಅಂತಿಮವಾಗಿ ಶಕ್ತಿ ತುಂಬಿ, ಸ್ವರೂಪ ನೀಡುವಲ್ಲಿ ನಿಜಲಿಂಗಪ್ಪ ಅವರ ಪಾತ್ರ ಮಹತ್ವದ್ದಾಗಿದೆ ಎಂದರು.

1946ರಲ್ಲಿ ಕನ್ನಡದ ಜನ ಒಟ್ಟಾಗಿರಬೇಕೆಂದು ಅಖಿಲ ಕರ್ನಾಟಕ ಏಕೀಕರಣ ಪರಿಷತ್‌ ಸ್ಥಾಪಿಸಿದ ಅವರು, ಅಂದಿನ ಪ್ರಧಾನಿ ನೆಹರು ಮಂತ್ರಿಮಂಡಲದಲ್ಲಿ ಸಚಿವ ಸ್ಥಾನ ಕೊಡುತ್ತೇನೆ ಎಂದರೂ ಒಪ್ಪಿರಲಿಲ್ಲ. ಕರ್ನಾಟಕ ಏಕೀಕರಣ ಆದ ಮೇಲೆ ಅಧಿಕಾರ ಕೊಡಿ ಎಂದು ನೆಹರೂಗೆ ಹೇಳಿದ್ದರು. ಕರ್ನಾಟಕ ರಚನೆಯಾದ ಮೇಲೆ ಅವರನ್ನು 1956ರಲ್ಲಿ ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಯಿತು. ಆದ್ದರಿಂದ ಈ ದಿನ ರಾಜ್ಯೋತ್ಸವದ ಜೊತೆ ಅವರು ಮುಖ್ಯಮಂತ್ರಿಯಾದ ಸುದಿನವೂ ಹೌದು ಎಂದು ಶ್ರೀರಾಮಲು ಸ್ಮರಿಸಿದರು.