ಬೆಂಗಳೂರು (ನ.02):  ಒಂದು ವೇಳೆ ಬಿ.ಎಸ್‌.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ಆ ಸ್ಥಾನಕ್ಕೆ ಸಮುದಾಯದ ಮತ್ತೊಬ್ಬ ಗಟ್ಟಿನಾಯಕರನ್ನೇ ಬಿಜೆಪಿ ಹೈಕಮಾಂಡ್‌ ಪರಿಗಣಿಸಬೇಕು ಎಂಬ ಅಭಿಪ್ರಾಯ ಲಿಂಗಾಯತ ಸಮುದಾಯದಿಂದ ಬಲವಾಗಿ ಕೇಳಿಬಂದಿದೆ.

"

 ನಗರದಲ್ಲಿ ಲಿಂಗಾಯತ-ವೀರಶೈವ ಸಮನ್ವಯ ವೇದಿಕೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ.

ಬರುವ ಡಿಸೆಂಬರ್‌ನಲ್ಲಿ ಬಿಜೆಪಿಯಲ್ಲಿ ಭಾರಿ ಬದಲಾವಣೆ ಆಗಲಿವೆ ಎಂಬ ಸುದ್ದಿ ಇದೆ. ಅದು ನಿಜವೇ ಆದಲ್ಲಿ ಮುಂದಿನ ನಾಯಕರು ನಮ್ಮ ಸಮುದಾಯದ ಉತ್ತಮ ನಾಯಕನೇ ಆಗಬೇಕು ಎಂದು ಬಿಜೆಪಿ ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಕಾಂಗ್ರೆಸ್‌ ಪಕ್ಷದಿಂದ ಒಡೆದು ಆಳುವ ಕೆಲಸ: ಮುನಿರತ್ನ ..

ಲಿಂಗಾಯತ-ವೀರಶೈವ ರಾಜಕಾರಣಿಗಳು ವಂಶಪಾರಂಪರ್ಯ ಹಿನ್ನೆಲೆ ಹೊಂದಿದ್ದರೆ ಅಥವಾ ಕಳಂಕಿತರಾಗಿದ್ದರೆ ಅಂತಹವರನ್ನು ಸಮುದಾಯದವರು ಗಟ್ಟಿಯಾಗಿ ವಿರೋಧಿಸಬೇಕು. ಯಾವುದೇ ಕಾರಣಕ್ಕೂ ಬಸವಣ್ಣನವರ ತತ್ವಕ್ಕೆ ಅಪಚಾರವಾಗಲು ಬಿಡಬಾರದು ಎಂಬ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸಿದರು.

ವೀರಶೈವ-ಲಿಂಗಾಯತರಲ್ಲಿ ಬಣಗಳಿದ್ದರೆ ಮೂರನೆಯವರು ದುರ್ಲಾಭ ಪಡೆಯುತ್ತಾರೆ. ಇವತ್ತು ನಮ್ಮ ನಾಯಕರಲ್ಲಿ ಮೌಲ್ಯಗಳು ಕುಸಿದಿವೆ. ಹೀಗಾಗಲು ನಾವು ಬಿಡಬಾರದು. ಲಿಂಗಾಯತ-ವೀರಶೈವ ಬಣಗಳ ಕಚ್ಚಾಟವನ್ನು ನಿಲ್ಲಿಸಿ ಒಂದಾಗಿ ಸಮುದಾಯದ ಏಳ್ಗೆಗೆ ಶ್ರಮಿಸಬೇಕು ಎಂಬ ನಿಲವಿಗೆ ಬರಲಾಯಿತು ಎಂದು ತಿಳಿದು ಬಂದಿದೆ.

ಇದು ಯಾರದೇ ಪ್ರಾಯೋಜಿತ ಸಭೆ ಅಲ್ಲ. ಇವತ್ತು ಎಲ್ಲರೂ ಮೀಸಲಾತಿ ಬೇಕು ಎಂದು ರಸ್ತೆಗೆ ಇಳಿದಿದ್ದಾರೆ. ಹೀಗಿರುವಾಗ ಸಮುದಾಯ ಕೈಕಟ್ಟಿಕೂರಲು ಸಾಧ್ಯವಿಲ್ಲ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಸಮುದಾಯವನ್ನು ಒಡೆದು ಎಂ.ಬಿ. ಪಾಟೀಲರನ್ನು ಹರಕೆಯ ಕುರಿ ಮಾಡಿದ್ದಾರೆ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂಬ ಮಾತು ಸಭೆಯಲ್ಲಿ ಪ್ರಸ್ತಾಪವಾಯಿತು.

ಲಿಂಗಾಯತ-ವೀರಶೈವ ಬಣಗಳು ಒಟ್ಟಾಗಿ ಸಂಘಟನೆಯಾದರೆ ಮಾತ್ರ ನಮ್ಮ ನಾಯಕ ಬೆಳೆಯಬಲ್ಲ. ಈ ದಿಸೆಯಲ್ಲಿ ಶೀಘ್ರವೇ ಲಿಂಗಾಯತ-ವೀರಶೈವ ಸಮನ್ವಯ ವೇದಿಕೆ ವತಿಯಿಂದ ಬೆಂಗಳೂರಿನಲ್ಲಿ ಗುರು-ವಿರಕ್ತ ಸ್ವಾಮೀಜಿಗಳ ಮತ್ತು ಪ್ರಮುಖರ ಸಭೆ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.

ನಿವೃತ್ತ ಹೈಕೋರ್ಟ್‌ ನ್ಯಾಯಮೂರ್ತಿ ಅಶೋಕ ಬಿ.ಹಿಂಚಿಗೇರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹೈಕೋರ್ಟಿನ ಹಿರಿಯ ವಕೀಲರಾದ ಗಂಗಾಧರ ಗುರುಮಠ, ಎಚ್‌.ಎಸ್‌.ಚಂದ್ರಮೌಳಿ, ಲೆಕ್ಕ ಪರಿಶೋಧಕ ಡಾ.ಗಿರೀಶ್‌ ಕೆ.ನಾಶಿ, ಸಾಹಿತಿ-ಆರ್ಥಿಕ ತಜ್ಞ ಡಾ.ಜಿ.ಎನ್‌.ಮಲ್ಲಿಕಾರ್ಜುನಪ್ಪ, ಹಾಲನೂರು ಲೇಪಾಕ್ಷಿ, ಜಿ.ಪಂ.ಸದಸ್ಯ ತೇಜಸ್ವಿ ಪಟೇಲ್‌, ರೈತ ಸಂಘದ ಮಲ್ಲೇಶ, ಎಂ.ಟಿ.ಸುಭಾಶ್ಚಂದ್ರ ಪಾಲ್ಗೊಂಡಿದ್ದರು.