ಕಾರವಾರ(ಅ.28): ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿಕೆ ವೈಯಕ್ತಿಕ. ಮುಂದಿನ 3 ವರ್ಷ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಅವಧಿ ಪೂರೈಸುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದ್ದಾರೆ.  

ನಗರಕ್ಕೆ ಮಂಗಳವಾರ ಆಗಮಿಸಿದ್ದ ವೇಳೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಪಕ್ಷದ ಮುಖಂಡರು ಯತ್ನಾಳ್‌ ಹೇಳಿಕೆ ಬಗ್ಗೆ ಈಗಾಗಲೇ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಅದಕ್ಕೆ ತಾವೂ ಧ್ವನಿಗೂಡಿಸುತ್ತೇವೆ. ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಯಡಿಯೂರಪ್ಪ ಅವರೇ ನಮ್ಮ ನಾಯಕರು. ಅವರೇ ಮುಖ್ಯಮಂತ್ರಿಯಾಗಿ ಇರುತ್ತಾರೆ ಎಂದು ತಿಳಿಸಿದರು.

'ವಾಗ್ದಾನ ಮರೆತು ಭ್ರಷ್ಟಾಚಾರದಲ್ಲಿ ತೊಡಗಿದ ಮೋದಿ ಸರ್ಕಾರ'

ವಿಧಾನಪರಿಷತ್‌ ಚುನಾವಣೆ ಅಂತಿಮ ಘಟ್ಟದಲ್ಲಿ ಇದ್ದೇವೆ. ಜಿಲ್ಲೆಯ ಎಲ್ಲ ಕಡೆ ಉತ್ತಮ ವಾತಾವರಣವಿದೆ. ಹಾವೇರಿ, ಗದಗ, ಹುಬ್ಬಳ್ಳಿ ಧಾರವಾಡ ಓಡಾಡಿದ್ದೇನೆ. ಕಳೆದ 6 ವರ್ಷಗಳ ಸಾಧನೆ ಹಾಗೂ ಸಜ್ಜನ ರಾಜಕಾರಣ ಸಂಕನೂರ ಗೆಲುವಿಗೆ ಕಾರಣವಾಗುತ್ತದೆ. ರಾಜ್ಯದಲ್ಲಿ ನಡೆಯುತ್ತಿರುವ ವಿಧಾನ ಪರಿಷತ್‌ ಹಾಗೂ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೆಡಿಸಿಸಿ ಬ್ಯಾಂಕ್‌ ಪ್ರತಿಷ್ಠಿತ ಆರ್ಥಿಕ ಸಂಸ್ಥೆಯಾಗಿದೆ. 101 ವರ್ಷವಾಗಿದೆ. ಇಲ್ಲಿ ಪಕ್ಷದ ರಾಜಕಾರಣ ಯಾವತ್ತೂ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ. ಸಹಕಾರಿ ತತ್ವದ ಆಧಾರದ ಮೇಲೆ ಯಾವುದೇ ಪಕ್ಷದಲ್ಲಿ ಉತ್ತಮ ಸಹಕಾರಿ ಧುರಿಣರಿದ್ದರೂ ಅವರನ್ನು ಜತೆಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಕೆಲವು ದಿನದ ಹಿಂದೆ ನಡೆದ ಸಭೆಯಲ್ಲಿ ಕ್ಯಾಂಪ್ಕೊ ಅಧ್ಯಕ್ಷರನ್ನು ಒಳಗೊಂಡು ಕಾಂಗ್ರೆಸ್‌ ಮುಖಂಡರು ಇದ್ದರು. ಉತ್ತಮ ಸಹಕಾರಿಗಳ ತಂಡ ಆಗಬೇಕು ಎನ್ನುವುದು ತಮ್ಮ ಉದ್ದೇಶವಾಗಿದೆ. ಕೃಷಿ, ಮೀನುಗಾರಿಕೆ ಕ್ಷೇತ್ರದ ಬಲವರ್ಧನೆ, ಯುವಕರಿಗೆ ಸ್ವಯಂ ಉದ್ಯೋಗಕ್ಕೆ ಪ್ರೇರಣೆ ಇತ್ಯಾದಿ ಸಾಮಾಜಿಕ ಕೆಲಸ ಇನ್ನಷ್ಟು ಹೆಚ್ಚು ಈ ಬ್ಯಾಂಕ್‌ ಮೂಲಕ ಮಾಡಬೇಕಿದೆ ಎಂದರು.