ಕಾರವಾರ: ಏರ್‌ಪೋರ್ಟ್‌ಗೆ ಭೂಮಿ ಕಳೆದುಕೊಳ್ಳುವ ಆತಂಕವಿಲ್ಲ, ಸಚಿವ ಹೆಬ್ಬಾರ

*  ಭೂಮಿ ಕಳೆದುಕೊಳ್ಳುವವರ ಪರಿಸ್ಥಿತಿಯ ಅರಿವು ನಮಗಿದೆ
*  ಅಲಗೇರಿಯಲ್ಲಿ ನಿರ್ಮಾಣವಾಗುತ್ತಿರುವ ನಾಗರಿಕ ವಿಮಾನ ನಿಲ್ದಾಣ
*  ನಿರಾಶ್ರಿತರು ಯಾವುದೇ ಅನುಮಾನಪಡಬೇಕಾದ ಅವಶ್ಯಕತೆಯಿಲ್ಲ  
 

Minister Shivaram Hebbar Talks Over Airport in Uttara Kannada grg

ಅಂಕೋಲಾ(ಸೆ.29): ಅಲಗೇರಿಯಲ್ಲಿ ನಿರ್ಮಾಣ ಮಾಡುತ್ತಿರುವ ನಾಗರಿಕ ವಿಮಾನ(AirPort) ನಿಲ್ದಾಣಕ್ಕೆ ಭೂಮಿ ಕಳೆದುಕೊಳ್ಳುವವರ ಪರಿಸ್ಥಿತಿ ನನಗೆ ಅರಿವಿದೆ. ಈ ಸರ್ಕಾರ ಸಂಪೂರ್ಣ ಅಲಗೇರಿ ಗ್ರಾಮದ ನಾಗರಿಕರ ಜೊತೆ ಇದೆ, ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ(Shivaram Hebbar) ಹೇಳಿದ್ದಾರೆ. 

ಅವರು ನಾಡವರ ಸಭಾಭವನದಲ್ಲಿ ವಿಮಾನ ನಿಲ್ದಾಣಕ್ಕಾಗಿ ಭೂಸ್ವಾಧೀನವಾಗುವ ಗ್ರಾಮಸ್ಥರ ಅಹವಾಲು ಸಭೆಯನ್ನುದ್ದೇಶಿಸಿ ಮಾತನಾಡಿ, ಈ ಹಿಂದೆ ನೌಕಾನೆಲೆ ಪರಿಹಾರ ನೀಡಿದ ಹಾಗೆ ಇಂದಿನ ಪರಿಹಾರ ಕಾರ್ಯ ನಡೆಯುವುದಿಲ್ಲ. 2013ರ ಕಾನೂನಿನಡಿಯಲ್ಲಿ ಯಾವ ರೀತಿ ಇದೆ ಅದರನ್ವಯ ನಡೆಸಲಾಗುವುದು.

ನಿರಾಶ್ರಿತರು ಯಾವುದೇ ಅನುಮಾನಪಡಬೇಕಾದ ಅವಶ್ಯಕತೆಯಿಲ್ಲ ನಿಮ್ಮ ಜೊತೆ ನಾವಿದ್ದೇವೆ. ಸರ್ಕಾರದಿಂದ ನಿರಾಶ್ರಿತರಿಗೆ ಏನೆಲ್ಲ ಪರಿಹಾರದ ಸೌಲಭ್ಯಗಳು ಸಿಗಬೇಕೋ ಅವೆಲ್ಲವನ್ನೂ ಸಿಗುವಂತೆ ಮಾಡುತ್ತೇವೆ. ಅದಕ್ಕಾಗಿಯೇ ವಿಶೇಷ ಸಮಿತಿ ಮಾಡಲಾಗಿದೆ. ಜನರ ವಿಶ್ವಾಸ ಪಡೆದುಕೊಂಡೇ ನಾವು ಮುಂದಿನ ಕ್ರಮ ಕೈಗೊಳ್ಳುತ್ತೇವೆ.

ಶಾಸಕರ ಲೋನ್‌: ಬ್ಯಾಂಕ್‌ ಸಾಲಗಾರರ ಮಾಹಿತಿ ಬಹಿರಂಗ, ಹೆಬ್ಬಾರ್‌ ಪ್ರತಿಕ್ರಿಯೆ

ಖುರ್ಚಿ ಶಾಶ್ವತವಲ್ಲ, ಅದರಲ್ಲಿದ್ದ ಮೇಲೆ ಜನರಿಗೆ ಸಹಾಯ ಮಾಡುವುದೇ ನಮ್ಮ ಕೆಲಸ. ಅದನ್ನು ಬಿಟ್ಟು ಜನರು ನಮ್ಮ ಬಗ್ಗೆ ಆಡಿಕೊಳ್ಳುವ ಹಾಗೆ ಕೆಲಸ ಮಾಡುವುದಿಲ್ಲ. ಭವಿಷ್ಯದಲ್ಲಿ ಮತ್ತೆ ಅಲಗೇರಿ ಗ್ರಾಮಕ್ಕೆ ಬಂದು ಎಲ್ಲರೊಂದಿಗೆ ಮಾತನಾಡಿ ಸಾರ್ವಜನಿಕರಲ್ಲಿರುವ ಗೊಂದಲಗಳನ್ನು ಸರಿಪಡಲಾಗುವುದು. ಯಾರು ಈ ದೇಶಕ್ಕಾಗಿ, ಸಮಾಜಕ್ಕಾಗಿ ತ್ಯಾಗ ಮಾಡಿದ್ದಾರೋ ಅವರ ಬದುಕಿಗೆ ರಕ್ಷಣೆ ಕೊಡುವುದು ನಮ್ಮ ಮತ್ತು ಸರ್ಕಾರದ ಜವಾಬ್ದಾರಿ ಎಂದರು.

ಶಾಸಕಿ ರೂಪಾಲಿ ನಾಯ್ಕ(Rupali Naik) ಮಾತನಾಡಿ, ಈಗಾಗಲೇ ನಾನು ಎರಡು ಬಾರಿ ನಿರಾಶ್ರಿತಳು. ನಿರಾಶ್ರಿತರ ಗೋಳು ಏನು? ಎನ್ನುವುದು ನನಗೆ ಅರಿವಿದೆ. ಯಾವುದೇ ಕಾರಣಕ್ಕೂ ಅಲಗೇರಿ ವಿಮಾನ ನಿಲ್ದಾಣ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಯಾರಿಗೂ ಅನ್ಯಾಯವಾಗದಂತೆ ಇಲ್ಲಿರುವ ಸಮಸ್ಯೆಯನ್ನು ಬಗೆಹರಿಸಲಾಗುವುದು. ಅಲಗೇರಿ ಗ್ರಾಮದಲ್ಲಿಯೇ ನಿರಾಶ್ರಿತರಿಗೆ ಉತ್ತಮ ಭೂಮಿ ನೀಡಲು ಸೂಚನೆ ನೀಡಲಾಗಿದೆ. ಪರಿಹಾರದಲ್ಲಿಯೂ ಈ ಹಿಂದಿನ ಹಾಗೆ ಆಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇಲ್ಲಿ ವಿಮಾನ ನಿಲ್ದಾಣವಾದರೆ ಉದ್ಯೋಗ ಸೃಷ್ಟಿಯಾಗುವುದರ ಜೊತೆಗೆ ಸ್ಥಳೀಯ ವಿದ್ಯಾವಂತರಿಗೂ ಇಲ್ಲಿಯೆ ಉದ್ಯೋಗ ನೀಡಲು ಕಾರವಾರಕ್ಕೆ ಆಗಮಿಸಿದ ಕೆಂದ್ರ ಸಚಿವ ರಾಜನಾಥ ಸಿಂಗ್‌ ಬಳಿ ಮನವಿ ಮಾಡಿದ್ದೇನೆ. ನಾನು ಅಲಗೇರಿಗೆ ಬರದಿದ್ದರೂ ಸರ್ಕಾರದ ಮಟ್ಟದಲ್ಲಿ ಏನೇನು ಆಗಬೇಕೊ ಅದನ್ನು ಮಾಡುತ್ತಿದ್ದೇನೆ. ನನ್ನ ಕ್ಷೇತ್ರದ ಜನರನ್ನು ನಾನು ಯಾವತ್ತೂ ಕೈ ಬೀಡುವುದಿಲ್ಲ ಎಂದರು.

ಜಿಲ್ಲಾಧಿಕಾರಿ ಮುಲೈ ಮುಗಿಲನ್‌, ಅಪರ ಜಿಲ್ಲಾಧಿಕಾರಿ ಎಚ್‌. ಕೃಷ್ಣಮೂರ್ತಿ, ಸಿಇಒ ಪ್ರಿಯಾಂಗ ಎಸ್‌. ಸಹಾಯಕ ಆಯುಕ್ತ ರಾಹುಲ ಪಾಂಡೆ, ಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ತಾಲೂಕು ದಂಡಾಧಿಕಾರಿ ಉದಯ ಕುಂಬಾರ, ತಾಪಂ ಇಒ ಪಿ.ವೈ. ಸಾವಂತ ಉಪಸ್ಥಿತರಿದ್ದು ನಿರಾಶ್ರಿತರ ಅಹವಾಲನ್ನು ಆಲಿಸಿದರು.

ಸುರೇಶ ನಾಯಕ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸಭೆಗೆ ಆಗಮಿಸಿದ ಅಲಗೇರಿ, ಬೇಲೇಕೆರಿ, ಬಾವಿಕೇರಿ ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಸಚಿವರ ಶಾಸಕರ ಮತ್ತು ಅಧಿಕಾರಿಗಳ ಎದುರು ಹೇಳಿಕೊಂಡರು.
 

Latest Videos
Follow Us:
Download App:
  • android
  • ios