ಶಾಸಕರ ಲೋನ್: ಬ್ಯಾಂಕ್ ಸಾಲಗಾರರ ಮಾಹಿತಿ ಬಹಿರಂಗ, ಹೆಬ್ಬಾರ್ ಪ್ರತಿಕ್ರಿಯೆ
* ಇ ಶ್ರಮ ಕಾನೂನು ರಾಜ್ಯದಲ್ಲಿ ಸಮರ್ಪಕವಾಗಿ ಜಾರಿ
* ಬೆಲೆ ಏರಿಕೆ ನಿಯಂತ್ರಣಕ್ಕೆ ಸರ್ಕಾರ ಸೂಕ್ತ ಕ್ರಮ
* ಡಿಸಿಸಿ ಬ್ಯಾಂಕ್‌ಗಳಲ್ಲಿ ಸಾಲ ಹೊಂದಿರುವ ಶಾಸಕರು
ಶಿರಸಿ(ಸೆ.26): ಡಿಸಿಸಿ ಬ್ಯಾಂಕ್‌ಗಳಲ್ಲಿ ಶಾಸಕರು ಸಾಲ ಪಡೆಯಬಾರದು ಎಂದೇನೂ ಇಲ್ಲ. ಆದರೆ, ಸಾಲಗಾರರ ಮಾಹಿತಿಯನ್ನು ಬ್ಯಾಂಕ್ ನಿಯಮಾವಳಿಯಂತೆ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್(Shivaram Hebbar) ಹೇಳಿದ್ದಾರೆ.
ಡಿಸಿಸಿ ಬ್ಯಾಂಕ್‌ಗಳಲ್ಲಿ ಶಾಸಕರೂ ಸಾಲ ಹೊಂದಿದ್ದಾರೆ ಎಂಬ ಸಹಕಾರ ಸಚಿವ ಸೋಮಶೇಖರ ಅವರ ಹೇಳಿಕೆ ಕುರಿತು ಮಾಧ್ಯಮದ ಪ್ರಶ್ನೆಗೆ ನಗರದಲ್ಲಿ ಶನಿವಾರ ಉತ್ತರಿಸಿದ ಅವರು, ಸೋಮಶೇಖರ ಅವರು ಯಾವ ಅರ್ಥದಲ್ಲಿ, ಯಾವ ಸಂದರ್ಭದಲ್ಲಿ ಹೇಳಿದ್ದಾರೆ ಎಂಬುದು ತಿಳಿದಿಲ್ಲ ಎಂದರು.
ಬೆಲೆ ಏರಿಕೆ ಆಗಿದೆ ಎಂಬ ಕಾರಣಕ್ಕೆ ಕಾಂಗ್ರೆಸ್(Congress) ಪ್ರತಿಭಟನೆ ನಡೆಸಿದೆ. ವಿರೋಧ ಪಕ್ಷವಾಗಿ ಅವರು ಅವರ ಕಾರ್ಯ ಮಾಡಿದ್ದಾರೆ. ಆದರೆ, ಬೆಲೆ ಏರಿಕೆಯ ಕಾರಣಗಳ ಕುರಿತು ಸದನದಲ್ಲಿ ಹಲವಾರು ಬಾರಿ ಚರ್ಚೆ ನಡೆಸಿದ್ದೇವೆ. ಬೆಲೆ ಏರಿಕೆಗೆ ಹಲವು ಆಯಾಮಗಳೂ ಇವೆ. ಬೆಲೆ ಏರಿಕೆ ನಿಯಂತ್ರಣಕ್ಕೆ ಸರ್ಕಾರ ಸೂಕ್ತ ಕ್ರಮ ವಹಿಸಲಿದೆ ಎಂದರು.
ಕಾರ್ಮಿಕರ ಕಲ್ಯಾಣಕ್ಕಾಗಿ ಶಿವರಾಂ ಹೆಬ್ಬಾರರ ದಿಟ್ಟ ಹೆಜ್ಜೆ, ಇಲಾಖೆಗೆ ಸಿಕ್ತು ಹೈಟೆಕ್ ಸ್ಪರ್ಶ..!
ಡಿ.ಕೆ. ಶಿವಕುಮಾರ ಬಿಜೆಪಿ(BJP) 20 ಶಾಸಕರನ್ನು ಕಾಂಗ್ರೆಸ್‌ಗೆ ಸೇರ್ಪಡೆಗೊಳಿಸುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಇದೇ ವೇಳೆ ಕಟೀಲ್ ಅವರೂ 20 ಶಾಸಕರನ್ನು ಬಿಜೆಪಿಗೆ ಸೆಳೆಯುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಯಾವುದು ಸತ್ಯ, ಯಾವುದು ಸುಳ್ಳು ಎಂಬುದು ಗೊತ್ತಾಗಲಿದೆ ಎಂದರು.
ದೇವಸ್ಥಾನಗಳ ತೆರವಿಗೆ ಸಂಬಂಧಪಟ್ಟು ನಂಜನಗೂಡಿನಲ್ಲಿ ನಡೆದ ಘಟನೆಗಳು ಮನಸ್ಸಿಗೆ ಸಮಾಧಾನ ತಂದಿಲ್ಲ. ಕೇವಲ ದೇವಸ್ಥಾನ ಎಂದಲ್ಲ, ಧಾರ್ಮಿಕ ಕೇಂದ್ರಗಳ ಕುರಿತು ಆ್ಯಕ್ಟ್ ತಂದಿದ್ದೇವೆ ಎಂದರು.
ಕಾರ್ಮಿಕ ಅದಾಲತ್‌ನ್ನು ರಾಜ್ಯದ ಎಲ್ಲ ಕಡೆ ಒಂದು ತಿಂಗಳ ಕಾಲ ನಡೆಸಿದ್ದೇವೆ. 3.50 ಲಕ್ಷ ಕಾರ್ಮಿಕರ ಸಮಸ್ಯೆಯನ್ನು ನಾವು ಆಲಿಸಿದ್ದೇವೆ. ಸಹಾಯಧನ, ವಿದ್ಯಾರ್ಥಿ ಸಹಾಯಧನ, ನಿವೃತ್ತಿ ವೇತನ ಇನ್ನಿತರ ಸಮಸ್ಯೆಗಳನ್ನು ಆಲಿಸಿದ್ದೇವೆ. ಇವುಗಳಲ್ಲಿ 2.45 ಲಕ್ಷ ಪ್ರಕರಣಗಳನ್ನು ಇತ್ಯರ್ಥಗೊಳಿಸಿದ್ದೇವೆ. ಕಾರ್ಮಿಕ ಇಲಾಖೆಯಲ್ಲಿ ಪಾರದರ್ಶಕತೆಯನ್ನು ತಂದು ಸುಮಾರು 1 ಕೋಟಿ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾಮಾಡಿದ್ದೇವೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಸಹ ಕಾರ್ಮಿಕ ಇಲಾಖೆ ಸಂಬಂಧಿಸಿದ ಎಲ್ಲ ಕಡತಗಳನ್ನೂ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ ಎಂದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಇ ಶ್ರಮ ಕಾನೂನನ್ನು ರಾಜ್ಯದಲ್ಲಿ ಸಮರ್ಪಕವಾಗಿ ಜಾರಿಗೊಳಿಸಲಾಗುವುದು ಎಂದರು. ಕೆಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮೋಹನದಾಸ ನಾಯಕ, ನಿರ್ದೇಶಕರಾದ ಸುರೇಶ್ಚಂದ್ರ ಹೆಗಡೆ ಕೆಶಿನಮನೆ, ಆರ್.ಎಂ. ಹೆಗಡೆ ಇತರರಿದ್ದರು.